ಕೇಂದ್ರ ಸರ್ಕಾರ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸುಧಾರಣೆಗಳ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಟಿಕೆಟ್‌ಗಳು ಮತ್ತಷ್ಟು ದುಬಾರಿಯಾಗಲಿವೆ. ನಗದು ಸಮೃದ್ಧ ಲೀಗ್ ಅನ್ನು ತಂಬಾಕು ಉತ್ಪನ್ನಗಳು ಮತ್ತು ಬೆಟ್ಟಿಂಗ್ ಸೇವೆಗಳ ಜೊತೆಗೆ ಐಷಾರಾಮಿ ಚಟುವಟಿಕೆ ವಿಭಾಗದಲ್ಲಿ ಇರಿಸಲಾಗಿದೆ. ಇದರ ಪರಿಣಾಮವಾಗಿ ಟಿಕೆಟ್‌ಗಳು ದುಬಾರಿಯಾಗಲಿವೆ. ಐಪಿಎಲ್ ಆವೃತ್ತಿಯು ಸಾಮಾನ್ಯವಾಗಿ ಮಾರ್ಚ್‌ನಿಂದ ಮೇವರೆಗೆ ನಡೆಯಲಿದ್ದು, ದೇಶದಾದ್ಯಂತ 74 ಪಂದ್ಯಗಳನ್ನು ಆಡಲಾಗುತ್ತದೆ.
ಹಣಕಾಸು ಸಚಿವಾಲಯದ ಜಿಎಸ್‌ಟಿ ಸುಧಾರಣೆಗಳ ಪ್ರಕಾರ, ಸರ್ಕಾರವು ಐಪಿಎಲ್ ಟಿಕೆಟ್‌ಗಳಿಗೆ ಜಿಎಸ್‌ಟಿಯನ್ನು ಶೇ 28 ರಿಂದ 40ಕ್ಕೆ ಹೆಚ್ಚಿಸಿದೆ. ಇತರ ಕ್ರಿಕೆಟ್ ಪಂದ್ಯಗಳಿಗೆ ಜಿಎಸ್‌ಟಿ ದರವು ಈ ಹಿಂದಿನ ಶೇ 18 ರಷ್ಟನ್ನೇ ಉಳಿಸಿಕೊಳ್ಳಲಾಗಿದೆ ಎಂದು ಗಮನಿಸುವುದು ಸೂಕ್ತವಾಗಿದೆ. ಈ ಸುಧಾರಣೆಯು ಐಪಿಎಲ್ ಮೇಲೆ ಮಾತ್ರ ಪರಿಣಾಮ ಬೀರುತ್ತದೆ.
ಅಭಿಮಾನಿಗಳು ಈಗ ತಮ್ಮ ನೆಚ್ಚಿನ ತಂಡಗಳ ಪಂದ್ಯಗಳನ್ನು ವೀಕ್ಷಿಸಲು ವಿವಿಧ ಸ್ಥಳಗಳಲ್ಲಿನ ಪ್ರತ್ಯೇಕ ಬೆಲೆ ಮತ್ತು ಆನ್‌ಲೈನ್ ಬುಕಿಂಗ್ ಶುಲ್ಕಗಳ ಜೊತೆಗೆ ಐಪಿಎಲ್ ಟಿಕೆಟ್‌ಗಳ ಮೇಲಿನ ಹೆಚ್ಚಿದ ಜಿಎಸ್‌ಟಿ ದರವನ್ನು ಪರಿಗಣಿಸಬೇಕಾಗುತ್ತದೆ. ಈಗಾಗಲೇ ಯದ್ವಾ ತದ್ವಾ ಬೆಲೆ ಏರಿಕೆ ಮಾಡಿ ಟಿಕೆಟ್ ಮಾರಾಟ ಮಾಡಲಾಗುತ್ತಿದ್ದು, ಅಭಿಮಾನಿಗಳಿಗೆ ಇದು ಇನ್ನಷ್ಟು ಹೊರೆಯಾಗಿ ಪರಿಣಮಿಸಲಿದೆ.
ಈ ಹಿಂದೆ, ಐಪಿಎಲ್ ಟಿಕೆಟ್‌ನ ಬೆಲೆ 1000 ರೂ. ಆಗಿದ್ದರೆ, ಅಭಿಮಾನಿಗಳು ಜಿಎಸ್‌ಟಿಯೊಂದಿಗೆ 1280 ರೂ. ಪಾವತಿಸಬೇಕಾಗಿತ್ತು. ಆದಾಗ್ಯೂ, ಈಗ 1000 ರೂ. ಮೌಲ್ಯದ ಟಿಕೆಟ್‌ಗೆ 1400 ರೂ. ಪಾವತಿಸಬೇಕಿದೆ. ಜಿಎಸ್‌ಟಿ ಸುಧಾರಣೆಗಳಿಂದಾಗಿ 120 ರೂ. ಏರಿಕೆಯಾಗಿದೆ. ಜಿಎಸ್‌ಟಿ ಹೆಚ್ಚಳವು 'ಕ್ಯಾಸಿನೋಗಳು, ರೇಸ್ ಕ್ಲಬ್‌ಗಳು, ಕ್ಯಾಸಿನೋಗಳು ಅಥವಾ ರೇಸ್ ಕ್ಲಬ್‌ಗಳನ್ನು ಹೊಂದಿರುವ ಯಾವುದೇ ಸ್ಥಳ ಅಥವಾ ಐಪಿಎಲ್‌ನಂತಹ ಕ್ರೀಡಾಕೂಟಗಳಿಗೆ ಅನ್ವಯಿಸುತ್ತದೆ.
2025ರ ಐಪಿಎಲ್ ಟಿಕೆಟ್‌ಗಳ ಬೆಲೆ
ಜನರಲ್ ಸ್ಟ್ಯಾಂಡ್‌ಗಳು: ₹500 – ₹3000
ಪ್ರೀಮಿಯಂ ಸ್ಟ್ಯಾಂಡ್‌ಗಳು: ₹2000 – ₹7,000
ಕಾರ್ಪೊರೇಟ್ ಬಾಕ್ಸ್‌ಗಳು: ₹6,000 – ₹13000
ವಿಐಪಿ ಮತ್ತು ಐಷಾರಾಮಿ ಸೂಟ್‌ಗಳು: ₹20,000 – ₹30,000+