ಏಷ್ಯಾಕಪ್‌ನಲ್ಲಿ ಭಾರತವನ್ನು ಎದುರಿಸುವ ಮೊದಲು, ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆ ನೀಡಿದರು. ಪಾಕಿಸ್ತಾನ ಏಷ್ಯಾಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಓಮನ್ ವಿರುದ್ಧ ಆಡಿದ್ದು 93 ರನ್‌ಗಳಿಂದ ಗೆಲುವು ಸಾಧಿಸಿತ್ತು.
ಓಮನ್ ವಿರುದ್ಧ ಮೊದಲು ಆಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 160 ರನ್‌ಗಳನ್ನು ಗಳಿಸಿತು. ಈ ಗುರಿ ಬೆನ್ನಟ್ಟಿದ ದುರ್ಬಲ ಓಮನ್ ತಂಡವು ಕೇವಲ 67 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯವನ್ನು ಗೆದ್ದ ನಂತರ, ಪಾಕಿಸ್ತಾನ ನಾಯಕ ಸಲ್ಮಾನ್ ಭಾರತದ ವಿರುದ್ಧದ ಪಂದ್ಯದಲ್ಲೂ ಉತ್ತಮವಾಗಿ ಆಡುತ್ತೇವೆ. ನಮ್ಮಲ್ಲಿ ಹೆಚ್ಚಿನ ಒತ್ತಡವಿಲ್ಲ. ತಮ್ಮ ತಂಡವು ಉತ್ತಮ ಫಾರ್ಮ್‌ನಲ್ಲಿದೆ ಮತ್ತು ಯಾರನ್ನೇ ಸೋಲಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿಕೊಂಡರು.
ಓಮನ್ ವಿರುದ್ಧದ ಗೆಲುವಿನ ನಂತರ ಮಾತನಾಡಿದ ಸಲ್ಮಾನ್ ಅಘಾ, ಕಳೆದ 2-3 ತಿಂಗಳುಗಳಿಂದ ನಾವು ನಿಜವಾಗಿಯೂ ಉತ್ತಮ ಕ್ರಿಕೆಟ್ ಆಡುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ. ನಾನು ಇದನ್ನು ಮತ್ತೆ ಮತ್ತೆ ಹೇಳುತ್ತಿದ್ದೇನೆ. ನಾವು ಇತ್ತೀಚೆಗೆ ತ್ರಿಕೋನ ಸರಣಿಯನ್ನು ಗೆದ್ದಿದ್ದೇವೆ. ಇಲ್ಲಿ ನಾವು ಓಮನ್ ವಿರುದ್ಧ ಚೆನ್ನಾಗಿ ಆಡಿದ್ದೇವೆ. ನಾವು ಉತ್ತಮ ಕ್ರಿಕೆಟ್ ಆಡಬೇಕು. ನಾವು ದೀರ್ಘಕಾಲದವರೆಗೆ ನಮ್ಮ ತಂತ್ರವನ್ನು ಕಾರ್ಯಗತಗೊಳಿಸಿದರೆ, ನಾವು ಯಾವುದೇ ತಂಡವನ್ನು ಸೋಲಿಸುವಷ್ಟು ಉತ್ತಮ ತಂಡ ಎಂದು ನಾನು ಭಾವಿಸುತ್ತೇನೆ ಎಂದರು.
ಈ ಪಂದ್ಯದಲ್ಲಿ ಪಾಕಿಸ್ತಾನ ಪರ 66 ರನ್‌ಗಳ ಇನ್ನಿಂಗ್ಸ್ ಆಡಿದ ಮೊಹಮ್ಮದ್ ಹ್ಯಾರಿಸ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಈ ಪ್ರಶಸ್ತಿಯನ್ನು ಗೆದ್ದ ನಂತರ, ತಂಡವು ನನ್ನಿಂದ ಏನು ಬೇಡುತ್ತದೋ ಅದನ್ನು ಮಾಡಲು ಪ್ರಯತ್ನಿಸುತ್ತೇನೆ ಎಂದು ಹ್ಯಾರಿಸ್ ಹೇಳಿದರು. ಮುಂದಿನ ಪಂದ್ಯದಲ್ಲಿ ನೀವು 10ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತೀರಿ ಎಂದು ನನಗೆ ಹೇಳಿದರೂ ನನಗೆ ಯಾವುದೇ ಸಮಸ್ಯೆ ಇಲ್ಲ. ಅವರ ಆಕ್ರಮಣಕಾರಿ ಬ್ಯಾಟಿಂಗ್ ಬಗ್ಗೆ, ನಾನು ಕಳೆದ 5-6 ವರ್ಷಗಳಿಂದ ಇದನ್ನು ಮಾಡುತ್ತಿದ್ದೇನೆ ಮತ್ತು ಇದು ನನ್ನ ಶಕ್ತಿ ಎಂದು ಅವರು ಹೇಳಿದರು.