ನವದೆಹಲಿ: ಆನ್‌ಲೈನ್ ಗೇಮ್ ಪ್ಲಾಟ್‌ಫಾರ್ಮ್ ಡ್ರೀಮ್ 11 ನಿರ್ಗಮಿಸಿದ ನಂತರ, ಭಾರತೀಯ ಕ್ರಿಕೆಟ್ ತಂಡದ ಹೊಸ ಜೆರ್ಸಿ ಪ್ರಾಯೋಜಕರಾಗಿ ಅಪೊಲೊ ಟೈರ್ಸ್ (Apollo Tyres) ಒಪ್ಪಂದ ಮಾಡಿಕೊಂಡಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಹೊಸ ಕಾನೂನಿನ ಅಡಿಯಲ್ಲಿ ರಿಯಲ್ ಹಣದ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಸರ್ಕಾರ ನಿಷೇಧಿಸಿದ ನಂತರ, ಡ್ರೀಮ್ 11 ಜೆರ್ಸಿ ಪ್ರಾಯೋಜಕತ್ವದಿಂದ ಹೊರನಡೆದಿತ್ತು. ಅದಾದ ಬಳಿಕ ಬಿಸಿಸಿಐ ಟೀಂ ಇಂಡಿಯಾಗೆ ಹೊಸ ಜೆರ್ಸಿ ಪ್ರಾಯೋಜಕತ್ವಕ್ಕೆ ಅರ್ಜಿ ಆಹ್ವಾನಿಸಿತ್ತು.
ತಂಡವು ಸದ್ಯ ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2025 ಪಂದ್ಯಾವಳಿಯಲ್ಲಿ ಜೆರ್ಸಿ ಪ್ರಾಯೋಜಕರಿಲ್ಲದೆ ಆಡುತ್ತಿದೆ.
'ಅಪೋಲೋ ಟೈರ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ನಾವು ಶೀಘ್ರದಲ್ಲೇ ಅದನ್ನು ಘೋಷಿಸುತ್ತೇವೆ' ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುದ್ದಿ ಸಂಸ್ಥೆ ANI ಜೊತೆ ಮಾತನಾಡಿದ್ದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಮಂಡಳಿ ಮತ್ತು ಡ್ರೀಮ್11 ನಡುವಿನ ಸಂಬಂಧವನ್ನು ಕೊನೆಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದರು.