ಅಬುದಾಬಿ: 2025ರ ಏಷ್ಯಾಕಪ್ ಟೂರ್ನಿಯ ಅಂತಿಮ ಗ್ರೂಪ್ ಸ್ಟೇಜ್ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಒಮನ್ ಗೆ ಗೆಲ್ಲಲು ಬೃಹತ್ ಗುರಿ ನೀಡಿದೆ.
ಅಬುದಾಬಿಯ ಶೇಕ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಅದರಂತೆ ಸಂಜು ಸ್ಯಾಮ್ಸನ್ (56 ರನ್) ಮತ್ತು ಅಭಿಷೇಕ್ ಶರ್ಮಾ (38 ರನ್) ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ನಿಗಧಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿ ಒಮನ್ ಗೆ ಗೆಲ್ಲಲು 189 ರನ್ ಗಳ ಬೃಹತ್ ಗುರಿ ನೀಡಿದೆ.
ಟೀಮ್ ಇಂಡಿಯಾ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ 41 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ ಅರ್ಧಶತಕ ಗಳಿಸಿದರು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 15 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 38 ರನ್ ಗಳಿಸಿ ಔಟಾದರು. ಶುಭ್ಮನ್ ಗಿಲ್ ಕೇವಲ 5 ರನ್‌ಗಳಿಗೆ ಶಾ ಫೈಸಲ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಒಮನ್ ಪರ ಶಾ ಫೈಸಲ್, ಜಿತೆನ್ ರಾಮನಂದಿ ಮತ್ತು ಅಮಿರ್ ಕಲೀಮ್ ತಲಾ 2 ವಿಕೆಟ್ ಪಡೆದರು.