ದುಬೈ: ಹಾಲಿ ಏಷ್ಯಾಕಪ್ 2025 ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಹ್ಯಾಂಡ್ ಶೇಕ್ ವಿವಾದ ಹಸಿರಾಗಿರುವಂತೆಯೇ ಮತ್ತೆ ಪಾಕ್ ತಂಡದ ಜೊತೆ ನೋ ಹ್ಯಾಂಡ್ ಶೇಕ್ ನೀತಿ ಪಾಲಿಸುತ್ತೀರಾ ಎಂಬ ಪತ್ರಕರ್ತನ ಪ್ರಶ್ನೆಗೆ ಟೀಂ ಇಂಡಿಯಾ ನಾಯಕ ಭರ್ಜರಿ ಉತ್ತರ ಕೊಟ್ಟಿದ್ದಾರೆ.
ಹೌದು.. ಭಾನುವಾರ ನಡೆಯಲಿರುವ ಏಷ್ಯಾ ಕಪ್ 2025 ಸೂಪರ್ 4 ಪಂದ್ಯದಲ್ಲಿ ಮತ್ತೆ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುತ್ತಿದ್ದು ಈ ಹಿಂದೆ ಪಾಕ್ ತಂಡ ಜೊತೆ ಹ್ಯಾಂಡ್ ಶೇಕ್ ಮಾಡದೇ ಸುದ್ದಿಗೆ ಗ್ರಾಸವಾಗಿದ್ದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಭಾರತೀಯ ಕ್ರಿಕೆಟ್ ತಂಡ ಮತ್ತೊಮ್ಮೆ ಗಮನ ಸೆಳೆಯುತ್ತಿದೆ.
ಕಳೆದ ವಾರ, ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಪಂದ್ಯದ ನಂತರ ಪಾಕಿಸ್ತಾನ ಆಟಗಾರರೊಂದಿಗೆ ಸಾಂಪ್ರದಾಯಿಕ ಹ್ಯಾಂಡ್‌ಶೇಕ್‌ಗಳನ್ನು ಮಾಡಲಿಲ್ಲ. ಇದು ದೊಡ್ಡ ವಾಗ್ವಾದಕ್ಕೆ ಕಾರಣವಾಗಿತ್ತು. ಈ ವಿವಾದದಿಂದ ಮುಜಗರಕ್ಕೀಡಾದ ಪಾಕಿಸ್ತಾನ ತಂಡವು ಏಷ್ಯಾಕಪ್ ಟೂರ್ನಿಯಿಂದಲೇ ಹೊರನಡೆಯುವ ಬೆದರಿಕೆ ಹಾಕುವಷ್ಟು ಪರಿಸ್ಥಿತಿ ನಿರ್ಮಾಣವಾಗಿತ್ತು.
ಭರ್ಜರಿ ಉತ್ತರ ನೀಡಿದ 'ಸೂರ್ಯ'
ಇದೀಗ ಭಾರತ ಮತ್ತೆ ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗುತ್ತಿದ್ದಂತೆ, ಸೂಪರ್ 4 ಪಂದ್ಯದಲ್ಲೂ ಭಾರತ 'ಅದೇ' ನೋ ಹ್ಯಾಂಡ್ ಶೇಕ್ ನೀತಿಯನ್ನು ಪುನರಾವರ್ತಿಸುತ್ತದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಇದೇ ವಿಚಾರವಾಗಿ ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಗೆ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದು, ಇದಕ್ಕೆ ಸೂರ್ಯ ಕುಮಾರ್ ಯಾದವ್ ಕೂಡ ಭರ್ಜರಿ ಉತ್ತರ ನೀಡಿದ್ದಾರೆ.
ಪತ್ರಕರ್ತ ಕೇಳಿದ್ದೇನು?
"ಪಾಕಿಸ್ತಾನ ವಿರುದ್ಧದ ಕೊನೆಯ ಪಂದ್ಯದಲ್ಲಿ, ಬ್ಯಾಟಿಂಗ್ ಹೊರತುಪಡಿಸಿ, ಉಳಿದ ಅಂಶಗಳಲ್ಲಿಯೂ ಭಾರತ ಉತ್ತಮವಾಗಿ ಕಾರ್ಯನಿರ್ವಹಿಸಿತು. ಮುಂದಿನ ಪಂದ್ಯದಲ್ಲಿ, ಭಾರತ ಹಿಂದಿನ ಪಂದ್ಯದಂತೆಯೇ ಮಾಡುತ್ತದೆ ಎಂದು ನಾವು ನಿರೀಕ್ಷಿಸಬಹುದೇ?" ಎಂದು ಕೇಳಿದರು.
ಸೂರ್ಯ ಭರ್ಜರಿ ಉತ್ತರ
ಈ ವೇಳೆ ಪತ್ರಕರ್ತನ ಪ್ರಶ್ನೆ ಅರ್ಥ ಮಾಡಿಕೊಂಡ ಸೂರ್ಯ ಕುಮಾರ್ ಯಾದವ್, "ಓಹ್, ನೀವು ಚೆಂಡಿನೊಂದಿಗೆ ಉತ್ತಮ ಪ್ರದರ್ಶನ ನೀಡಬೇಕೆಂದು ಹೇಳುತ್ತಿದ್ದೀರಾ? ಹೌದು, ಖಂಡಿತವಾಗಿಯೂ. ಬ್ಯಾಟ್ ಮತ್ತು ಚೆಂಡಿನೊಂದಿಗೆ ಉತ್ತಮ ಸಂಯೋಜನೆ ಇದೆ. ಕ್ರೀಡಾಂಗಣವು ಕಿಕ್ಕಿರಿದು ತುಂಬಿರುವಾಗ ಮತ್ತು ನಿಮಗೆ ಇಷ್ಟೊಂದು ದೊಡ್ಡ ಜನಸಮೂಹದಿಂದ ಬೆಂಬಲ ಸಿಕ್ಕಾಗ ಅದು ತುಂಬಾ ಚೆನ್ನಾಗಿ ಅನಿಸುತ್ತದೆ. ನಾವು ದೇಶಕ್ಕಾಗಿ ನಮ್ಮ ಅತ್ಯುತ್ತಮ ಪಾದಗಳನ್ನು ಮುಂದಿಡಲು ಮತ್ತು ಆಟದಲ್ಲಿ ನಮ್ಮ ಅತ್ಯುತ್ತಮ ಪ್ರಯತ್ನ ಮಾಡಲು ಬಯಸುತ್ತೇವೆ ಎಂದರು.
ಕ್ರೀಡಾ ಮನೋಭಾವಕ್ಕಿಂತ ದೇಶ, ದೇಶದ ಜನರು ಮುಖ್ಯ!
ಇದೇ ವೇಳೆ ಕ್ರೀಡಾ ಮನೋಭಾವದ ಕುರಿತು ಮಾತನಾಡಿದ ಸೂರ್ಯ ಕುಮಾರ್, "ನಮಗೆ, ಕ್ರೀಡಾ ಮನೋಭಾವಕ್ಕಿಂತ ನಮ್ಮ ರಾಷ್ಟ್ರ ಮತ್ತು ನಮ್ಮ ಜನರು ಮುಖ್ಯ' ಎಂದು ಹೇಳುವ ಮೂಲಕ ತಮ್ಮ ನೋ ಹ್ಯಾಂಡ್ ಶೇಕ್ ನೀತಿಯನ್ನು ನೇರವಾಗಿಯೇ ಸಮರ್ಥಿಸಿಕೊಂಡರು.