ದುಬೈ: ದುಬೈ ಮೈದಾನದಲ್ಲೇ ಭಾರತ ಪಾಕಿಸ್ತಾನ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ನಡೆದಿದೆ.
ಇಂದು ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ಪಾಕಿಸ್ತಾನ ತಂಡವನ್ನು 6 ವಿಕೆಟ್ ಅಂತರದಲ್ಲಿ ಭರ್ಜರಿಯಾಗಿ ಮಣಿಸಿತು.
ಭಾರತದ ಚೇಸಿಂಗ್ ವೇಳೆ ಭರ್ಜರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದ ಅಭಿಷೇಕ್ ಶರ್ಮಾ ಮತ್ತು ಶುಭ್ ಮನ್ ಗಿಲ್ ರನ್ನು ಪಾಕಿಸ್ತಾನ ವೇಗಿ ಹ್ಯಾರಿಸ್ ರೌಫ್ ಕೆಣಕಿದ್ದು, ಈ ವೇಳೆ ಅಭಿಷೇಕ್ ಶರ್ಮಾ ಖಾರವಾಗಿ ಉತ್ತರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಭಾರತ 55 ರನ್ ಗಳಿಸಿದ್ದ ವೇಳೆ ಹ್ಯಾರಿಸ್ ರೌಫ್ ಎಸೆದ 5ನೇ ಓವರ್ ನ ಅಂತಿಮ ಎಸೆತದಲ್ಲಿ ಶುಭ್ ಮನ್ ಗಿಲ್ ಬೌಂಡರಿ ಭಾರಿಸಿದರು.
ಈ ವೇಳೆ ಹ್ಯಾರಿಸ್ ರೌಫ್ ಗಿಲ್ ರನ್ನು ದಿಟ್ಟಿಸಿ ನೋಡುತ್ತಿದ್ದಾಗ ಮಧ್ಯಪ್ರವೇಶಿಸಿದ ಅಭಿಷೇಕ್ ಶರ್ಮಾ, ಹ್ಯಾರಿಸ್ ರೌಫ್ ಗೆ ಹೋಗಿ ನಿನ್ನ ಜಾಗದಲ್ಲಿ ಬೌಲ್ ಮಾಡು ಎಂದು ಸೂಚಿಸಿದರು.
ಈ ವೇಳೆ ಹ್ಯಾರಿಸ್ ರೌಫ್ ಕೂಡ ಕೋಪದಿಂದಲೇ ಉತ್ತರ ನೀಡಿದಾಗ ಮಧ್ಯ ಪ್ರವೇಶಿಸಿದ ಅಂಪೈರ್ ಗಳು ಎಲ್ಲ ಆಟಗಾರರನ್ನು ಸಮಾಧಾನ ಪಡಿಸಿದರು.
ಇಂತಹುದೇ ಪರಿಸ್ಥಿತಿ ಅಭಿಷೇಕ್ ಶರ್ಮಾ ಮತ್ತು ಶಾಹೀನ್ ಅಫ್ರಿದಿ ನಡುವೆಯೂ ಉದ್ಭವಾಗಿತ್ತು. ಶಾಹೀನ್ ಅಫ್ರಿದಿ ಬೌಲಿಂಗ್ ನಲ್ಲಿ ಅಭಿಷೇಕ್ ಶರ್ಮಾ ಬೌಂಡರಿ ಪಡೆದಾಗ ಶಾಹೀನ್ ಅಫ್ರಿದಿ ಅಭಿಶೇಕ್ ಶರ್ಮಾರನ್ನು ದಿಟ್ಟಿಸಿ ನೋಡಿದ್ದರು.