ದುಬೈ: ಏಷ್ಯಾಕಪ್ 2025 ಟೂರ್ನಿಯ ಸೂಪರ್ 4 ಹಂತದ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಪಾಕಿಸ್ತಾನದ ವಿರುದ್ಧದ ತಮ್ಮ ತಿರಸ್ಕಾರವನ್ನು ಮತ್ತೆ ಮುಂದುವರೆಸಿದ್ದಾರೆ.
ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಟಾಸ್ ಗೆದ್ದ ಬಳಿಕ ಸಂಪ್ರದಾಯದಂತೆ ಎದುರಾಳಿ ತಂಡದ ನಾಯಕ ಸಲ್ಮಾನ್ ಅಲಿ ಅಘಾ ನ ಜೊತೆ ಹಸ್ತಲಾಘವ ಮಾಡಬೇಕಿತ್ತು. ಆದರೆ ಸೂರ್ಯ ಕುಮಾರ್ ಯಾದವ್ ನೇರವಾಗಿ ನಿರೂಪಕ ರವಿಶಾಸ್ತ್ರಿ ಬಳಿ ಹೋಗಿ ಮಾತನಾಡಿದರು.
ತಂಡದಲ್ಲಿನ ಬದಲಾವಣೆ ಮತ್ತು ಪಿಚ್ ಕುರಿತು ಮಾತನಾಡಿದ ಸೂರ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು. ಬಳಿಕ ಡ್ರೆಸಿಂಗ್ ರೂಂಗೆ ಹೋಗುವಾಗಲೂ ಸೂರ್ಯ ಪಾಕ್ ನಾಯಕ ಸಲ್ಮಾನ್ ಅಘಾ ಅವರ ಮುಖ ಕೂಡ ನೋಡದೇ ಏನೋ ಕೆಳಗೆ ಬಿದ್ದಿರುವುದನ್ನು ಎತ್ತಿಕೊಂಡು ನೇರವಾಗಿ ಹೊರಟು ಹೋದರು.
ಇದೇ ಮೊದಲೇನಲ್ಲ
ಸೆಪ್ಟೆಂಬರ್ 14 ರಂದು ನಡೆದ ಪಂದ್ಯದ ವೇಳೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪಾಕ್ ನಾಯಕನೊಂದಿಗೆ ಶೇಕ್ ಹ್ಯಾಂಡ್ ಮಾಡಿರಲಿಲ್ಲ. ಅಷ್ಟೇ ಅಲ್ಲದೆ ಈ ಪಂದ್ಯದ ಬಳಿಕ ಟೀಮ್ ಇಂಡಿಯಾ ಆಟಗಾರರು ಕೂಡ ಪಾಕ್ ಆಟಗಾರರಿಗೆ ಹಸ್ತಲಾಘವ ನೀಡದೇ ಹೊರ ನಡೆದಿದ್ದರು.
ಈ ಅವಮಾನವನ್ನು ಮುಂದಿಟ್ಟು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಏಷ್ಯಾಕಪ್ ಟೂರ್ನಿಯಿಂದ ಹೊರನಡೆಯುವ ಬೆದರಿಕೆಯೊಡ್ಡಿತ್ತು. ಅಲ್ಲದೆ ಅಂದಿನ ಪಂದ್ಯದ ರೆಫರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಐಸಿಸಿಗೂ ಒತ್ತಡ ಹೇರಿತ್ತು. ಆದರೆ ಐಸಿಸಿ ಪಿಸಿಬಿ ಒತ್ತಡಕ್ಕೆ ಸೊಪ್ಪು ಹಾಕಿರಲಿಲ್ಲ.
ಇದೀಗ ಮತ್ತೊಮ್ಮೆ ಸೂರ್ಯಕುಮಾರ್ ಯಾದವ್ ಪಾಕಿಸ್ತಾನ್ ತಂಡದ ನಾಯಕನಿಗೆ ಶೇಕ್ ಹ್ಯಾಂಡ್ ನೀಡದೇ ಹೊರನಡೆದು ದಿಟ್ಟ ನಿಲುವು ಪ್ರದರ್ಶಿಸಿದ್ದಾರೆ.
ಕಾರಣ ಏನು?
ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕ್ ಪ್ರೇರಿತ ಉಗ್ರರು ನಡೆಸಿದ ಭಯೋತ್ಪಾದಕ ದಾಳಿಯಿಂದಾಗಿ 26 ಮಂದಿ ಸಾವನ್ನಪ್ಪಿದ್ದರು. ಈ ದಾಳಿ ಬಳಿಕ ಪಾಕಿಸ್ತಾನ ವಿರುದ್ಧ ಭಾರತೀಯ ಸೇನೆ ಆಪರೇಷನ್ ಸಿಂದೂರ್ ಸೇನಾ ಕಾರ್ಯಾಚರಣೆ ನಡೆಸಿತ್ತು. ದೇಶದ ಸೈನಿಕರಿಗೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ಮತ್ತು ಉಗ್ರದಾಳಿಯಲ್ಲಿ ಮೃತಪಟ್ಟ ಸಂತ್ರಸ್ಥರಿಗೆ ಸಂತಾಪ ಸೂಚಿಸುವ ನಿಟ್ಟಿನಲ್ಲಿ ಈ ದಾಳಿಯನ್ನು ಖಂಡಿಸಿ ಭಾರತೀಯ ಆಟಗಾರರು ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದಾರೆ.