ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಮತ್ತೆ ಮುಜುಗರಕ್ಕೀಡಾಗಿದ್ದು, ಭಾರತ ತಂಡ ಮತ್ತೆ ತನ್ನ No HandShake policy ಮುಂದುವರೆಸಿದೆ.
ಹೌದು.. ಇಂದು ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ಪಾಕಿಸ್ತಾನ ತಂಡವನ್ನು 6 ವಿಕೆಟ್ ಅಂತರದಲ್ಲಿ ಭರ್ಜರಿಯಾಗಿ ಮಣಿಸಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ (58 ರನ್) ಅರ್ಧಶತಕದ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 171ರನ್ ಪೇರಿಸಿ ಭಾರತಕ್ಕೆ ಗೆಲ್ಲಲು 172 ರನ್ ಗಳ ಸವಾಲಿನ ಗುರಿ ನೀಡಿತ್ತು.
ಈ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಭಾರತ ಅಭಿಶೇಕ್ ಶರ್ಮಾ (74) ಅರ್ಧಶತಕ ಮತ್ತು ಶುಭ್ ಮನ್ ಗಿಲ್ (47)ಅಮೋಘ ಜೊತೆಯಾಟದ ನೆರವಿನಿಂದ 18.5 ಓವರ್ ನಲ್ಲೇ ಕೇವಲ 4 ವಿಕೆಟ್ ಕಳೆದುಕೊಂಡು 174 ರನ್ ಪೇರಿಸಿ 6 ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿತು.
ಮತ್ತೆ ಹಸ್ತಾಲಾಘವ ಮಾಡದ ಭಾರತ ತಂಡ
ಇನ್ನು ಭಾರತದ ಗೆಲುವಿಗೆ 2ರನ್ ಅಗತ್ಯವಿದ್ದಾಗ 19ನೇ ಓವರ್ ನ ಅಂತಿಮ ಎಸೆತದಲ್ಲಿ ಶಾಹೀನ್ ಅಫ್ರಿದಿ ಎಸೆದ ಲೋ ಫುಲ್ ಟಾಸ್ ಎಸೆತವನ್ನು ತಿಲಕ್ ವರ್ಮಾ ಬೌಂಡರಿಗೆ ಅಟ್ಟಿದರು.
ಆ ಮೂಲಕ ಭಾರತ ಪಾಕ್ ವಿರುದ್ಧ ಭರ್ಜರಿ ಜಯ ದಾಖಲಿಸಿತು. ಅತ್ತ ತಂಡ ಗೆಲವು ದಾಖಲಿಸುತ್ತಲೇ ಕ್ರೀಸ್ ನಲ್ಲಿದ್ದ ಭಾರತದ ಬ್ಯಾಟರ್ ಗಳಾದ ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯಾ ಪರಸ್ಪರ ತಾವೇ ಹಸ್ತಲಾಘವ ಮಾಡಿಕೊಂಡು ತಬ್ಬಿಕೊಂಡು ಬಳಿಕ ನೇರವಾಗಿ ಭಾರತದ ಡ್ರೆಸಿಂಗ್ ರೂಂನತ್ತ ಹೆಜ್ಜೆ ಹಾಕಿದರು.
ಇತ್ತ ಪಾಕಿಸ್ತಾನ ಆಟಗಾರರು ಮಾತ್ರ ಇದು ನಿರೀಕ್ಷಿತ ಎಂಬಂತೆ ತಮಗೆ ತಾವು ಹಸ್ತಲಾಘವ ಮಾಡಿಕೊಂಡು ಪೆವಿಲಿಯನ್ ಸೇರಿಕೊಂಡರು.
ಕಳೆದ ವಾರ, ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಪಂದ್ಯದ ನಂತರ ಪಾಕಿಸ್ತಾನ ಆಟಗಾರರೊಂದಿಗೆ ಸಾಂಪ್ರದಾಯಿಕ ಹ್ಯಾಂಡ್‌ಶೇಕ್‌ಗಳನ್ನು ಮಾಡಲಿಲ್ಲ. ಇದು ದೊಡ್ಡ ವಾಗ್ವಾದಕ್ಕೆ ಕಾರಣವಾಗಿತ್ತು. ಈ ವಿವಾದದಿಂದ ಮುಜಗರಕ್ಕೀಡಾದ ಪಾಕಿಸ್ತಾನ ತಂಡವು ಏಷ್ಯಾಕಪ್ ಟೂರ್ನಿಯಿಂದಲೇ ಹೊರನಡೆಯುವ ಬೆದರಿಕೆ ಹಾಕುವಷ್ಟು ಪರಿಸ್ಥಿತಿ ನಿರ್ಮಾಣವಾಗಿತ್ತು.