ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಭಾರತದ ವಿರುದ್ಧದ ಪಂದ್ಯದಲ್ಲಿ ವಿವಾದಾತ್ಮಕ ಗನ್ ಫೈರ್ ಸಂಭ್ರಮಾಚರಣೆ ಮಾಡಿ ಸುದ್ದಿಗೆ ಗ್ರಾಸವಾಗಿದ್ದ ಪಾಕಿಸ್ತಾನದ ಬ್ಯಾಟರ್ ಸಾಹಿಬ್ಜಾದಾ ಫರ್ಹಾನ್ ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಭಾನುವಾರ ನಡೆದ ಏಷ್ಯಾ ಕಪ್ 2025 ಸೂಪರ್ 4 ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಬ್ಯಾಟ್ಸ್‌ಮನ್ ಸಾಹಿಬ್‌ಜಾದಾ ಫರ್ಹಾನ್ ತಮ್ಮ ತಂಡವು ಗೌರವಾನ್ವಿತ ಮೊತ್ತ 171 ರನ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಫರ್ಹಾನ್ 45 ಎಸೆತಗಳಲ್ಲಿ 58 ರನ್ ಗಳಿಸುವ ಮೂಲಕ ತಂಡ ಸವಾಲಿನ ರನ್ ಗಳಿಸಲು ನೆರವಾದರು. ಆದರೆ ಭಾರತದ ಆಲ್‌ರೌಂಡರ್ ಶಿವಂ ದುಬೆ ಬೌಲಿಂಗ್ ನಲ್ಲಿ ಔಟ್ ಆದರು.
ಇದಕ್ಕೂ ಮೊದಲು ಅರ್ಧಶತಕ ಸಿಡಿಸಿದ ಫರ್ಹಾನ್ ತನ್ನ ಬ್ಯಾಟ್ ಅನ್ನೇ ಗನ್ ರೀತಿಯಲ್ಲಿ ತೋರಿಸಿ 'Gun-Firing' Celebration ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ಫರ್ಹಾನ್ ವರ್ತನೆ ಕ್ರಿಕೆಟ್ ಅಭಿಮಾನಿಗಳಲ್ಲಿ ವ್ಯಾಪಕ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿತ್ತು. ಕೆಲವರು ಪಾಕ್ ಬ್ಯಾಟರ್ ವಿರುದ್ಧ ಟೀಕೆಗಳನ್ನೂ ಮಾಡಿದರು.
ಇನ್ನು ಇದೇ ವಿಚಾರವಾಗಿ ಸೋಮವಾರ ಶ್ರೀಲಂಕಾ ವಿರುದ್ಧ ಪಾಕಿಸ್ತಾನದ ಎರಡನೇ ಸೂಪರ್ 4 ಪಂದ್ಯದ ಮುನ್ನಾದಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫರ್ಹಾನ್ ಅವರನ್ನು ಭಾರತದ ವಿರುದ್ಧದ ವಿವಾದಾತ್ಮ ಸಂಭ್ರಮಾಚರಣೆಯ ಬಗ್ಗೆ ಕೇಳಲಾಯಿತು. ಈ ವೇಳೆ 29 ವರ್ಷದ ಫರ್ಹಾನ್, 'ಇದರ ಬಗ್ಗೆ ಯಾರೂ ಏನು ಯೋಚಿಸುತ್ತಾರೆ ಎಂಬುದು ನನಗೆ ಬೇಕಿಲ್ಲ.. ಐ ಡೋಂಟ್ ಕೇರ್... ನಾನು ಬಯಸಿದ ರೀತಿಯಲ್ಲಿ ಸಂಭ್ರಮಿಸಿದೆ' ಎಂದು ಹೇಳಿದ್ದಾರೆ.
"ನೀವು ಸಿಕ್ಸರ್‌ಗಳ ಬಗ್ಗೆ ಮಾತನಾಡಿದರೆ, ಭವಿಷ್ಯದಲ್ಲಿ ನೀವು ಅದನ್ನು (ಬಹಳಷ್ಟು) ನೋಡುತ್ತೀರಿ ಎಂದು ನಾನು ಭಾವಿಸುತ್ತೇನೆ. ಮತ್ತು ಅದು (ಆಚರಣೆ) ಆ ಸಮಯದಲ್ಲಿ ಕೇವಲ ಒಂದು ಕ್ಷಣವಾಗಿತ್ತು. ಸಾಮಾನ್ಯವಾಗಿ 50 ರನ್ ಗಳಿಸಿದ ನಂತರ ನಾನು ಹೆಚ್ಚು ಆಚರಣೆಗಳನ್ನು ಮಾಡುವುದಿಲ್ಲ. ಆದರೆ, ಇಂದು ಆಚರಣೆ ಮಾಡೋಣ ಎಂದು ಇದ್ದಕ್ಕಿದ್ದಂತೆ ನನ್ನ ಮನಸ್ಸಿಗೆ ಬಂದಿತು. ನಾನು ಹಾಗೆ ಮಾಡಿದೆ. ಜನರು ಅದನ್ನು ಹೇಗೆ ತೆಗೆದುಕೊಳ್ಳುತ್ತಾರೆಂದು ನನಗೆ ತಿಳಿದಿಲ್ಲ. ನನಗೆ ಅದರ ಬಗ್ಗೆ ಕಾಳಜಿಯೂ ಇಲ್ಲ. ಉಳಿದವು, ನಿಮಗೆ ತಿಳಿದಿದೆ.. ನನ್ನ ಪ್ರಕಾರ ನೀವು ಎಲ್ಲಿ ಆಡಿದರೂ ಆಕ್ರಮಣಕಾರಿ ಕ್ರಿಕೆಟ್ ಆಡಬೇಕು. ಅದು ಭಾರತವಾಗರಲಿ.. ಅಥವಾ ಇನ್ನಾವುದೇ ತಂಡವಾಗಿರಲಿ.. ನಿಮ್ಮ ಆಟ ಆಕ್ರಮಣಕಾರಿಯಾಗಿರಬೇಕು. ನಾವು ಇಂದು ಆಡಿದಂತೆ ನೀವು ಪ್ರತಿಯೊಂದು ತಂಡದ ವಿರುದ್ಧವೂ ಆಕ್ರಮಣಕಾರಿ ಕ್ರಿಕೆಟ್ ಆಡಬೇಕು ಎಂದು ಉತ್ತರಿಸಿದರು.
ಉಳಿದಂತೆ ಶ್ರೀಲಂಕಾ ವಿರುದ್ಧ ಪಂದ್ಯಕ್ಕೆ ಪಾಕಿಸ್ತಾನದ ಮುಂದಿನ ಕಾರ್ಯತಂತ್ರದ ಬಗ್ಗೆ ಕೇಳಿದಾಗ, 'ತಂಡವು ಪವರ್‌ಪ್ಲೇಗಳಲ್ಲಿ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡಿತು. ಅದನ್ನು ಸರಿಪಡಿಸುವುದು ಮುಖ್ಯ, ಜೊತೆಗೆ ಮೊದಲ ಆರು ಓವರ್‌ಗಳಲ್ಲಿ ಹೆಚ್ಚು ರನ್‌ಗಳನ್ನು ಗಳಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ಸಹ ಮುಖ್ಯವಾಗಿದೆ ಎಂದರು.
"ಕಳೆದ ಕೆಲವು ಪಂದ್ಯಗಳಲ್ಲಿ ನಾವು ಪವರ್‌ಪ್ಲೇಗಳನ್ನು ಸರಿಯಾಗಿ ಬಳಸುತ್ತಿರಲಿಲ್ಲ ಎಂಬುದು ನನ್ನ ಅನಿಸಿಕೆ. ನಾವು ಆರಂಭಿಕ ವಿಕೆಟ್‌ಗಳನ್ನು ನೀಡುತ್ತಿದ್ದೆವು. ಪವರ್‌ಪ್ಲೇಗಳನ್ನು ಚೆನ್ನಾಗಿ ಬಳಸುವುದು ಮುಖ್ಯ ಮತ್ತು ವಿಕೆಟ್‌ಗಳನ್ನು ಬಿಟ್ಟುಕೊಡಬಾರದು. ಇಂದು ಪವರ್‌ಪ್ಲೇಗಳಲ್ಲಿ ನಾವು ಆಡಿದ ರೀತಿ, ನಾವು ಆರಂಭಿಕ ವಿಕೆಟ್‌ಗಳನ್ನು ಬಿಟ್ಟುಕೊಡಲಿಲ್ಲ. ದೇವರು ಬಯಸಿದರೆ, ನಮ್ಮ ಪವರ್‌ಪ್ಲೇ ಕೂಡ ತುಂಬಾ ಚೆನ್ನಾಗಿತ್ತು. ಏಕೆಂದರೆ ನಾವು 10 ಓವರ್‌ಗಳಲ್ಲಿ 90 ರನ್‌ಗಳನ್ನು ಗಳಿಸಿದ್ದೆವು. ಆದರೆ ನಾವು ಇನ್ನಿಂಗ್ಸ್ ಮಧ್ಯದಲ್ಲಿ ಕುಸಿತ ಕಂಡಿದ್ದೇವೆ. ನಾವು ಅದನ್ನು ಸರಿಪಡಿಸಿಕೊಳ್ಳುತ್ತೇವೆ" ಎಂದು ಫರ್ಹಾನ್ ಹೇಳಿದರು.