ಲಾಹೋರ್: ಭಾರತ ಕ್ರಿಕೆಟ್ ತಂಡದ ವಿರುದ್ಧ ಪಾಕಿಸ್ತಾನ ತಂಡ ಗೆಲ್ಲಬೇಕು ಎಂದರೆ ಪಾಕಿಸ್ತಾನದ ಸೇನಾ ಮುಖ್ಯಸ್ಥರೇ ಬ್ಯಾಟ್ ಹಿಡಿಬೇಕು ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ವ್ಯಂಗ್ಯ ಮಾಡಿದ್ದಾರೆ.
ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ವಿರುದ್ಧ ನಡೆದ ಎರಡೂ ಪಂದ್ಯಗಳಲ್ಲಿ ಪಾಕಿಸ್ತಾನ ಮುಗ್ಗರಿಸಿದ್ದು, ಇದು ಪಾಕಿಸ್ತಾನಿ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮಾಜಿ ಕ್ರಿಕೆಟಿಗರು ಸೇರಿದಂತೆ ಪಾಕಿಸ್ತಾನ ರಾಜಕೀಯ ಗಣ್ಯರೂ ಕೂಡ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಹೀನಾಮಾನ ತೆಗಳುತ್ತಿದ್ದಾರೆ.
ಈ ಹಿಂದೆ ಪಾಕಿಸ್ತಾನ ಮಾಜಿ ಆಟಗಾರರಾದ ವಾಸಿಂ ಅಕ್ರಂ, ಶೊಯೆಬ್ ಅಖ್ತರ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಟೀಕಿಸಿದ್ದರು. ಇದೀಗ ಈ ಪಟ್ಟಿಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕೂಡ ಸೇರ್ಪಡೆಯಾಗಿದ್ದಾರೆ.
ಭಾರತದ ವಿರುದ್ಧದ ಹೀನಾಯ ಸೋಲಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ಟೀಕಿಸಿರುವ ಇಮ್ರಾನ್ ಖಾನ್, ಪಾಕಿಸ್ತಾನ ತಂಡ ಭಾರತದ ವಿರುದ್ಧ ಗೆಲ್ಲಬೇಕು ಎಂದರೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಂ ಮುನೀರ್ ಅವರೇ ಬ್ಯಾಟ್ ಹಿಡಿದು ಭಾರತದ ವಿರುದ್ಧ ಮೈದಾನಕ್ಕಿಳಿಯಬೇಕು ಎಂದು ವ್ಯಂಗ್ಯ ಮಾಡಿದ್ದಾರೆ.
ಪ್ರಸ್ತುತ ದೇಶದ್ರೋಹ ಮತ್ತು ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿ ಪಾಕಿಸ್ತಾನ ಜೈಲಿನಲ್ಲಿರುವ ಇಮ್ರಾನ್ ಖಾನ್, 'ಭಾರತದ ವಿರುದ್ಧದ ಕ್ರಿಕೆಟ್ ಪಂದ್ಯವನ್ನು ಗೆಲ್ಲಬೇಕಾದರೆ, ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಜೊತೆಗೆ ನಾನು ಆರಂಭಿಕ ಆಟಗಾರನಾಗಿ ಬ್ಯಾಟಿಂಗ್ ಮಾಡಬೇಕು ಎಂದು ವ್ಯಂಗ್ಯ ಮಾಡಿದ್ದಾರೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ರ ಸಹೋದರಿ ಅಲೀಮಾ ಖಾನ್ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, 'ಭಾರತದ ವಿರುದ್ಧದ ಕ್ರಿಕೆಟ್ ಪಂದ್ಯವನ್ನು ಗೆಲ್ಲಲು ಏಕೈಕ ಮಾರ್ಗವೆಂದರೆ ಸೇನಾ ಮುಖ್ಯಸ್ಥ ಜನರಲ್ ಮುನೀರ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧ್ಯಕ್ಷ ನಖ್ವಿ ಆರಂಭಿಕ ಆಟಗಾರರಾಗಿ ಬ್ಯಾಟಿಂಗ್ ಮಾಡಿದರೆ ಮತ್ತು ಅಂಪೈರ್‌ಗಳು ಪಾಕಿಸ್ತಾನದ ಮಾಜಿ ಮುಖ್ಯ ನ್ಯಾಯಮೂರ್ತಿ ಖಾಜಿ ಫೈಜ್ ಇಸಾ ಮತ್ತು ಪಾಕಿಸ್ತಾನದ ಮುಖ್ಯ ಚುನಾವಣಾ ಆಯುಕ್ತ ಸಿಕಂದರ್ ಸುಲ್ತಾನ್ ರಾಜಾ ಎಂದು ಇಮ್ರಾನ್ ಸೂಚಿಸಿದ್ದಾರೆ' ಎಂದು ಹೇಳಿದರು.
ಅಂತೆಯೇ ಇಸ್ಲಾಮಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸರ್ಫರಾಜ್ ಡೋಗರ್ ಮೂರನೇ ಅಂಪೈರ್ ಆಗಿರಬೇಕು ಎಂದು ಅವರು ಹೇಳಿದರು. ಭಾರತದ ಕೈಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಸತತ ಸೋಲುಗಳ ಬಗ್ಗೆ ತನ್ನ ಸಹೋದರನಿಗೆ ಹೇಳಿದ್ದೇನೆ ಎಂದು ಅಲೀಮಾ ಹೇಳಿದರು.
ಸ್ವಾರ್ಥದಿಂದ ಪಾಕಿಸ್ತಾನ ಕ್ರಿಕೆಟ್ ನಾಶ
ಇದೇ ವೇಳೆ "ಅಸಮರ್ಥತೆ" ಮತ್ತು "ಸ್ವಜನಪಕ್ಷಪಾತ" ದಿಂದ ಪಾಕಿಸ್ತಾನಿ ಕ್ರಿಕೆಟ್ ಅನ್ನು ನಾಶಮಾಡಿದ್ದಾರೆ ಎಂದು ಆರೋಪಿಸಿದ ಇಮ್ರಾನ್ ಖಾನ್, ಪಾಕಿಸ್ತಾನ ಕ್ರಿಕೆಟ್ ನ ಇಂದಿನ ಸ್ಥಿತಿಗೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿಯೇ ಕಾರಣ ಎಂದು 1992ರಲ್ಲಿ ಪಾಕಿಸ್ತಾನಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ತಂದುಕೊಟ್ಟಿದ್ದ ಅಂದಿನ ಪಾಕ್ ತಂಡದ ನಾಯಕ ಇಮ್ರಾನ್ ಖಾನ್ ಹೇಳಿದ್ದಾರೆ.