ನವದೆಹಲಿ: ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ತಮ್ಮ ಹೆಸರು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ತಂಡದ ಹಿರಿಯ ಆಟಗಾರ ಕರುಣ್ ನಾಯರ್ (Karun Nair) ಕೊನೆಗೂ ಮೌನ ಮುರಿದಿದ್ದಾರೆ.
ಹೌದು.. ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ 2 ಟೆಸ್ಟ್ ಪಂದ್ಯಗಳ ಸರಣಿಗೆ 15 ಆಟಗಾರರ ಭಾರತ ತಂಡ ಪ್ರಕಟವಾಗಿದ್ದು, ಪಟ್ಟಿಯಿಂದ ಕರುಣ್ ನಾಯರ್ ಹೆಸರು ಕೈ ಬಿಡಲಾಗಿದೆ.
ಈ ಹಿಂದೆ ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗಿದ್ದ ಕರುಣ್ ನಾಯರ್ ಅಲ್ಲಿ ಅಂತಹ ಹೇಳಿಕೊಳ್ಳುವಂತ ಪ್ರದರ್ಶನ ನೀಡಿರಲಿಲ್ಲ. ಆ ಸರಣಿಯಲ್ಲಿ ಕರುಣ್ ನಾಯರ್ ಕೇವಲ 25.62 ಸರಾಸರಿಯಲ್ಲಿ ಒಂದು ಅರ್ಧಶತಕ ಸಹಿತ 205 ರನ್ ಕಲೆಹಾಕಿದ್ದರು.
ಓವಲ್ ನಲ್ಲಿ ಬಂದ ಅರ್ಧಶತಕ ಬಿಟ್ಟರೆ ಅವರ ಬ್ಯಾಟ್ ನಿಂದ ಗಮನಾರ್ಹ ಪ್ರದರ್ಶನ ಮೂಡಿಬಂದಿರಲಿಲ್ಲ. ಹೀಗಾಗಿ ಅಂದೇ ಕರುಣ್ ನಾಯರ್ ಕ್ರಿಕೆಟ್ ಜೀವನ ಅಂತ್ಯ ಎಂದೇ ಹಲವರು ವ್ಯಾಖ್ಯಾನಿಸಿದ್ದರು.
ಇದಕ್ಕೆ ಇಂಬು ನೀಡುವಂತೆ ಇದೀಗ ವೆಸ್ಟ್ ಇಂಡೀಸ್ ಸರಣಿ ವಿರುದ್ಧವೂ ಕರುಣ್ ನಾಯರ್ ಗೆ ಸ್ಥಾನ ನೀಡಲಾಗಿಲ್ಲ. ಕರುಣ್ ನಾಯರ್ ಬದಲಿಗೆ ದೇವದತ್ ಪಡಿಕ್ಕಲ್ ಗೆ ಅವಕಾಶ ಕಲ್ಪಿಸಲಾಗಿದೆ.
ಇದೇ ವಿಚಾರವಾಗಿ ಮಾತನಾಡಿದ್ದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, 'ತಂಡದ ಆಡಳಿತ ಮಂಡಳಿಯು ನಾಯರ್ ಅವರಿಂದ ಬಲವಾದ ಕೊಡುಗೆಯನ್ನು ಬಯಸಿತ್ತು. ಆದರೆ ಹಿಂದನ ಸರಣಿಯಲ್ಲಿ ಅದು ಸಾಧ್ಯವಾಗಿರಲಿಲ್ಲ.
ಹೀಗಾಗಿ ದೇವದತ್ ಪಡಿಕ್ಕಲ್ ಅವರೊಂದಿಗೆ ಹೋಗಲು ನಿರ್ಧರಿಸಿದರು ಎಂದು ಹೇಳಿದರು.
"ಖಂಡಿತ, ನಾವು ಅವರಿಂದ ಸ್ವಲ್ಪ ಹೆಚ್ಚಿನದನ್ನು ನಿರೀಕ್ಷಿಸಿದ್ದೆವು. ಅವರು ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ನಾವು ಒಂದು ಇನ್ನಿಂಗ್ಸ್ ಬಗ್ಗೆ ಮಾತನಾಡಿದ್ದೇವೆ. ಈಗಿರುವ ಪರಿಸ್ಥಿತಿಯಲ್ಲಿ, ಪಡಿಕ್ಕಲ್ (ದೇವ್‌ದತ್) ಸ್ವಲ್ಪ ಹೆಚ್ಚಿನದನ್ನು ನೀಡುತ್ತಾರೆ ಎಂದು ನಾವು ಭಾವಿಸುತ್ತೇವೆ ಮತ್ತು ನಾವು ಎಲ್ಲರಿಗೂ 15 ಅಥವಾ 20 ಟೆಸ್ಟ್ ಪಂದ್ಯಗಳನ್ನು ನೀಡಬಹುದೆಂದು ನಾನು ಬಯಸುತ್ತೇನೆ.
ದುರದೃಷ್ಟವಶಾತ್, ಅದು ಆ ರೀತಿಯಲ್ಲಿ ಕೆಲಸ ಮಾಡುವುದಿಲ್ಲ. ಪಡಿಕ್ಕಲ್ ಟೆಸ್ಟ್ ತಂಡದಲ್ಲಿದ್ದರು. ಅಂದರೆ, ಅವರು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ತಂಡದಲ್ಲಿದ್ದರು. ಇಂಗ್ಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ಆಡಿದರು, ಅಲ್ಲಿ 50 ರನ್ ಗಳಿಸಿದರು. ಅವರು ಭಾರತ ಎ ಜೊತೆ ಉತ್ತಮ ಫಾರ್ಮ್ ತೋರಿಸಿದ್ದಾರೆ' ಎಂದು ಅಗರ್ಕರ್ ಹೇಳಿದರು.
ಕೊನೆಗೂ ಮೌನ ಮುರಿದ ನಾಯರ್ ಹೇಳಿದ್ದೇನು?
ಇನ್ನು ತಂಡ ಪ್ರಕಟ ಬೆನ್ನಲ್ಲೇ ಕರುಣ್ ನಾಯರ್ ತಮ್ಮ ನಿರಾಶ ವ್ಯಕ್ತಪಡಿಸಿದ್ದು, ಆಯ್ಕೆದಾರರು ತಮ್ಮನ್ನು ಏಕೆ ಕಡೆಗಣಿಸಿದರು ಎಂಬುದಕ್ಕೆ ಉತ್ತರ ನನ್ನ ಬಳಿ ಇಲ್ಲ. ಅದಕ್ಕೆ ಅವರೇ ಉತ್ತರ ನೀಡಬೇಕು. ಓವಲ್‌ನಲ್ಲಿ ತಮ್ಮ ಅರ್ಧಶತಕದ ಮಹತ್ವ ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು.
"ಹೌದು, ನಾನು ಆಯ್ಕೆಯ ನಿರೀಕ್ಷೆಯನ್ನೇ ಹೊಂದಿದ್ದೆ. ಈಗ ನನಗೆ ಏನು ಹೇಳಬೇಕೆಂದು ತಿಳಿದಿಲ್ಲ. ನನ್ನ ಬಳಿ ಪದಗಳಿಲ್ಲ. ನನಗೆ ಹೆಚ್ಚಿನ ಕಾಮೆಂಟ್‌ಗಳನ್ನು ಮಾಡಲು ಇಲ್ಲ. ಉತ್ತರಿಸಲು ನನಗೆ ತುಂಬಾ ಕಷ್ಟ. ನೀವು ಬಹುಶಃ ಆಯ್ಕೆದಾರರನ್ನು ಅವರು ಏನು ಯೋಚಿಸುತ್ತಿದ್ದಾರೆಂದು ಕೇಳಬೇಕು. ಒಂದೇ ವಿಷಯವೆಂದರೆ, ಕೊನೆಯ ಟೆಸ್ಟ್ ಪಂದ್ಯದಲ್ಲಿ, ಮೊದಲ ಇನ್ನಿಂಗ್ಸ್‌ನಲ್ಲಿ ಬೇರೆ ಯಾರೂ ಉತ್ತಮವಾಗಿ ನಿರ್ವಹಿಸದಿದ್ದಾಗ ನಾನು ಅರ್ಧಶತಕ ಗಳಿಸಿದೆ. ಆದ್ದರಿಂದ, ಹೌದು, ನಾನು ತಂಡಕ್ಕೆ ಕೊಡುಗೆ ನೀಡಿದ್ದೇನೆ ಎಂದು ನಾನು ಭಾವಿಸಿದೆ, ವಿಶೇಷವಾಗಿ ನಾವು ಗೆದ್ದ ಕೊನೆಯ ಪಂದ್ಯದಲ್ಲಿ. ಆದರೆ, ಹೌದು ಆ ವಿಷಯಗಳು ಮುಖ್ಯವಲ್ಲ," ಎಂದು ಕರುಣ್ ನಾಯರ್ ಹೇಳಿದರು.