ಇಸ್ಲಾಮಾಬಾದ್: ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರ ಕೈಯಿಂದ ಏಷ್ಯಾ ಕಪ್ 2025 ಟ್ರೋಫಿ ಸ್ವೀಕರಿಸಲು ಭಾರತ ನಿರಾಕರಿಸಿದ್ದಕ್ಕೆ ಪಾಕಿಸ್ತಾನದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಟೂರ್ನಿಗಳಿಂದ ಭಾರತ ತಂಡವನ್ನು ಅಮಾನತುಗೊಳಿಸಬೇಕು ಎಂದು ಪಾಕ್ ಮಾಜಿ ಕ್ಯಾಪ್ಟನ್ ರಶೀದ್ ಲತೀಫ್ ಆಗ್ರಹಿಸಿದ್ದಾರೆ.
ಬೇರೆ ಇತರ ಕ್ರೀಡೆಗಳಲ್ಲಿ ಭಾರತ ಮಾಡಿದ್ದಂತೆ ಮಾಡಿದ್ದರೆ ತಕ್ಷಣ ಶಿಸ್ತು ಕ್ರಮ ಕೈಗೊಳ್ಳಲಾಗುತಿತ್ತು. ಆದರೆ ICC ಅಧ್ಯಕ್ಷರು ಭಾರತದವರು ಆಗಿರುವುದರಿಂದ ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದಂತಿಲ್ಲ ಎಂದು ಲತೀಫ್ ಹೇಳಿದ್ದಾರೆ. ಜಯ್ ಶಾ ಪ್ರಸ್ತುತ ಐಸಿಸಿ ಮುಖ್ಯಸ್ಥರಾಗಿದ್ದಾರೆ.
'ಇದು ಕ್ರಿಕೆಟ್ ಗೆ ಕೆಟ್ಟ ದಿನ' ಎಂದಿರುವ ಲತೀಫ್, ಭಾರತ ತಂಡ ಆಟದ ಉತ್ಸಾಹವನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ಭಾರತ ನಿರಾಕರಿಸಿದಾಗ ಪ್ರಶಸ್ತಿ ವಿತರಣಾ ಸಮಾರಂಭ ಅಸ್ತವ್ಯಸ್ತಗೊಂಡಿತು. ಆಯೋಜಕರು ಕಾರ್ಯಕ್ರಮ ರದ್ದುಗೊಳಿಸುವಂತಾಯಿತು.
ಈ ಕುರಿತು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಲತೀಫ್, ACC ಮುಖ್ಯಸ್ಥರಿಂದ ಏಷ್ಯ ಕಪ್ 2025 ಟ್ರೋಫಿ ಪಡೆಯಲು ನಿರಾಕರಿಸಿದ ನಂತರ ICC ಯಿಂದ ಅಮಾನತುಗೊಳ್ಳಲು ಭಾರತೀಯ ಕ್ರಿಕೆಟ್ ತಂಡ ಸೂಕ್ತವಾಗಿದೆ. ಬೇರೆ ಯಾವುದೇ ಕ್ರೀಡೆಯಲ್ಲಿ ಹೀಗೆ ಮಾಡಿದ್ದರೆ ತಕ್ಷಣ ಕ್ರಮ ಕೈಗೊಳ್ಳಲಾಗುತಿತ್ತು ಎಂದಿದ್ದಾರೆ.
ಆದರೆ ಐಸಿಸಿ ಅಧ್ಯಕ್ಷರು, ಸಿಇಒ, ಸಿಎಫ್‌ಒ, ವಾಣಿಜ್ಯ ಮುಖ್ಯಸ್ಥರು ಮತ್ತು ಕಾರ್ಯಕ್ರಮ ಆಯೋಜಕರು, ಸಂವಹನ ಮುಖ್ಯಸ್ಥರು ಭಾರತೀಯರು ಆಗಿರುವುದರಿಂದ ಅಮಾನತು ಆಗುವಂತೆ ತೋರುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತ ಮತ್ತೊಮ್ಮೆ ಜೆಂಟಲ್ ಮ್ಯಾನರ ಆಟದ ಉತ್ಸಾಹವನ್ನು ಕುಂದಿಸಿದ್ದರಿಂದ ಕ್ರಿಕೆಟ್ ಗೆ ಇದು ಕೆಟ್ಟ ದಿನವಾಗಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.