ನವದೆಹಲಿ: ಭಾರತೀಯ ಕ್ರಿಕೆಟ್ ಲೆಜೆಂಡ್ ಯುವರಾಜ್ ಸಿಂಗ್, ಬಹಿರಂಗವಾಗಿ ಮಾಜಿ ನಾಯಕರಾದ ಎಂಎಸ್ ಧೋನಿ ಮತ್ತು ಕಪಿಲ್ ದೇವ್ ಅವರಿಗೆ ಕ್ಷಮೆಯಾಚಿಸಿದ್ದಾರೆ. ಎರಡು ವಿಶ್ವಕಪ್ ವಿಜೇತ ದಿಗ್ಗಜ ಆಟಗಾರರ ವಿರುದ್ಧ ಅವರ ತಂದೆ ಯೋಗರಾಜ್ ಸಿಂಗ್ ಆಗಾಗ್ಗೆ ನೀಡುವ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಯುವರಾಜ್ ಸಿಂಗ್ ಈಗ ಕ್ಷಮೆಯಾಚಿಸಿದ್ದಾರೆ.
ನಾನು ಕಪಿಲ್ ದೇವ್ ಮತ್ತು ಎಂಎಸ್ ಧೋನಿಯಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ ಎಂದು ಸ್ಪೋರ್ಟ್ಸ್ ಟಾಕ್ ಬಿಡುಗಡೆ ಮಾಡಿದ ಟೀಸರ್ ವೀಡಿಯೊದಲ್ಲಿ ಯುವರಾಜ್ ಹೇಳಿದ್ದಾರೆ. ಯೋಗರಾಜ್ ಸಿಂಗ್ ಸುಮಾರು ಒಂದು ದಶಕದಿಂದಲೂ ಎಂಎಸ್ ಧೋನಿ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.
ಧೋನಿ, ಯುವರಾಜ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಹಾಳುಮಾಡಿದ್ದು, ಒತ್ತಾಯದಿಂದ ನಿವೃತ್ತಿ ಪಡೆದುಕೊಳ್ಳುವಂತೆ ಮಾಡಿದ್ದಾರೆ ಎಂದು ಆರೋಪಿಸುತ್ತಾ ಬಂದಿದ್ದಾರೆ.
ತೀರಾ ಇತ್ತೀಚೆಗೆ ಕಪಿಲ್ ದೇವ್ ವಿರುದ್ಧವೂ ಯೋಗರಾಜ್ ಸಿಂಗ್ ಕಿಡಿಕಾರಿದ್ದರು. 1980ರ ದಶಕದಲ್ಲಿ ತಮ್ಮನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಪ್ರತೀಕಾರವಾಗಿ ಕಪಿಲ್ ದೇವ್ ಮನೆಗೆ ಪಿಸ್ತೂಲ್ ಹಿಡಿದು ಹೋಗಿದ್ದೆ ಎಂದು ಹೇಳಿದ್ದರು.
ತನ್ನ ತಂದೆಯ ಆಕ್ರೋಶಗಳ ಬಗ್ಗೆ ಇಲ್ಲಿಯವರೆಗೂ ಮೌನವಾಗಿದ್ದ ಯುವರಾಜ್ ಸಿಂಗ್, ಇದೀಗ ಮಾತನಾಡಿದ್ದಾರೆ. ನಾನು ಕಪಿಲ್ ದೇವ್ ಮತ್ತು ಎಂಎಸ್ ಧೋನಿಯವರಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ ಎಂದು ಸ್ಪಷ್ಪವಾಗಿ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಯೋಗರಾಜ್ ಸಿಂಗ್ ಅವರ ವರ್ತನೆಯ ಬಗ್ಗೆ ತೀಕ್ಷ್ಣವಾಗಿ ಮಾತನಾಡಿರುವುದಾಗಿ ಯುವರಾಜ್ ಬಹಿರಂಗಪಡಿಸಿದ್ದಾರೆ. ಇದು ಸರಿಯಲ್ಲ ಎಂದು ನಾನು ತಂದೆಗೆ ಹೇಳಿದ್ದೇನೆ" ಎಂದು ಹೇಳಿದ್ದು,ಅವರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ. ಈ ಹಿಂದೆಯೂ ಪ್ರತ್ಯೇಕ ಪಾಡ್‌ಕ್ಯಾಸ್ಟ್‌ನಲ್ಲಿ ತಮ್ಮ ತಂದೆ ಮಾನಸಿಕ ಆರೋಗ್ಯ ಸಮಸ್ಯೆ ಬಗ್ಗೆ ಯುವರಾಜ್ ಸಿಂಗ್ ಮಾತನಾಡಿದ್ದರು.