ಮುಂಬೈ ಇಂಡಿಯನ್ಸ್ (ಎಂಐ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಪಂದ್ಯವನ್ನು ಸಾಮಾನ್ಯವಾಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವಿನ ಕಾಳಗವಾಗಿಯೇ ನೋಡಲಾಗುತ್ತದೆ. ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮುಂಬೈ ವಿರುದ್ಧ ಜಯ ಸಾಧಿಸಿತು. ಆದರೆ, ಉಭಯ ದಿಗ್ಗಜರಿಗೂ ಗಾಯದ ಸಮಸ್ಯೆ ಕಾಡಿದ್ದರಿಂದ ಪಂದ್ಯದ ಮಧ್ಯದಲ್ಲಿಯೇ ಹೊರಗುಳಿಯುವಂತಾಯಿತು. ರೋಹಿತ್ ಅವರು ಸ್ನಾಯು ಸೆಳೆತದಿಂದಾಗಿ ಇನಿಂಗ್ಸ್ ಮೊಟಕುಗೊಳಿಸಿದರೆ, ವಿರಾಟ್ ಕೊಹ್ಲಿ ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದರು ಮತ್ತು ನಂತರ ಮೈದಾನಕ್ಕೆ ಇಳಿಯಲೇ ಇಲ್ಲ.
131.58 ಸ್ಟ್ರೈಕ್ ರೇಟ್‌ನಲ್ಲಿ ಕೊಹ್ಲಿ ಅರ್ಧಶತಕ ಗಳಿಸಿದ್ದು ಆರ್‌ಸಿಬಿಗೆ ನೆರವಾಗಿದ್ದರೂ, ಭಾರತದ ದಂತಕಥೆ ಮೈದಾನದಲ್ಲಿ ತನ್ನ ಶೇ 200ರಷ್ಟು ಪ್ರದರ್ಶನ ನೀಡುತ್ತಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ನಾಯಕ ರಜತ್ ಪಾಟೀದಾರ್ ಮತ್ತು ಫಿಲ್ ಸಾಲ್ಟ್ ಅವರ ಅಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದ ಪ್ರವಾಸಿ ತಂಡವು 240 ರನ್ ಗಳಿಸಿತು. ಆದರೆ, ಕೊಹ್ಲಿ ಕ್ಷೇತ್ರರಕ್ಷಣೆಗಾಗಿ ಬಾರದಿರುವುದು ಚಿಂತೆಗೀಡುಮಾಡುವ ವಿಷಯವಾಗಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಅವರ ಬದಲಿಗೆ ಜೇಕಬ್ ಬೆಥೆಲ್ ಫೀಲ್ಡರ್ ಆಗಿ ಆಯ್ಕೆಯಾದರು.
ವಿರಾಟ್ ಕೊಹ್ಲಿ ಮೈದಾನಕ್ಕಿಳಿಯಲಿಲ್ಲ ಏಕೆ?
ಪಂದ್ಯದ ಸಮಯದಲ್ಲಿ, ವಿರಾಟ್ ಕೊಹ್ಲಿ ಪಾದದ ಗಾಯದಿಂದಾಗಿ ಹೊರಗುಳಿದಿದ್ದಾರೆ ಎಂದು ನಿರೂಪಕ ಸೈಮನ್ ಡೌಲ್ ಅಭಿಮಾನಿಗಳಿಗೆ ತಿಳಿಸಿದರು. ಆದರೆ, ಗಾಯದ ಸ್ವರೂಪ ಮತ್ತು ಅದರ ಗಂಭೀರತೆ ಇನ್ನೂ ತಿಳಿದಿಲ್ಲ.
ಮುಂಬೈ ವಿರುದ್ಧ ಆರ್‌ಸಿಬಿ ಗೆಲುವಿನ ನಂತರ, ರಜತ್ ಪಾಟೀದಾರ್ ಅವರಿಗೆ ಕೊಹ್ಲಿ ಕುರಿತಾದ ಈ ಪ್ರಶ್ನೆಯನ್ನು ಕೇಳಲಾಯಿತು. ಅದಕ್ಕೆ ಅವರು ತಮ್ಮ ಹಿರಿಯ ಆಟಗಾರ ಶೀಘ್ರದಲ್ಲೇ ಗುಣಮುಖರಾಗುತ್ತಾರೆ ಎಂದು ಹೇಳಿದರು. 'ನನಗೆ ಇನ್ನೂ ತಿಳಿದಿಲ್ಲ. ಆದರೆ, ಅವರು ಈಗ ಚೆನ್ನಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.
ಪಂದ್ಯದ ನಂತರ ನಡೆದ ಪ್ರಸ್ತುತಿ ಕಾರ್ಯಕ್ರಮದ ವೇಳೆ ಕೃನಾಲ್ ಪಾಂಡ್ಯ, ಕೊಹ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾನು ಇನ್ನೂ ಫಿಸಿಯೋ ಜೊತೆ ಮಾತನಾಡಿಲ್ಲ. ಆದರೆ ಅವರು ಚೆನ್ನಾಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ. ಚಿಂತಿಸಲು ಏನೂ ಇಲ್ಲ ಎಂದು ಹೇಳಿದರು.
ಆರ್‌ಸಿಬಿಯ ಮುಂದಿನ ಪಂದ್ಯದಲ್ಲಿ ಅವರು ಭಾಗವಹಿಸುವ ಬಗ್ಗೆ ಹೇಳುವುದಾದರೆ, ಗೆಲುವಿನ ನಂತರ ಅವರು ತಂಡದ ಆಟಗಾರರೊಂದಿಗೆ ಸಂಭ್ರಮಾಚರಣೆಯಲ್ಲಿ ಭಾಗಿಯಾದರು ಮತ್ತು ಆಟಗಾರರ ನಡುವಿನ ಸಾಂಪ್ರದಾಯಿಕ ಹ್ಯಾಂಡ್‌ಶೇಕ್‌ನಲ್ಲಿಯೂ ಭಾಗವಹಿಸಿದ್ದರು. ಆರ್‌ಸಿಬಿಯ ಮುಂದಿನ ಪಂದ್ಯ ಏಪ್ರಿಲ್ 15 ರಂದು ಬೆಂಗಳೂರಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ ನಡೆಯಲಿರುವುದರಿಂದ ಕೊಹ್ಲಿಗೆ ಎರಡು ದಿನಗಳ ವಿಶ್ರಾಂತಿ ನೀಡಲಾಗುವುದು.