ಹೈದರಾಬಾದ್: ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ 47 ರನ್ ಗಳ ಭರ್ಜರಿ ಜಯ ದಾಖಲಿಸಿದೆ.
ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡ ನೀಡಿದ್ದ 243 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಡೆಲ್ಲಿ ತಂಡ ನಿಗಧಿತ 20 ಓವರ್ ನಲ್ಲಿ 9 ವಿಕೆಟ್ ಕಳೆದುಕೊಂಡು 195 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 47 ರನ್ ಗಳ ಅಂತರದಲ್ಲಿ ಹೈದರಾಬಾದ್ ಎದುರು ಮಂಡಿಯೂರಿತು.
ಡೆಲ್ಲಿ ಪರ ನಿತೀಶ್ ರಾಣಾ 57, ಸಮೀರ್ ರಜ್ವಿ 41 ಮತ್ತು ಕೆಎಲ್ ರಾಹುಲ್ 37 ರನ್ ಗಳಿಸಿ ಹೋರಾಟ ನೀಡಿದರಾದರೂ ಉಳಿದಾವ ಬ್ಯಾಟರ್ ಗಳಿಂದ ನಿರೀಕ್ಷಿತ ಬ್ಯಾಟಿಂಗ್ ಮೂಡಿಬರಲಿಲ್ಲ. ಟ್ರಿಸ್ಟನ್ ಸ್ಟಬ್ಸ್ 27 ರನ್ ಗಳಿಸಿದರೆ, ಪಾತುಮ್ ನಿಸ್ಸಾಂಕಾ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಇನ್ನು ಹೈದರಾಬಾದ್ ಪರ ಇಶಾನ್ ಮಲಿಂಗಾ 4 ವಿಕೆಟ್ ಕಬಳಿಸಿದರೆ, ಹರ್ಶ್ ದುಬೆ 3 ವಿಕೆಟ್ ಪಡೆದರು. ಮಧುಶಂಕಾ ಮತ್ತು ಸಕೀಬ್ ಹಸನ್ ತಲಾ 1 ವಿಕೆಟ್ ಪಡೆದರು. ಹೈದರಾಬಾದ್ ಅಜೇಯ 135 ರನ್ ಕಲೆಹಾಕಿದ್ದ ಅಭಿಷೇಕ್ ಶರ್ಮಾ ಅರ್ಹರಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇನ್ನು ಇಂದಿನ ಪಂದ್ಯದ ಗೆಲುವಿನ ಮೂಲಕ ಐಪಿಎಲ್ ಅಂಕ ಪಟ್ಟಿಯಲ್ಲಿ ಹೈದರಾಬಾದ್ ತಂಡ 3ನೇ ಸ್ಥಾನಕ್ಕೇರಿದೆ. ತಾನಾಡಿರುವ 7 ಪಂದ್ಯಗಳ ಪೈಕಿ 4ರಲ್ಲಿ ಗೆದ್ದು ಮೂರು ಪಂದ್ಯ ಸೋತಿದೆ. ಅಂತೆಯೇ +0.820 ನೆಟ್ ರನ್ ರೇಟ್ ನೊಂದಿಗೆ 3ನೇ ಸ್ಥಾನಕ್ಕೇರಿದೆ.
ಅಂತೆಯೇ ಸತತ 2 ಸೋಲುಗಳನ್ನು ಕಂಡಿರುವ ಡೆಲ್ಲಿ ಇದೀಗ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದ್ದು, ತಾನಾಡಿರುವ 6 ಪಂದ್ಯಗಳಲ್ಲಿ ತಲಾ ಮೂರು ಸೋಲು ಮತ್ತು ಗೆಲುವುಗಳೊಂದಿಗೆ 6 ಅಂಕ ಪಡೆದಿದೆ. ಅಂತೆಯೇ -0.130 ನೆಟ್ ರನ್ ರೇಟ್ ನೊಂದಿಗೆ 5ನೇ ಸ್ಥಾನಕ್ಕೆ ಕುಸಿದಿದೆ.