2026 ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ಎರಡೇ ತಿಂಗಳಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ರಾಷ್ಟ್ರೀಯ ತಂಡದಿಂದ ಕೈಬಿಡಲಾಗಿತ್ತು. ಈ ಬಗ್ಗೆ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಸೂರ್ಯಕುಮಾರ್ ಯಾದವ್ ಅವರು ತಂಡದಿಂದ ಕೈಬಿಟ್ಟಿದ್ದಕ್ಕೆ ಅರಗಿಸಿಕೊಳ್ಳಲು ಆಗಲಿಲ್ಲ ಎಂದು ಹೇಳಿದ್ದಾರೆ.
ಟಿ20 ವಿಶ್ವಕಪ್ ಗೆಲುವಿನ ಬಳಿಕ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ನಾಯಕತ್ವದಿಂದ ಮಾತ್ರವಲ್ಲದೆ ತಂಡದಿಂದಲೇ ಕೊಕ್ ನೀಡಲಾಗಿತ್ತು. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗೆ ಶ್ರೇಯಸ್ ಅಯ್ಯರ್ ಅವರನ್ನು ಮುಂದಿನ ನಾಯಕನನ್ನಾಗಿ ಆಯ್ಕೆ ಮಾಡಿತು.
ಕಳೆದ 2 ವರ್ಷಗಳಿಂದ ಸೂರ್ಯಕುಮಾರ್ ಅವರ ಬ್ಯಾಟಿಂಗ್ ಫಾರ್ಮ್ ನಿರೀಕ್ಷಿತ ಮಟ್ಟದಲ್ಲಿ ಇರದಿರುವುದೇ ಅವರನ್ನು ತಂಡದಿಂದ ಕೈಬಿಡಲು ಪ್ರಮುಖ ಕಾರಣ ಎನ್ನಲಾಗಿತ್ತು. 2025ರಲ್ಲಿ ಭಾರತ ಪರ ಆಡಿದ ಯಾವುದೇ ಪಂದ್ಯದಲ್ಲೂ ಸೂರ್ಯಕುಮಾರ್ ಅರ್ಧಶತಕ ದಾಖಲಿಸಿರಲಿಲ್ಲ. ತವರಿನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲೂ ಅಮೆರಿಕ ತಂಡದ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಗಳಿಸಿದ ಪ್ರಮುಖ ಇನ್ನಿಂಗ್ಸ್ ಹೊರತುಪಡಿಸಿ ಅವರ ಬ್ಯಾಟಿಂಗ್ ಗಮನಾರ್ಹವಾಗಿರಲಿಲ್ಲ. ಆದರೆ, ನಾಯಕನಾಗಿ ಸೂರ್ಯಕುಮಾರ್ ಯಾವುದೇ ತಪ್ಪು ಮಾಡಿರಲಿಲ್ಲ. ಅವರ ನಾಯಕತ್ವದಲ್ಲಿ ಭಾರತ ತಂಡ ಒಂದೇ ಒಂದು ಸರಣಿಯನ್ನೂ ಸೋಲದೇ, ಏಷ್ಯಾಕಪ್ ಜೊತೆಗೆ ತವರಿನಲ್ಲೇ ಟಿ20 ವಿಶ್ವಕಪ್‌ನ್ನೂ ಗೆದ್ದಿತ್ತು.
ಇದೀಗ ಮೊದಲ ಬಾರಿಗೆ ಸೂರ್ಯಕುಮಾರ್ ಯಾದವ್ ಅವರು ಬಹಿರಂಗವಾಗಿ ಮಾತನಾಡಿದ್ದು, ಈ ಘೋಷಣೆ ತನಗೆ ಆಘಾತ ತಂದಿತ್ತು ಎಂದು ಹೇಳಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿ ಗೆದ್ದ ಸಂಭ್ರಮ ಇನ್ನು ಮಾಸಿರಲಿಲ್ಲ. ತಂಡವನ್ನು ಉತ್ತಮವಾಗಿ ಮುನ್ನಡೆಸಿದ ಹೆಮ್ಮೆ ಇತ್ತು. 2028ರ ಟಿ20 ವಿಶ್ವಕಪ್ ಟೂರ್ನಿಗೂ ತಂಡವನ್ನು ಮುನ್ನಡೆಸುವ ಆತ್ಮವಿಶ್ವಾಸವಿತ್ತು. ಎಲ್ಲವೂ ಚೆನ್ನಾಗಿತ್ತು. ಆದರೆ ಬಿಸಿಸಿಐ ಟಿ20 ತಂಡ ಪ್ರಕಟಿಸಿದಾಗ ನನ್ನ ನಾಯಕತ್ವ ಮಾತ್ರವಲ್ಲ ತಂಡದಲ್ಲೇ ಇಲ್ಲಾ ಎಂದಾಗ ಆಘಾತವಾಗಿತ್ತು ಎಂದು ಮಾಜಿ ಕ್ರಿಕೆಟಿಗ ಅಕಾಶ್ ಚೋಪ್ರಾ ಜೊತೆಗಿನ ಸಂದರ್ಶನದಲ್ಲಿ ಯಾದವ್ ಹೇಳಿದ್ದಾರೆ.
ತಂಡದಿಂದ ಕೈಬಿಟ್ಟ ವಿಚಾರ ತಿಳಿದಾಗ ಆರಂಭದಲ್ಲಿ ತಾನು ಹೆಚ್ಚು ಪ್ರತಿಕ್ರಿಯಿಸಿರಲಿಲ್ಲ. ಆಯ್ಕೆಗಾರರ ಸ್ಥಾನದಲ್ಲಿ ನಿಂತು ಅವರ ನಿರ್ಧಾರ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ ಎಂದು ತಿಳಿಸಿದ್ದಾರೆ.
ಆದರೆ ಕೆಲ ಸಮಯದ ಬಳಿಕ ಆಯ್ಕೆ ಸಮಿತಿಯ ನಿರ್ಧಾರವನ್ನು ಅರಗಿಸಿಕೊಳ್ಳುವುದು ಕಷ್ಟವಾಯಿತು. ಅವರು ಆಯ್ಕೆ ಮಾಡಿರುವ ತಂಡವನ್ನು ನಾನು ನೋಡಿದ್ದೇನೆ. ಶ್ರೇಯಸ್ ಜೊತೆ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಆತ ಉತ್ತಮ ಆಟಗಾರ, ಒಳ್ಳೆಯ ವ್ಯಕ್ತಿ ಮತ್ತು ಉತ್ತಮ ನಾಯಕ ಕೂಡ ಹೌದು. ಹಾಗಾಗಿ, ‘ಅವನನ್ನೇ ನಾಯಕನನ್ನಾಗಿ ಏಕೆ ಮಾಡಿದರು?’ ಎಂದು ನಾನು ಪ್ರಶ್ನಿಸಲಿಲ್ಲ. ಆದರೆ ನನಗೆ ಸ್ವಲ್ಪ ಬೇಸರವಾಗಿತ್ತು. ಏಕೆಂದರೆ 2 ವರ್ಷಗಳಲ್ಲಿ ನೀವು ಒಂದೇ ಒಂದು ಸರಣಿಯನ್ನೂ ಸೋತಿಲ್ಲ. ವಿಶ್ವಕಪ್ ಗೆದ್ದಿದ್ದೀರಿ, ಏಷ್ಯಾ ಕಪ್ ಗೆದ್ದಿದ್ದೀರಿ. ಹೀಗಿರುವಾಗ ಇದೇ ರೀತಿಯ ಯಶಸ್ಸು ಮುಂದುವರಿಯಬೇಕು ಎಂದು ಬಯಸುತ್ತೀರಿ. ಎಲ್ಲವೂ ಉತ್ತಮವಾಗಿ ನಡೆಯುತ್ತಿರುವಾಗ ಬದಲಾವಣೆ ಏಕೆ? ಬದಲಾವಣೆಗೆ ಕಾರಣವೇನು? ಇದೇ ಪ್ರಶ್ನೆ ನನ್ನ ಮನಸ್ಸಿನಲ್ಲಿ ಓಡಾಡುತ್ತಿತ್ತು. ನಾನು ಸುಮಾರು ಒಂದೂವರೆ ತಿಂಗಳು ಮನೆಯಲ್ಲೇ ಕುಳಿತು ಯೋಚಿಸುತ್ತಿದ್ದೆ. ‘ಇದು ಹೇಗೆ ಆಗಬಹುದು? ಇದು ಹೇಗೆ ಸಾಧ್ಯ?’ ಎಂದು ಯೋಚಿಸುತ್ತಿದ್ದೆ ಎಂದು ಹಳೆಯ ದುಃಖದ ಕ್ಷಣಗಳನ್ನ ಯಾದವ್ ನೆನಪಿಸಿಕೊಂಡಿದ್ದಾರೆ.