ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಸಾಕಷ್ಟು ಸುದ್ದಿಗೆ ಗ್ರಾಸವಾಗುತ್ತಿದ್ದು, ಪಾಕಿಸ್ತಾನ ಕೈಗೊಂಡ ನಿರ್ಣಯದಿಂದಾಗಿ ಭಾರತ ತಂಡಕ್ಕೆ ಟೂರ್ನಿ ಆರಂಭಕ್ಕೂ ಮುನ್ನವೇ 2 ಅಂಕ ದೊರೆಯುವ ಸಾಧ್ಯತೆ ಇದೆ.
ಹೌದು.. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಗ ಬಾಂಗ್ಲಾದೇಶವನ್ನು ಎತ್ತಿಕಟ್ಟಿದ್ದ ಪಾಕಿಸ್ತಾನ ಇದೀಗ ತಾನೇ ಭಾರತದ ವಿರುದ್ಧ ಆಡುವುದಿಲ್ಲ ಎಂದು ಪಟ್ಟು ಹಿಡಿದಿದೆ.
ಪಾಕಿಸ್ತಾನ ತಂಡದ ಈ ಹಠಮಾರಿ ವರ್ತನೆ ಅದು ಭಾರಿ ಬೆಲೆಯನ್ನೇ ತೆರುವ ಸಾಧ್ಯತೆ ಇದ್ದು, 2 ಅಂಕವನ್ನು ಪಂದ್ಯವನ್ನೇ ಆಡದೇ ಕಳೆದುಕೊಂಡಂತಾಗಿದೆ.
ಭಾರತದ ವಿರುದ್ಧ ಫೆಬ್ರವರಿ 15ರಂದು ನಡೆಯಲಿರುವ ಪಂದ್ಯ ನಿಷೇಧಿಸುವ ಮೂಲಕ ಟೀಂ ಇಂಡಿಯಾಗೆ 2 ಅಂಕ ನೀಡುವಂತಾಗಿದೆ. ಏತನ್ಮಧ್ಯೆ, ಈ ಹಿಂದೆ ವರದಿ ಮಾಡಿದಂತೆ ಬಹಿಷ್ಕಾರದ ನಿರ್ಧಾರವು ಐಸಿಸಿ ದೇಶದ ಮೇಲೆ ಕಠಿಣ ಶಿಕ್ಷೆಯನ್ನು ವಿಧಿಸಬಹುದು.
ಷರತ್ತು ಅನ್ವಯ!
ಇನ್ನು ಪಾಕಿಸ್ತಾನ ಭಾರತದ ವಿರುದ್ಧ ಪಂದ್ಯವನ್ನು ನಿಷೇಧಿಸುವ ಮೂಲಕ 2 ಅಂಕ ಕಳೆದುಕೊಂಡಿದೆಯಾದರೂ, ಭಾರತ ಈ 2 ಅಂಕಗಳನ್ನು ಗಳಿಸಲು ಷರತ್ತು ಅನ್ವಯವಾಗುತ್ತದೆ. ಅದರಂತೆ ಫೆಬ್ರವರಿ 15ರಂದು ನಡೆಯಲಿರುವ ಪಂದ್ಯಕ್ಕಾಗಿ ಭಾರತ ತಂಡ ಶ್ರೀಲಂಕಾಗೆ ಪಯಣ ಬೆಳೆಸಬೇಕಿದೆ. ಶ್ರೀಲಂಕಾಗೆ ಪ್ರಯಾಣಿಸಿದರೆ ಮಾತ್ರ ಭಾರತ ತಂಡಕ್ಕೆ ಈ 2 ಅಂಕ ಸಿಗಲಿದೆ ಎಂದು ಹೇಳಲಾಗಿದೆ.
ಅಂದಹಾಗೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ, ನಮೀಬಿಯಾ, ನೆದರ್‌ಲ್ಯಾಂಡ್ಸ್ ಮತ್ತು ಯುಎಸ್‌ಎ ಜೊತೆಗೆ ಪಾಕಿಸ್ತಾನ 'ಎ' ಗುಂಪಿನಲ್ಲಿದ್ದು, ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.
ಶ್ರೀಲಂಕಾ ತಂಡವು ಭಾರತದೊಂದಿಗೆ ಟೂರ್ನಿಯ ಸಹ-ಆತಿಥೇಯ ರಾಷ್ಟ್ರವೂ ಆಗಿದೆ. ಫೆಬ್ರವರಿ 7 ರಂದು ನೆದರ್‌ಲ್ಯಾಂಡ್ಸ್ ವಿರುದ್ಧ ಪಾಕಿಸ್ತಾನ ತನ್ನ ಅಭಿಯಾನವನ್ನು ಆರಂಭಿಸಲಿದೆ. ನಂತರ ಫೆಬ್ರವರಿ 10 ರಂದು ಯುಎಸ್‌ಎ ವಿರುದ್ಧ ಮತ್ತು ಫೆಬ್ರವರಿ 18 ರಂದು ನಮೀಬಿಯಾ ವಿರುದ್ಧ ಪಾಕಿಸ್ತಾನ ಸೆಣಸಲಿದೆ.
ತಿರುಗುಬಾಣವಾಯ್ತ ಪಾಕಿಗಳ ತಂತ್ರ!
ಪಿಸಿಬಿಯ ಈ ನಿರ್ಧಾರದಿಂದಾಗಿ ಪಾಕಿಸ್ತಾನ ಗುಂಪು ಹಂತದಲ್ಲಿ ಎರಡು ಅಂಕಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಯಾವುದೇ ತಂಡವು ನಿಗದಿಪಡಿಸಿದ ಪಂದ್ಯವನ್ನು ಆಡಲು ನಿರಾಕರಿಸಿದರೆ, ಎದುರಾಳಿ ತಂಡಕ್ಕೆ 2 ಅಂಕಗಳನ್ನು ನೀಡಲಾಗುತ್ತದೆ. ಇದರರ್ಥ ಟೀಂ ಇಂಡಿಯಾಕ್ಕೆ ಆಡದೆಯೇ ಎರಡು ಅಂಕಗಳು ಸಿಗಲಿದೆ ಎನ್ನಲಾಗಿದೆ.