ಚೆನ್ನೈ: T20 ವಿಶ್ವಕಪ್ 2026ರಲ್ಲಿ ಟೀಮ್ ಇಂಡಿಯಾ ಅತ್ಯಧಿಕ ಮೊತ್ತವನ್ನು ದಾಖಲಿಸಿದೆ. ಜಿಂಬಾಬ್ವೆ ವಿರುದ್ಧದ ಸೂಪರ್-8 ಪಂದ್ಯದಲ್ಲಿ ಭಾರತ ಈ ಸಾಧನೆ ಮಾಡಿದೆ. ಜಿಂಬಾಬ್ವೆ ವಿರುದ್ಧ ಭಾರತ 256 ರನ್ ಗಳಿಸಿದೆ. ಇದು ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಭಾರತ ಅತ್ಯಧಿಕ ಮೊತ್ತ ಬಾರಿಸಿದೆ. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಮೊತ್ತವಾಗಿದೆ. 260 ರನ್ ಗಳೊಂದಿಗೆ ಶ್ರೀಲಂಕಾ ಮೊದಲ ಸ್ಥಾನದಲ್ಲಿದೆ.
ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ ನಿಗದಿತ ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತು. ಆರಂಭಿಕ ಜೋಡಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಭಾರತಕ್ಕೆ ಬಲವಾದ ಆರಂಭ ನೀಡಿದರು. ಈ ಇಬ್ಬರು ಆಟಗಾರರು 3.4 ಓವರ್‌ಗಳಲ್ಲಿ 48 ರನ್ ಪೇರಿಸಿದರು. ಸಂಜು 15 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಸೇರಿದಂತೆ 24 ರನ್ ಗಳಿಸಿ ಔಟಾದರು. ನಂತರ ಇಶಾನ್ ಕಿಶನ್, ಅಭಿಷೇಕ್ ಶರ್ಮಾ ಜೊತೆ 42 ಎಸೆತಗಳಲ್ಲಿ ಎರಡನೇ ವಿಕೆಟ್‌ಗೆ 72 ರನ್ ಸೇರಿಸಿದರು. ಇಶಾನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ 24 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ 38 ರನ್ ಗಳಿಸಿದರು. ನಂತರ ಅಭಿಷೇಕ್ ನಾಯಕ ಸೂರ್ಯಕುಮಾರ್ ಯಾದವ್ ಜೊತೆ ಮೂರನೇ ವಿಕೆಟ್‌ಗೆ 30 ರನ್ ಸೇರಿಸಿದರು.
ಅಭಿಷೇಕ್ 30 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಅಷ್ಟೇ ಬೌಂಡರಿಗಳೊಂದಿಗೆ 55 ರನ್ ಗಳಿಸಿ ಔಟಾಗಿ ಪೆವಿಲಿಯನ್ ಸೇರಿದರು. ಆದರೆ ನಾಯಕ ಸೂರ್ಯ 13 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ 33 ರನ್ ಗಳಿಸಿದರು. ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಜೊತೆ ಐದನೇ ವಿಕೆಟ್‌ಗೆ 31 ಎಸೆತಗಳಲ್ಲಿ ದಾಖಲೆಯ 84 ರನ್‌ಗಳ ಜೊತೆಯಾಟ ಹಂಚಿಕೊಂಡರು. ಇದು ಭಾರತವನ್ನು 256 ರನ್ ಪೇರಿಸುವಂತೆ ಮಾಡಿತು. ಇದು ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಅತ್ಯಧಿಕ ಸ್ಕೋರ್ ಆಗಿದೆ. ಪಾಂಡ್ಯ 23 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 2 ಬೌಂಡರಿಗಳೊಂದಿಗೆ 50 ರನ್ ಹಾಗೂ ತಿಲಕ್ ವರ್ಮಾ 16 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿಗಳೊಂದಿಗೆ 44 ರನ್ ಗಳಿಸಿ ಅಜೇಯರಾಗುಳಿದರು.
ಭಾರತ 19 ವರ್ಷಗಳ ಹಳೆಯ ದಾಖಲೆ ಉಡೀಸ್
ಟಿ20 ವಿಶ್ವಕಪ್‌ನಲ್ಲಿ ಭಾರತದ ಅತ್ಯಧಿಕ ಸ್ಕೋರ್ 218 ರನ್ ಆಗಿದ್ದು ಇದು 2007ರಲ್ಲಿ ಡರ್ಬನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಗಳಿಸಿತು. ಜಿಂಬಾಬ್ವೆ ವಿರುದ್ಧದ ಅತ್ಯಧಿಕ ಮೊತ್ತದಿಂದಾಗಿ ಟೀಮ್ ಇಂಡಿಯಾ 19 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ.