ಢಾಕಾ: ಕ್ರಿಕೆಟ್ ಇತಿಹಾದಲ್ಲೇ ಅತ್ಯಪರೂಪದ ದಾಖಲೆಯೊಂದು ನಿರ್ಮಾಣವಾಗಿದ್ದು ತಂದೆ ಮಗ ಇಬ್ಬರೂ ಒಂದೇ ತಂಡದ ಪರ ಜಂಟಿಯಾಗಿ ಆಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಇಂತಹದೊಂದು ಅಪರೂಪದದ ಸನ್ನಿವೇಶಕ್ಕೆ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ ಸಾಕ್ಷಿಯಾಗಿದ್ದು, ಬಾಂಗ್ಲಾದೇಶದ ಸ್ಟಾರ್ ಆಟಗಾರ ಮಹಮದ್ ನಬಿ ಹಾಗೂ ಅವರ ಪುತ್ರ 19 ವರ್ಷದ ಹಸನ್ ಐಸಾಖಿಲ್ನೊಂದಿಗೆ ಕಣಕ್ಕಿಳಿದಿದ್ದಾರೆ.
ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಕಣಕ್ಕಿಳಿದ ಮೊದಲ ತಂದೆ ಮಗ ಜೋಡಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ನ 22ನೇ ಪಂದ್ಯದಲ್ಲಿ ಢಾಕಾ ಕ್ಯಾಪಿಟಲ್ಸ್ ಮತ್ತು ನೋಖಾಲಿ ಎಕ್ಸ್‌ಪ್ರೆಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ನೋಖಾಲಿ ಎಕ್ಸ್‌ಪ್ರೆಸ್ ಪರ ಮೊಹಮ್ಮದ್ ನಬಿ ಹಾಗೂ ಹಸನ್ ಐಸಾಖಿಲ್ ಜೊತೆಯಾಗಿ ಕಣಕ್ಕಿಳಿದಿದ್ದರು.
ಈ ಮೂಲಕ ಪ್ರಮುಖ ಟಿ20 ಲೀಗ್ನಲ್ಲಿ ಜೊತೆಯಾಗಿ ಆಡಿದ ತಂದೆ-ಮಗ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.
ಈ ಪಂದ್ಯದಲ್ಲಿ ಹಸನ್ ಐಸಾಖಿಲ್ ಆರಂಭಿಕನಾಗಿ ಕಣಕ್ಕಿಳಿದರೆ, ಮೊಹಮ್ಮದ್ ನಬಿ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಅಲ್ಲದೆ ಈ ಜೋಡಿಯು 53 ರನ್ಗಳ ಜೊತೆಯಾಟವಾಡುವ ಮೂಲಕ ಟಿ20 ಇತಿಹಾಸದಲ್ಲೇ ಅರ್ಧಶತಕದ ಪಾಲುದಾರಿಕೆ ನಿಭಾಯಿಸಿದ ವಿಶ್ವದ ಮೊದಲ ತಂದೆ-ಮಗ ಜೋಡಿ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
ಹಾಗೆಯೇ ತಂದೆಯೊಂದಿಗೆ ಕಣಕ್ಕಿಳಿದು ಟಿ20 ಕ್ರಿಕೆಟ್ನಲ್ಲಿ ಹಾಫ್ ಸೆಂಚುರಿ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಕೂಡ ಹಸನ್ ಐಸಾಖಿಲ್ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ 60 ಎಸೆತಗಳನ್ನು ಎದುರಿಸಿದ ಐಸಾಖಿಲ್ 5 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 92 ರನ್ ಬಾರಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೋಖಾಲಿ ಎಕ್ಸ್‌ಪ್ರೆಸ್ 20 ಓವರ್ಗಳಲ್ಲಿ 184 ರನ್ಗಳಿಸಿದರೆ, ಢಾಕಾ ಕ್ಯಾಪಿಟಲ್ಸ್ 18.2 ಓವರ್ಗಳಲ್ಲಿ 143 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ನೋಖಾಲಿ ಎಕ್ಸ್‌ಪ್ರೆಸ್ ತಂಡವು 41 ರನ್ಗಳ ಜಯ ಸಾಧಿಸಿದೆ.