ಸೋಮವಾರ ನವಿ ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) 2026ನೇ ಆವೃತ್ತಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಭರ್ಜರಿ ಗೆಲುವು ಸಾಧಿಸುವುದರೊಂದಿಗೆ ಡಬ್ಲ್ಯುಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಪಂದ್ಯಾವಳಿಯಲ್ಲಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಜೈಂಟ್ಸ್ (GG) ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು, ಮುನ್ನಡೆ ಕಾಯ್ದುಕೊಂಡಿವೆ. UP ವಾರಿಯರ್ಸ್ (UPW) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಇನ್ನೂ ಒಂದು ಪಂದ್ಯವನ್ನು ಗೆದ್ದಿಲ್ಲ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ (MI) ಒಂದು ಪಂದ್ಯವನ್ನು ಸೋತಿದ್ದು, ಮತ್ತೊಂದರಲ್ಲಿ ಗೆಲುವು ಕಂಡಿದೆ.
ಸೋಮವಾರ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಯ ಗ್ರೇಸ್ ಹ್ಯಾರಿಸ್ ಮತ್ತು ನಾಯಕಿ ಸ್ಮೃತಿ ಮಂಧಾನ ಅವರ ಸ್ಫೋಟಕ 137 ರನ್‌ಗಳ ಜೊತೆಯಾಟವು RCB ತಂಡವನ್ನು ಒಂಬತ್ತು ವಿಕೆಟ್‌ಗಳ ಜಯಕ್ಕೆ ಕೊಂಡೊಯ್ದಿತು. ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಯುಪಿಡಬ್ಲ್ಯು ತಂಡ ಆರಂಭದಲ್ಲಿಯೇ ಸಂಕಷ್ಟಕ್ಕೆ ಸಿಲುಕಿತ್ತು. ಐದು ವಿಕೆಟ್ ಕಳೆದುಕೊಂಡು ಕೇವಲ 50 ರನ್ ಗಳಿಸಿತ್ತು. ನಂತರ ದೀಪ್ತಿ ಶರ್ಮಾ (45*) ಮತ್ತು ಡಿಯಾಂಡ್ರಾ ಡಾಟಿನ್ (40*) ತಂಡವನ್ನು 143/5 ರನ್ ಗಳಿಸಲು ನೆರವಾದರು. ಆರ್‌ಸಿಬಿ ಪರ ನಾಡಿನ್ ಡಿ ಕ್ಲರ್ಕ್ ಮತ್ತು ಶ್ರೇಯಾಂಕಾ ಪಾಟೀಲ್ ತಲಾ ಎರಡು ವಿಕೆಟ್ ಪಡೆದರು.
ಯುಪಿಡಬ್ಲ್ಯು ನೀಡಿದ 144 ರನ್ ಗುರಿ ಬೆನ್ನತ್ತಿದ ಆರ್‌ಸಿಬಿಗೆ ಗ್ರೇಸ್ ಹ್ಯಾರಿಸ್ 40 ಎಸೆತಗಳಲ್ಲಿ 85 ರನ್ ಗಳಿಸಿ ಅತ್ಯುತ್ತಮ ಪ್ರದರ್ಶನ ನೀಡಿದರು. ಸ್ಮೃತಿ ಮಂಧಾನ 47* ರನ್ ಗಳಿಸಿ ಅಜೇಯರಾಗಿ ಉಳಿದರು. ಪಂದ್ಯಾವಳಿಯಲ್ಲಿ ಇದು RCB ಗೆ ಸತತ ಎರಡನೇ ಗೆಲುವಾಗಿದ್ದು, UPW ಗೆ ಸತತ ಎರಡನೇ ಸೋಲಾಗಿದೆ.
ಡಬ್ಲ್ಯುಪಿಎಲ್ 2026 ಅಂಕಪಟ್ಟಿ
ಯುಪಿಡಬ್ಲ್ಯು ವಿರುದ್ಧ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ನೆಟ್ ರನ್ ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ನಾಲ್ಕು ಅಂಕಗಳನ್ನು ಪಡೆದಿದ್ದು, +1.964 ನೆಟ್ ರನ್ ರೇಟ್ ಹೊಂದಿದೆ.
ಗುಜರಾತ್ ಟೈಟಾನ್ಸ್ ಕೂಡ ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ನಾಲ್ಕು ಅಂಕಗಳೊಂದಿಗೆ +0.350 ನೆಟ್ ರನ್ ರೇಟ್ ಹೊಂದಿದೆ.
ಹರ್ಮನ್ ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆಲುವು ಸಾಧಿಸುವ ಮೂಲಕ 2 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ.