ವಡೋದರ: ಮಹಿಳಾ ಪ್ರೀಮಿಯರ್ ಲೀಗ್ (WPL 2026) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇತಿಹಾಸ ನಿರ್ಮಿಸಿದ್ದು ಇದೇ ಮೊದಲ ಬಾರಿಗೆ ಸತತ 5 ಪಂದ್ಯಗನ್ನು ಗೆಲ್ಲುವ ಮೂಲಕ ಪ್ಲೇಆಫ್ ಗೆ ಲಗ್ಗೆ ಇರಿಸಿದೆ.
ವಡೋದರಾದಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸತತ ಗೆಲುವಿನ ಮೂಲಕ ಪ್ಲೇಆಫ್‌ಗೆ ಲಗ್ಗೆ ಇಟ್ಟ ಮೊದಲ ತಂಡವಾಗಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ ಮಹಿಳಾ ತಂಡ ನಿಗಧಿತ 20 ಓವರ್ ನಲ್ಲಿ 6 ವಿಕೆಟ್ 178 ರನ್ ಕಲೆಹಾಕಿ ಗುಜರಾತ್ ಗೆ 179 ರನ್ ಗುರಿ ನೀಡಿತ್ತು.
ಈ ಸವಾಲಿನ ಗುರಿ ಬೆನ್ನು ಹತ್ತಿದ ಗುಜರಾತ್ ಜೈಂಟ್ಸ್ ತಂಡ 20 ಓವರ್ ನಲ್ಲಿ 8 ವಿಕೆಟ್ ಕಳೆದುಕೊಂಡು 117 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಆ ಮೂಲಕ 61 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಈ ಮೂಲಕ ಟೂರ್ನಿಯಲ್ಲಿ ಸತತ 5ನೇ ಗೆಲುವು ದಾಖಲಿಸಿ ಒಟ್ಟು 10 ಅಂಕಗಳೊಂದಿಗೆ ನೇರವಾಗಿ ಪ್ಲೇಆಫ್ ಹಂತಕ್ಕೇರಿದೆ.
ಆರ್ ಸಿಬಿ ಸಾರ್ವಕಾಲಿಕ ದಾಖಲೆ
ಈ ಪಂದ್ಯದ ಗೆಲುವಿನ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಹೊಸ ಇತಿಹಾಸ ನಿರ್ಮಿಸಿದ್ದು, ಸತತ 6 ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಈ ದಾಖಲೆ ನಿರ್ಮಿಸಿದೆ. ಅಂದರೆ WPL ನಲ್ಲಿ ಇದೇ ಮೊದಲ ಬಾರಿಗೆ ತಂಡವೊಂದು ಸತತವಾಗಿ ಅತ್ಯಧಿಕ ಪಂದ್ಯಗಳನ್ನು ಗೆದ್ದುಕೊಂಡಿದೆ.
ಮಾತ್ರವಲ್ಲದೇ ಪ್ಲೇಆಫ್ ಗೆ ಅರ್ಹತೆ ಪಡೆದಿದೆ. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಸತತವಾಗಿ ಅತ್ಯಧಿಕ ಪಂದ್ಯಗಳನ್ನು ಗೆದ್ದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2025 ರಲ್ಲಿ ಆಡಿದ ಕೊನೆಯ ಪಂದ್ಯದಲ್ಲಿ ಜಯ ಸಾಧಿಸಿತ್ತು. ಇದೀಗ ಬ್ಯಾಕ್ ಟು ಬ್ಯಾಕ್ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡದ ದಾಖಲೆಯನ್ನು ಮುರಿದಿದೆ.
2025 ರಿಂದ ಶುರುವಾದ ರಾಯಲ್ ಪಡೆಯ ಗೆಲುವಿನ ನಾಗಾಲೋಟ 2026 ರಲ್ಲೂ ಮುಂದುವರೆದಿದೆ. ಈ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಸತತವಾಗಿ 6 ಪಂದ್ಯಗಳನ್ನು ಗೆದ್ದ ತಂಡವೆಂಬ ಆಲ್ ಟೈಮ್ ರೆಕಾರ್ಡ್ ನಿರ್ಮಿಸಿದೆ.
ಫೈನಲ್ ಗೇರಲು ಸುವರ್ಣಾವಕಾಶ
ಪ್ಲೇಆಫ್ ಆಡುವುದನ್ನು ಖಚಿತಪಡಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೇರವಾಗಿ ಫೈನಲ್ಗೇರಲು ಉತ್ತಮ ಅವಕಾಶವಿದ್ದು ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಪ್ಲೇಆಫ್ ಆಡಲಿರುವುದು ಅಂಕ ಪಟ್ಟಿಯಲ್ಲಿ ಟಾಪ್-3 ಸ್ಥಾನಗಳನ್ನು ಪಡೆದಿರುವ ತಂಡಗಳು.
ಹೀಗಾಗಿ ಲೀಗ್ ಹಂತದ ಮುಕ್ತಾಯದ ವೇಳೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸುವ ತಂಡವು ನೇರವಾಗಿ ಫೈನಲ್ಗೆ ಅರ್ಹತೆ ಪಡೆಯುತ್ತದೆ. ಇನ್ನುಳಿದ ಎರಡು ತಂಡಗಳು ಎಲಿಮಿನೇಟರ್ ಪಂದ್ಯವಾಡಲಿದೆ. ಇದರಲ್ಲಿ ಗೆಲ್ಲುವ ತಂಡವು ಫೈನಲ್ಗೆ ಪ್ರವೇಶಿಸುತ್ತದೆ. ಅದರಂತೆ ಲೀಗ್ ಹಂತದಲ್ಲಿ ಟೇಬಲ್ ಟಾಪರ್ ಆದರೆ ಆರ್ ಸಿಬಿ ಕೂಡ ನೇರವಾಗಿ ಫೈನಲ್ ಗೇರುವ ಸಾಧ್ಯತೆ ಇದೆ.