ಆರ್ ಸಿಬಿ ಗೆಲುವಿನ ವಿಜಯತ್ಸವ ವೇಳೆ ನಿಯಮ ಉಲ್ಲಂಘನೆ 75 ವಾಹನಗಳು ಪೊಲೀಸ್ ವಶಕ್ಕೆ 
ಕ್ರಿಕೆಟ್

IPL 2026 Final: ಸಂಭ್ರಮಾಚರಣೆ ಮಾಡುತ್ತಿದ್ದ RCB ಅಭಿಮಾನಿಗಳಿಗೆ ಶಾಕ್; 75 ವಾಹನಗಳು ಬೆಂಗಳೂರು ಪೊಲೀಸರ ವಶಕ್ಕೆ!

ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೋರಮಂಗಲ, ಜಯನಗರ, ರಾಜಾಜಿನಗರ ಸೇರಿದಂತೆ ನಗರದ ಹಲವು ಪ್ರಮುಖ ಪ್ರದೇಶಗಳಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್ 2026ರ ಪ್ರಶಸ್ತಿ ಗೆದ್ದ ಬಳಿಕ ನಗರಾದ್ಯಂತ ಅಭಿಮಾನಿಗಳು ಭರ್ಜರಿ ಆಚರಣೆ ನಡೆಸಿದ ವೇಳೆ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಬೆಂಗಳೂರು ಸಂಚಾರ ಪೊಲೀಸರು ಬರೊಬ್ಬರಿ 75 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಭಾನುವಾರ ರಾತ್ರಿ ಗುಜರಾತ್ ಟೈಟನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಜಯ ಸಾಧಿಸಿದ ತಕ್ಷಣ ಸಾವಿರಾರು ಅಭಿಮಾನಿಗಳು ನಗರದ ರಸ್ತೆಗಳಿಗೆ ಇಳಿದು ಸಂಭ್ರಮಾಚರಣೆ ನಡೆಸಿದರು. ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೋರಮಂಗಲ, ಜಯನಗರ, ರಾಜಾಜಿನಗರ ಸೇರಿದಂತೆ ನಗರದ ಹಲವು ಪ್ರಮುಖ ಪ್ರದೇಶಗಳಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ಆದರೆ ಈ ಸಂಭ್ರಮದ ನಡುವೆ ಅನೇಕರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಪ್ರಮುಖ ಜಂಕ್ಷನ್‌ಗಳು ಮತ್ತು ಗಸ್ತು ಮಾರ್ಗಗಳಲ್ಲಿ ನಿಯೋಜಿಸಲಾಗಿತ್ತು.

ವಾಹನಗಳ ಸಂಚಾರದ ಮೇಲೆ ನಿಗಾ ವಹಿಸಲು ಮತ್ತು ಸಾರ್ವಜನಿಕ ಶಾಂತಿ ಕಾಪಾಡಲು ಆಯಕಟ್ಟಿನ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು (ನಾಕಾ ಪಾಯಿಂಟ್‌ಗಳು) ಸ್ಥಾಪಿಸಲಾಗಿತ್ತು. ಟ್ರಿಪಲ್ ರೈಡಿಂಗ್, ಅಪಾಯಕಾರಿ ವೀಲಿಂಗ್, ನಿರ್ಲಕ್ಷ್ಯ ಚಾಲನೆ, ಅತಿವೇಗ ಹಾಗೂ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ಉಂಟುಮಾಡುವ ರೀತಿಯ ವಾಹನ ಚಾಲನೆ ಪ್ರಕರಣಗಳು ದಾಖಲಾಗಿವೆ.

ಎಂಜಿ ರಸ್ತೆಯಲ್ಲಿ ಸಂಚಾರ ದಟ್ಟಣೆ

ಆರ್ ಸಿಬಿ ಗೆಲುವಿನ ಬಳಿಕ ಅಭಿಮಾನಿಗಳು ರಸ್ತೆಗಿಳಿದು ಸಂಭ್ರಮಾಚರಣೆ ನಡೆಸಿದ ಪರಿಣಾಮ ನಗರದ ಎಂ.ಜಿ. ರಸ್ತೆಯಲ್ಲಿ ಭಾರೀ ಟ್ರಾಫಿಕ್ ದಟ್ಟಣೆ ಉಂಟಾಯಿತು. ಇದೇ ವೇಳೆ ಸಾರ್ವಜನಿಕ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರು ವಿಶೇಷ ಜಾರಿ ಕಾರ್ಯಾಚರಣೆ ನಡೆಸಿದರು.

ಇದೇ ಮೊದೇಲನಲ್ಲ

ಕಳೆದ ಕೆಲವು ವರ್ಷಗಳಿಂದ ದೊಡ್ಡ ಕ್ರೀಡಾ ಪಂದ್ಯಗಳು ಮತ್ತು ಹಬ್ಬದ ಸಂದರ್ಭಗಳಲ್ಲಿ ಅಪಾಯಕಾರಿ ವಾಹನ ಚಾಲನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಕಟ್ಟುನಿಟ್ಟಿನ ನಿಗಾವಹಿಸುತ್ತಿದ್ದಾರೆ. ಆದಾಗ್ಯೂ, ಕೆಲ ಸಂಚಾರ ನಿಯಮ ಉಲ್ಲಂಘನೆಗಳನ್ನು ಹೊರತುಪಡಿಸಿದರೆ ನಗರದಲ್ಲಿ ಒಟ್ಟಾರೆ ಶಾಂತಿಯುತ ವಾತಾವರಣದಲ್ಲೇ ಸಂಭ್ರಮಾಚರಣೆ ನಡೆದಿದ್ದು, ಆರ್‌ಸಿಬಿ ಸತತ ಎರಡನೇ ಬಾರಿ ಐಪಿಎಲ್ ಟ್ರೋಫಿ ಗೆದ್ದ ಸಂತಸದಲ್ಲಿ ಸಾವಿರಾರು ಅಭಿಮಾನಿಗಳು ಮಧ್ಯರಾತ್ರಿವರೆಗೂ ವಿಜಯೋತ್ಸವದಲ್ಲಿ ತೊಡಗಿದ್ದರು.

ಮುಂದಿನ ದಿನಗಳಲ್ಲಿ ಸಿಸಿಟಿವಿ ದೃಶ್ಯಾವಳಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳನ್ನು ಪರಿಶೀಲಿಸಿ ಇನ್ನಷ್ಟು ನಿಯಮ ಉಲ್ಲಂಘಿಸಿದವರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಿಶೇಷ ಕಾರ್ಯಾಚರಣೆ

ಪೊಲೀಸರ ಮಾಹಿತಿ ಪ್ರಕಾರ, ವಿಶೇಷ ತಂಡಗಳನ್ನು ನಗರದ ವಿವಿಧ ಭಾಗಗಳಲ್ಲಿ ನಿಯೋಜಿಸಲಾಗಿತ್ತು. ಸಿಸಿಟಿವಿ ಕ್ಯಾಮೆರಾಗಳು, ಮೊಬೈಲ್ ಪ್ಯಾಟ್ರಲಿಂಗ್ ವಾಹನಗಳು ಹಾಗೂ ಮೈದಾನದಲ್ಲಿದ್ದ ಸಿಬ್ಬಂದಿಯ ನೆರವಿನಿಂದ ಉಲ್ಲಂಘನೆಗಳನ್ನು ಪತ್ತೆಹಚ್ಚಲಾಯಿತು.

ಕಾರ್ಯಾಚರಣೆಯ ವೇಳೆ ಒಟ್ಟು 75 ದ್ವಿಚಕ್ರ ವಾಹನಗಳು ಹಾಗೂ ಇತರೆ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 71 ದ್ವಿಚಕ್ರ ವಾಹನಗಳು, ಮೂರು ಆಟೋರಿಕ್ಷಾಗಳು ಹಾಗೂ ಒಂದು ಕಾರು ಸೇರಿವೆ. ಹಲವಾರು ಯುವಕರು ಸಾರ್ವಜನಿಕ ರಸ್ತೆಗಳ ಮೇಲೆ ವೀಲಿಂಗ್ ಮಾಡುತ್ತಿರುವುದು ಕಂಡುಬಂದಿದ್ದು, ಅನೇಕ ಬೈಕ್‌ಗಳಲ್ಲಿ ಮೂವರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಹೆಲ್ಮೆಟ್ ಇಲ್ಲದೆ ಪ್ರಯಾಣಿಸುತ್ತಿರುವುದು ಪತ್ತೆಯಾಗಿದೆ.

ಇದಲ್ಲದೆ, ನಿರ್ಲಕ್ಷ್ಯ ಹಾಗೂ ಅಪಾಯಕಾರಿ ಚಾಲನೆ, ಅತಿವೇಗ, ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ರೀತಿಯ ವರ್ತನೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಕಾರ್ಯಾಚರಣೆ ಉತ್ತರ ವಿಭಾಗದ ವ್ಯಾಪ್ತಿಯ 13 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ನಡೆಯಿತು.

ಈ ವಿಶೇಷ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರು ಮುನ್ನಡೆಸಿದರು. ಕಾರ್ಯಾಚರಣೆಯಲ್ಲಿ ಮೂರು ಸಹಾಯಕ ಪೊಲೀಸ್ ಆಯುಕ್ತರು, 13 ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಹಾಗೂ ಹಲವು ಪೊಲೀಸ್ ತಂಡಗಳು ಸಮನ್ವಯದೊಂದಿಗೆ ಭಾಗವಹಿಸಿದ್ದವು.

ಈ ಕುರಿತು ಮಾತನಾಡಿದ ಹಿರಿಯ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು, ಕ್ರೀಡಾ ವಿಜಯೋತ್ಸವ ಆಚರಿಸುವುದು ಪ್ರತಿಯೊಬ್ಬರ ಹಕ್ಕು ಆದರೆ ಅದು ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟುಮಾಡಬಾರದು ಎಂದು ಹೇಳಿದ್ದಾರೆ. 'ಜನರು ತಮ್ಮ ನೆಚ್ಚಿನ ತಂಡದ ಗೆಲುವನ್ನು ಆಚರಿಸುವ ಹಕ್ಕು ಹೊಂದಿದ್ದಾರೆ. ಆದರೆ ಸಾರ್ವಜನಿಕ ರಸ್ತೆಗಳ ಮೇಲೆ ವೀಲಿಂಗ್‌ನಂತಹ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸುವುದು ಕೇವಲ ಸವಾರರ ಜೀವವನ್ನಷ್ಟೇ ಅಲ್ಲ, ಇತರ ರಸ್ತೆ ಬಳಕೆದಾರರ ಜೀವವನ್ನೂ ಅಪಾಯಕ್ಕೆ ತಳ್ಳುತ್ತದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ' ಎಂದು ಅವರು ತಿಳಿಸಿದ್ದಾರೆ.

ಬೈಕ್ ವೀಲಿಂಗ್, ಅಪಾಯಕಾರಿ ಸ್ಟಂಟ್ಸ್

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಲವು ವಿಡಿಯೊಗಳಲ್ಲಿ ಯುವಕರು ಆರ್‌ಸಿಬಿ ಧ್ವಜಗಳನ್ನು ಹಿಡಿದು ಬೈಕ್‌ಗಳ ಮೆರವಣಿಗೆ ನಡೆಸುತ್ತಿರುವುದು, ಚಲಿಸುತ್ತಿರುವ ವಾಹನಗಳ ಮೇಲೆ ನಿಂತು ಸಂಭ್ರಮಿಸುತ್ತಿರುವುದು ಹಾಗೂ ವೀಲಿಂಗ್ ಮಾಡುವ ದೃಶ್ಯಗಳು ಕಾಣಿಸಿಕೊಂಡಿವೆ. ಕೆಲವೆಡೆ ಈ ಸಂಭ್ರಮಾಚರಣೆಯಿಂದ ಟ್ರಾಫಿಕ್ ದಟ್ಟಣೆಯೂ ಉಂಟಾಗಿದೆ. ಯಾವುದೇ ಅನಾಹುತ ಸಂಭವಿಸದಂತೆ ತಡೆಯಲು ಹಾಗೂ ಸಂಚಾರ ಸುಗಮವಾಗಿಡಲು ಪ್ರಮುಖ ಜಂಕ್ಷನ್‌ಗಳು ಮತ್ತು ಜನಸಂದಣಿ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಪೊಲೀಸರು ಸಾರ್ವಜನಿಕರಿಗೆ ಜವಾಬ್ದಾರಿಯುತವಾಗಿ ಸಂಭ್ರಮಾಚರಣೆ ನಡೆಸುವಂತೆ ಮನವಿ ಮಾಡಿದ್ದು, ರಸ್ತೆಗಳಲ್ಲಿ ಅಪಾಯಕಾರಿ ಸಾಹಸಗಳಿಗೆ ಮುಂದಾಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ನಿಯಮ ಉಲ್ಲಂಘಿಸುವವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ದಂಡ, ಚಾಲನಾ ಪರವಾನಗಿ ಅಮಾನತು ಹಾಗೂ ಗಂಭೀರ ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾವಣಗೆರೆ ದಕ್ಷಿಣ ಉಪಚುನಾವಣೆಯ ಆಡಿಯೋ ವೈರಲ್: ಅದು 'ನಕಲಿ' ಎಂದು ಜಾರಿಕೊಂಡ ಜಮೀರ್

ಡಿಕೆಶಿ ಸಿಎಂ, ದೇವೇಗೌಡರ ಮನೆಯಲ್ಲಿ ಸೂತಕದ ಛಾಯೆ ಹೇಳಿಕೆ: ಚಲುವರಾಯಸ್ವಾಮಿ ನಾಲಿಗೆ ಕತ್ತರಿಸುತ್ತೇನೆಂದ ಸುರೇಶ್ ಗೌಡ!

ಬಾಲಿವುಡ್ ನಟಿ ತಾಪ್ಸಿ ಪನ್ನು ತನ್ನ ದೇಹಕ್ಕೆ ತಾನೇ ಟಾರ್ಚರ್ ಕೊಟ್ಟಿದ್ದೇಕೆ?

'ಈ ದೇಶದಲ್ಲಿರಲು ನಾಚಿಕೆಯಾಗುತ್ತಿದೆ': ಅಭಿಷೇಕ್ ಬ್ಯಾನರ್ಜಿ ಮೇಲಿನ ದಾಳಿಗೆ ಕಪಿಲ್ ಸಿಬಲ್ ಆಕ್ರೋಶ

ಝೀರೋ ಟ್ರಾಫಿಕ್ ಎಫೆಕ್ಟ್: ಕಾರಿನಲ್ಲಿ ಸಿಲುಕಿದ್ದ ಗರ್ಭಿಣಿ ಮಹಿಳೆ, ರಸ್ತೆಯಲ್ಲೇ ಪತಿ ಪ್ರತಿಭಟನೆ; ತನಿಖೆಗೆ ಆದೇಶ

SCROLL FOR NEXT