ಬೆಂಗಳೂರು: ಐಪಿಎಲ್ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಇದೀಗ ಭಾರತ ಕ್ರಿಕೆಟ್ ತಂಡದ ಗಮನ ಏಕದಿನ ಕ್ರಿಕೆಟ್ ನತ್ತ ಹೊರಳಿದ್ದು, ಇದೇ ವಿಚಾರವಾಗಿ ಬಿಸಿಸಿಐ ಹಾರ್ದಿಕ್ ಪಾಂಡ್ಯಾ ಮತ್ತು ರೋಹಿತ್ ಶರ್ಮಾ ಅವರನ್ನು ಬೆಂಗಳೂರಿಗೆ ಬರಲು ಸೂಚಿಸಿದೆ.
ಹೌದು.. ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯಾ (Hardik Pandya) ಮತ್ತು ರೋಹಿತ್ ಶರ್ಮಾ (Rohit Sharma) ಅವರ ಹೆಸರುಗಳನ್ನು ಸೇರಿಸಲಾಗಿದ್ದರೂ, ಅವರ ಭಾಗವಹಿಸುವಿಕೆ ಫಿಟ್ನೆಸ್ ಕ್ಲಿಯರೆನ್ಸ್‌ಗೆ ಒಳಪಟ್ಟಿರುತ್ತದೆ. ಹೀಗಾಗಿ ಇಬ್ಬರೂ ಆಟಗಾರರನ್ನು ಬೆಂಗಳೂರಿಗೆ ಬರಲು ಸೂಚಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತಿಳಿಸಿದೆ.
ಭಾರತ ತಂಡವು ಅಫ್ಘಾನಿಸ್ತಾನ ವಿರುದ್ಧ ಒಂದು ಟೆಸ್ಟ್ ಪಂದ್ಯ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಜೂನ್ 6ರಂದು ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಜೂನ್ 13ರಿಂದ ಏಕದಿನ ಸರಣಿ ಆರಂಭವಾಗಲಿದೆ. ಈಗಾಗಲೇ ಬಿಸಿಸಿಐ ಎರಡೂ ಮಾದರಿಗಳ ತಂಡಗಳನ್ನು ಪ್ರಕಟಿಸಿದೆ.
ಹಾರ್ದಿಕ್ ಹಾಜರು
ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಗೆ ಆಗಮಿಸಲಿದ್ದು, ಸುಮಾರು ಒಂದು ವಾರ ಅಲ್ಲಿ ಫಿಟ್ನೆಸ್ ಮೌಲ್ಯಮಾಪನ ಹಾಗೂ ತರಬೇತಿ ಪಡೆದ ನಂತರ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗಾಗಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಇದೇ ವೇಳೆ, ಬಿಸಿಸಿಐ ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾ ಇಬ್ಬರಿಗೂ ಬೆಂಗಳೂರಿನ CoE ಗೆ ವರದಿ ಮಾಡಲು ಸೂಚಿಸಿದ್ದರೂ, ರೋಹಿತ್ ಅವರ ಆಗಮನದ ಕುರಿತು ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ವರದಿ ತಿಳಿಸಿದೆ.
ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಭಾರತದ ಏಕದಿನ ತಂಡ ಇಂತಿದೆ
ಶುಭಮನ್ ಗಿಲ್ (ನಾಯಕ)
ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ
ಶ್ರೇಯಸ್ ಅಯ್ಯರ್ (ಉಪನಾಯಕ)
ಕೆಎಲ್ ರಾಹುಲ್ (ವಿಕೆಟ್ ಕೀಪರ್)
ಇಶಾನ್ ಕಿಶನ್ (ವಿಕೆಟ್ ಕೀಪರ್)
ಹಾರ್ದಿಕ್ ಪಾಂಡ್ಯ
ನಿತೀಶ್ ಕುಮಾರ್ ರೆಡ್ಡಿ
ವಾಷಿಂಗ್ಟನ್ ಸುಂದರ್
ಕುಲದೀಪ್ ಯಾದವ್
ಅರ್ಷದೀಪ್ ಸಿಂಗ್
ಪ್ರಸಿದ್ಧ್ ಕೃಷ್ಣ
ರಾಜಕುಮಾರ ಯಾದವ್
ಗುರ್ನೂರ್ ಬ್ರಾರ್
ಹರ್ಷ್ ದುಬೆ