ನವದೆಹಲಿ: ಭಾರತದ ಟಿ20 ಸ್ಚಾರ್ ಆಟಗಾರ ಸೂರ್ಯಕುಮಾರ್ ಯಾದವ್ ಗೆ ಸಂಬಂಧಿಸಿದ ನಿವೃತ್ತಿ ಪೋಸ್ಟ್ ವೊಂದು ವ್ಯಾಪಕ ವೈರಲ್ ಆಗುತ್ತಿದ್ದು, ನಾಯಕತ್ವ ಕೈತಪ್ಪಿದ ಬೆನ್ನಲ್ಲೇ ಸೂರ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿರುವಂತೆ ಪೋಸ್ಟ್ ಮಾಡಲಾಗಿದೆ.
ಹೌದು.. ಸೂರ್ಯಕುಮಾರ್ ಯಾದವ್ (SKY) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸುತ್ತಿದ್ದು, ಅವರ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಂತೆ ಕಾಣಿಸಿಕೊಂಡಿದ್ದ ನಕಲಿ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯೊಂದು ಈ ಕುರಿತು ಪೋಸ್ಟ್ ಮಾಡಿದ್ದು, ಅನೇಕ ಅಭಿಮಾನಿಗಳು ಅದನ್ನು ನಿಜವೆಂದು ನಂಬಿದ್ದಾರೆ.
ಭಾರತ ತಂಡದ ಟಿ20 ನಾಯಕತ್ವವನ್ನು ಸೂರ್ಯಕುಮಾರ್ ಯಾದವ್ ಅವರಿಂದ ಶ್ರೇಯಸ್ ಅಯ್ಯರ್ ಅವರಿಗೆ ಹಸ್ತಾಂತರಿಸಿದ ಬೆನ್ನಲ್ಲೇ ಈ ಪೋಸ್ಟ್ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಪೋಸ್ಟ್ ನಲ್ಲೇನಿದೆ?
"ಭಾರತವನ್ನು ಪ್ರತಿನಿಧಿಸುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವವಾಗಿತ್ತು. ಚೊಚ್ಚಲ ಪಂದ್ಯದಲ್ಲಿ ಸಿಕ್ಸರ್‌ನಿಂದ ಹಿಡಿದು ಟಿ20 ವಿಶ್ವಕಪ್ ಎತ್ತಿಹಿಡಿಯುವವರೆಗಿನ ಈ ಪಯಣ ಮರೆಯಲಾಗದಂತದ್ದು. ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ಬಿಸಿಸಿಐ, ನನ್ನ ಸಹ ಆಟಗಾರರು ಮತ್ತು ಅಭಿಮಾನಿಗಳಿಗೆ ಧನ್ಯವಾದಗಳು. ಈಗ ಜೀವನದ ಮುಂದಿನ ಅಧ್ಯಾಯದತ್ತ ಹೆಜ್ಜೆ ಇಡುತ್ತಿದ್ದೇನೆ," ಎಂದು ಬರೆಯಲಾಗಿದೆ.
ಖಾತೆಯೇ ನಕಲಿ, ಸೂರ್ಯಕುಮಾರ್ ಯಾದವ್ ರ ಅಧಿಕೃತ ಖಾತೆಯಲ್ಲ!
ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಈ ಪೋಸ್ಟ್ ಬಂದ ಖಾತೆಯನ್ನು ಪರಿಶೀಲಿಸಿದಾಗ ಅದು ನಕಲಿ ಖಾತೆ ಎಂಬುದು ಸ್ಪಷ್ಟವಾಗಿದೆ. ಆ ಖಾತೆಯ ಹೆಸರು "@unreal_skyy" ಆಗಿದ್ದು, ಇದು ಸೂರ್ಯಕುಮಾರ್ ಯಾದವ್ ಅವರ ಅಧಿಕೃತ ಖಾತೆಯಲ್ಲ. ಅವರ ನಿಜವಾದ ಎಕ್ಸ್ ಖಾತೆ "@surya_14kumar" ಆಗಿದ್ದು, ಅದಕ್ಕೆ ಸುಮಾರು 43 ಲಕ್ಷಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ. ಆದರೆ ವೈರಲ್ ಆದ ನಕಲಿ ಖಾತೆಗೆ ಕೇವಲ 40 ಮಂದಿ ಅನುಯಾಯಿಗಳು ಮಾತ್ರ ಇದ್ದಾರೆ.
ಪೋಸ್ಟ್ ವೈರಲ್ ಬೆನ್ನಲ್ಲೇ ವ್ಯಾಪಕ ಪ್ರತಿಕ್ರಿಯೆಗಳು
ಇನ್ನು ಇದರ ನಡುವೆಯೂ ಹಲವಾರು ಅಭಿಮಾನಿಗಳು ಈ ಸುದ್ದಿಯನ್ನು ನಿಜವೆಂದು ನಂಬಿ ಅವರಿಗೆ ಶುಭ ಹಾರೈಸಲು ಆರಂಭಿಸಿದರು. ಒಬ್ಬ ಅಭಿಮಾನಿ, "ಎಲ್ಲದಕ್ಕೂ ಧನ್ಯವಾದಗಳು ಸೂರ್ಯಾ" ಎಂದು ಬರೆದರೆ, ಇನ್ನೊಬ್ಬರು, "ನಿಮ್ಮ ಅದ್ಭುತ ಕ್ಯಾಚ್ ಇಲ್ಲದೆ ಟಿ20 ವಿಶ್ವಕಪ್ ಗೆಲುವು ಸಾಧ್ಯವಾಗುತ್ತಿರಲಿಲ್ಲ. ನಿಮ್ಮ ಕೊಡುಗೆಗೆ ಧನ್ಯವಾದಗಳು" ಎಂದು ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬ ಬಳಕೆದಾರ "ಒಳ್ಳೆಯ ನಿರ್ಧಾರ. ನಿಮ್ಮ ಮುಂದಿನ ಜೀವನ ಸುಖ-ಸಮೃದ್ಧಿಯಿಂದ ಕೂಡಿರಲಿ. ಭಾರತಕ್ಕೆ ವಿಶ್ವಕಪ್ ತಂದುಕೊಟ್ಟಿದ್ದಕ್ಕಾಗಿ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಅಭಿಮಾನಿ, "ಭಾರತೀಯ ಕ್ರಿಕೆಟ್‌ಗೆ ನೀಡಿದ ಅದ್ಭುತ ಸೇವೆಗೆ ಧನ್ಯವಾದಗಳು ಸೂರ್ಯಾ. ನಿಮ್ಮ ರಾಜಕೀಯ ಜೀವನಕ್ಕೂ ಶುಭವಾಗಲಿ" ಎಂದು ಕಾಮೆಂಟ್ ಮಾಡಿದ್ದಾರೆ.
ನಕಲಿ ಖಾತೆ ಗುರುತಿಸಿದ ಅಭಿಮಾನಿಗಳಿಂದ ಛೀಮಾರಿ
ಇನ್ನು ಕೆಲ ಕ್ರಿಕೆಟ್ ಅಭಿಮಾನಿಗಳು ಇದು ನಕಲಿ ಖಾತೆ ಎಂಬುದನ್ನು ತಕ್ಷಣವೇ ಗುರುತಿಸಿದರು. ಕೆಲವರು ಈ ಕುರಿತು ಮೀಮ್ಸ್ ಹಂಚಿಕೊಂಡರೆ, ಮತ್ತೊಬ್ಬ ಅಭಿಮಾನಿ, "ಒಬ್ಬ ಸಾರ್ವಕಾಲಿಕ ಶ್ರೇಷ್ಠ ಟಿ20 ಆಟಗಾರನ ಬಗ್ಗೆ ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಿ ಮನರಂಜನೆ ಪಡೆಯುವುದು ನಾಚಿಕೆಗೇಡಿನ ಸಂಗತಿ" ಎಂದು ಆಕ್ರೋಶ ವ್ಯಕ್ತಪಡಿಸಿದರು.