2026ರ ಮಹಿಳಾ ಟಿ20 ವಿಶ್ವಕಪ್ ನಂತರ ನಿವೃತ್ತಿಯಾಗುತ್ತೀರಾ ಎಂದು ಕೇಳಿದ ವರದಿಗಾರರಿಗೆ ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಜೂನ್ 12 ರಿಂದ ಪ್ರಾರಂಭವಾಗಲಿರುವ ಪಂದ್ಯಾವಳಿಗೂ ಮುನ್ನ ಭಾನುವಾರ ಲಂಡನ್‌ನಲ್ಲಿ ನಡೆದ ಕ್ಯಾಪ್ಟನ್ಸ್ ಕಾರ್ನಿವಲ್‌ನಲ್ಲಿ ಕೌರ್ ಭಾಗವಹಿಸಿದ್ದರು. ಭಾರತವನ್ನು ಐತಿಹಾಸಿಕ ಏಕದಿನ ವಿಶ್ವಕಪ್ ಗೆಲುವಿಗೆ ಮುನ್ನಡೆಸಿದ್ದ ಕೌರ್, ವರದಿಗಾರರೊಬ್ಬರನ್ನು ನಗುತ್ತಲೇ ಕೆಣಕಿದರು. ಭಾರತದ ದಂತಕಥೆ ಎಂಎಸ್ ಧೋನಿ ಕೂಡ ಇದೇ ಮಾದರಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದರು.
ಭಾನುವಾರ ನಡೆದ ಕ್ಯಾಪ್ಟನ್ಸ್ ಕಾರ್ನಿವಲ್‌ನಲ್ಲಿ, ವರದಿಗಾರರೊಬ್ಬರು ಈ ವಿಶ್ವಕಪ್ ನಿಮ್ಮ ಕೊನೆಯ ವಿಶ್ವಕಪ್ ಆಗುತ್ತದೆಯೇ ಎಂದು ಹರ್ಮನ್‌ಪ್ರೀತ್ ಅವರನ್ನು ಕೇಳಿದರು. ಆಗ 37 ವರ್ಷದ ಕೌರ್, ಏಕೆ ಎಂದು ಪ್ರಶ್ನಿಸಿದರು ಮತ್ತು ನಂತರ ಮತ್ತೊಂದು ಕಟುವಾದ ಪ್ರತಿಕ್ರಿಯೆಯೊಂದಿಗೆ ವರದಿಗಾರನ ಬಾಯಿ ಮುಚ್ಚಿಸಿದರು.
ಧೋನಿ ಸ್ಟೈಲ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ಉತ್ತರ
ವರದಿಗಾರ: 'ಇದು ನಿಮ್ಮ ಕೊನೆಯ ವಿಶ್ವಕಪ್ ಆಗಲಿದೆಯೇ?'
ಹರ್ಮನ್‌ಪ್ರೀತ್: 'ಏಕೆ?'
ವರದಿಗಾರ: ಸುಮ್ಮನೆ ಕೇಳಿದೆ.
ಹರ್ಮನ್‌ಪ್ರೀತ್: ನಾನು ನಿಲ್ಲಿಸಬೇಕೆಂದು ನೀವು ಭಾವಿಸುತ್ತೀರಾ?
ವರದಿಗಾರ: ಖಂಡಿತ ಇಲ್ಲ.
ಹರ್ಮನ್‌ಪ್ರೀತ್: ಹಾಗಾದರೆ ನೀವು ಈ ಪ್ರಶ್ನೆಯನ್ನು ಏಕೆ ಕೇಳುತ್ತಿದ್ದೀರಿ?
ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿಷ್ಠಿತ ಟ್ರೋಫಿ ಗೆಲುವಿಗೆ ತಂಡವನ್ನು ಮುನ್ನಡೆಸಿದ್ದ ಹರ್ಮನ್‌ಪ್ರೀತ್ ಅವರ ವೃತ್ತಿಜೀವನಕ್ಕೆ ತೆರೆ ಬೀಳುವ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ಆದಾಗ್ಯೂ, 37 ವರ್ಷದ ಅವರು ದೇಶಕ್ಕಾಗಿ ಆಟದ ಎಲ್ಲ ಸ್ವರೂಪಗಳಲ್ಲಿ ಆಡುವುದನ್ನು ಮುಂದುವರಿಸಲು ಬಯಸುವುದಾಗಿ ಮತ್ತು ನಿವೃತ್ತಿ ಹೊಂದುವ ಯಾವುದೇ ಯೋಜನೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಹರ್ಮನ್‌ಪ್ರೀತ್ 2009ರಲ್ಲಿ ಏಕದಿನ ಮತ್ತು ಟಿ20ಐ ಪಂದ್ಯಗಳಿಗೆ ಪದಾರ್ಪಣೆ ಮಾಡಿದರು. ಸದ್ಯ ಭಾರತೀಯ ತಂಡದಲ್ಲಿರುವ ಅತ್ಯಂತ ಹಿರಿಯ ಆಟಗಾರ್ತಿಯಾಗಿದ್ದಾರೆ. ಅವರು ಎರಡೂ ಸ್ವರೂಪಗಳಲ್ಲಿ 4000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ ಮತ್ತು ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಆಧಾರಸ್ತಂಭವಾಗಿದ್ದಾರೆ.
2026ರ ಮಹಿಳಾ ಟಿ20 ವಿಶ್ವಕಪ್ ಬಗ್ಗೆ ಹೇಳುವುದಾದರೆ, ಭಾರತ ಜೂನ್ 14 ರಂದು ಪಾಕಿಸ್ತಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಹರ್ಮನ್‌ಪ್ರೀತ್ ಕೌರ್ ಮತ್ತು ತಂಡವು ಆಸ್ಟ್ರೇಲಿಯಾ, ನೆದರ್‌ಲ್ಯಾಂಡ್ಸ್, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾದ ಮಹಿಳೆಯರೊಂದಿಗೆ ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿದೆ.