

ಚೆನ್ನೈ: ದೇಗುಲದ ಹುಂಡಿ ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಂಡಿರುವ ಸಿಎಂ ಜೋಸೆಫ್ ವಿಜಯ್ ಸರ್ಕಾರ, ತಮಿಳುನಾಡಿನ ಪ್ರಸಿದ್ಧ ದೇವಾಲಯದ 8 ಅಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದೆ.
ತಮಿಳುನಾಡಿನ ಕೊಯಮತ್ತೂರಿನ ಪ್ರಸಿದ್ಧ ಅರುಳ್ಮಿಗು ಕೋಣಿಯಮ್ಮನ್ ದೇವಾಲಯದ ಹುಂಡಿ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಭಾನುವಾರ ಅಮಾನತುಗೊಳಿಸಲಾಗಿದೆ. ದೇವಾಲಯದಲ್ಲಿ ₹31 ಸಾವಿರ ದುರ್ಬಳಕೆ ಮಾಡಿಕೊಂಡ ಆರೋಪದ ಮೇರೆಗೆ ನಾಲ್ವರು ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಹಿಂದೂ ಧಾರ್ಮಿಕ ಮತ್ತು ದತ್ತಿ ದೇಗುಲಗಳ ಇಲಾಖೆ (HR&CE) ಸಚಿವ ಆರ್. ರಮೇಶ್ ಅವರ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಕಳ್ಳತನದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎನ್ನಲಾದ ನಾಲ್ವರು ಸಿಬ್ಬಂದಿ ಹಾಗೂ ಆಡಳಿತಾತ್ಮಕ ನಿರ್ಲಕ್ಷ್ಯ ತೋರಿದ ಆರೋಪದಡಿ ನಾಲ್ವರು ಮೇಲ್ವಿಚಾರಣಾಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಜುಲೈ 15ರಂದು ದೇವಾಲಯದಲ್ಲಿ ನಿಗದಿತ ಹುಂಡಿ ಎಣಿಕೆ ವೇಳೆ ಕಾಣಿಕೆ ಹಣವನ್ನು ದುರ್ಬಳಕೆ ಮಾಡಿರುವ ಬಗ್ಗೆ ಪ್ರಾದೇಶಿಕ ಜಂಟಿ ಆಯುಕ್ತ ರಮೇಶ್ ಕುಮಾರ್ ನಡೆಸಿದ ತನಿಖೆಯ ಬಳಿಕ ಈ ಶಿಸ್ತು ಕ್ರಮ ಜಾರಿಗೊಂಡಿದೆ. ಈ ಅಮಾನತು ಕ್ರಮಕ್ಕೂ ಒಂದು ದಿನ ಮೊದಲು, ಜುಲೈ 25ರಂದು ಉಕ್ಕಡಂ ಪೊಲೀಸರು ದೇವಾಲಯದ ನಾಲ್ವರು ಸಿಬ್ಬಂದಿಯನ್ನು ಹುಂಡಿ ಹಣ ಕಳ್ಳತನ ಪ್ರಕರಣದಲ್ಲಿ ಬಂಧಿಸಿದ್ದರು.
ಬಂಧಿತರನ್ನು ಟಿಕೆಟ್ ಸಂಗ್ರಾಹಕ ಎ. ಬಾಲಸುಬ್ರಮಣಿಯನ್ (52), ಕಚೇರಿ ಸಹಾಯಕ ವಿ. ಸರವಣನ್ (34), ಸ್ವಚ್ಛತಾ ಸಿಬ್ಬಂದಿ ಪಿ. ಪ್ರದೀಪ್ ಕುಮಾರ್ (31) ಹಾಗೂ ದೇವಾಲಯದ ಅರ್ಚಕ ಎಸ್. ಕೃಷ್ಣರಾಜ್ (56) ಎಂದು ಗುರುತಿಸಲಾಗಿದೆ.
ಪೊಲೀಸರು ಹಾಗೂ ದೇವಾಲಯದ ಅಧಿಕಾರಿಗಳ ಪ್ರಕಾರ, ಆರೋಪಿಗಳು ಎಣಿಕೆ ಮಾಡದಿದ್ದ ಒಂದು ಹುಂಡಿಯನ್ನು ರಹಸ್ಯವಾಗಿ ಮುಖ್ಯ ಎಣಿಕೆ ಸ್ಥಳದಿಂದ ಬೇರ್ಪಡಿಸಿ, ಟ್ರಾಲಿಯ ಮೂಲಕ ದೇವಾಲಯದ ಹಿಂಭಾಗಕ್ಕೆ ಸಾಗಿಸಿದ್ದರು. ಬಳಿಕ ಅದರಲ್ಲಿ ಇದ್ದ ಸುಮಾರು ₹31,000 ಹಣವನ್ನು ತೆಗೆದು ತಮ್ಮೊಳಗೆ ಹಂಚಿಕೊಂಡಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಪ್ರಕರಣ ಬೆಳಕಿಗೆ ಬಂದ ಬಳಿಕ ದೇವಾಲಯದ ಆಡಳಿತದ ವಿರುದ್ಧವೂ ತೀವ್ರ ಟೀಕೆ ವ್ಯಕ್ತವಾಗಿದ್ದು, ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಭದ್ರತೆ ಹೆಚ್ಚಿಸುವಂತೆ ಆಗ್ರಹಗಳು ಕೇಳಿಬಂದಿವೆ.