ಮುಂಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ತಂಡ 7 ರನ್ ಗಳ ವಿರೋಚಿತ ಸೋಲು ಕಂಡಿದ್ದು, ಇಂಗ್ಲೆಂಡ್ ತಂಡದ ಸೋಲಿಗೆ ಆ ಎರಡು ಓವರ್ ಕಾರಣ ಎಂದು ಹೇಳಲಾಗುತ್ತಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 89 ರನ್ ಬಾರಿಸಿದ್ದರು. ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್ಗಳಲ್ಲಿ 253 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಜೆಕಬ್ ಬೆಥೆಲ್ ಅವರ ಸ್ಫೋಟಕ ಶತಕದ ನೆರವಿನಿಂದ 246 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಭಾರತ ತಂಡವು 7 ರನ್‌ಗಳ ಜಯ ಸಾಧಿಸಿತು.
ಬೆಥೆಲ್-ವಿಲ್ ಜ್ಯಾಕ್ಸ್ ಅದ್ಭುತ ಜೊತೆಯಾಟ
ಭಾರತ ನೀಡಿದ್ದ 254 ರನ್ ಗಳಿಗೆ ಉತ್ತರವಾಗಿ ಇಂಗ್ಲೆಂಡ್ ಕೂಡ ದಿಟ್ಟ ತಿರುಗೇಟು ನೀಡಿತು. ಒಂದು ಹಂತದಲ್ಲಿ ಬೃಹತ್ ಮೊತ್ತದ ಹೊರತಾಗಿಯೂ ಭಾರತ ಸೋಲಿನತ್ತ ಮುಖ ಮಾಡಿತ್ತು. ಇಂಗ್ಲೆಂಡ್ ಜೇಕಬ್ ಬೆಥೆಲ್ ಮತ್ತು ವಿಲ್ ಜ್ಯಾಕ್ಸ್ ಜೋಡಿ ಭಾರತೀಯ ಬೌಲರ್ ಗಳ ಮೇಲೆ ಸವಾರಿ ಮಾಡಿದರು.
5ನೇ ವಿಕೆಟ್ ಗೆ ಈ ಜೋಡಿ ಕೇವಲ 39 ಎಸೆತಗಳಲ್ಲಿ 77 ರನ್ ಪೇರಿಸಿ ಅಪಾಯಕಾರಿಯಾಗಿತ್ತು. ಆದರೆ ಅರ್ಶ್ ದೀಪ್ ಸಿಂಗ್ ಎಸೆದ 14ನೇ ಓವರ್ ನ ಅಂತಿಮ ಎಸೆತಗಲ್ಲಿ ಸಿಕ್ಸರ್ ಸಿಡಿಸಲು ಹೋದ ವಿಲ್ ಜ್ಯಾಕ್ಸ್ ಭಾರತದ ಅಕ್ಸರ್ ಪಟೇಲ್ ಹಿಡಿದ ಅದ್ಭುತ ಕ್ಯಾಚ್ ಗೆ ಬಲಿಯಾದರು.
ಪಂದ್ಯದ ಗತಿಯನ್ನೇ ಬದಲಿಸಿದ 'ಆ ಎರಡು ಓವರ್'
ಅದಾಗ್ಯೂ ಮತ್ತೊಂದು ಬದಿಯಲ್ಲಿದ್ದ ಜೇಕಬ್ ಬೆಥೆಲ್ ಭಾರತೀಯ ಬೌಲರ್ ಗಳ ಮೇಲೆ ಸವಾರಿ ಮಾಡುತ್ತಿದ್ದರು. ಈ ಹಂತದಲ್ಲಿ ಭಾರತ ಸೋಲು ಕಟ್ಟಿಟ್ಟಬುತ್ತಿ ಎಂದೇ ಭಾವಿಸಲಾಗಿತ್ತು. ಆದರೆ ಜಸ್ ಪ್ರೀತ್ ಬುಮ್ರಾ ಎಸೆದ ಆ ಎರಡು ಓವರ್ ಗಳು ಭಾರತ ಸೋಲುತ್ತಿದ್ದ ಈ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಲು ನೆರವಾಯಿತು.
ಮ್ಯಾಜಿಕ್ ಮಾಡಿದ ಜಸ್ ಪ್ರೀತ್ ಬುಮ್ರಾ
254 ರನ್‌ಗಳ ಬೃಹತ್ ಗುರಿ ಬೆನ್ನಟಿದ ಇಂಗ್ಲೆಂಡ್ ತಂಡವು 16ನೇ ಓವರ್ ಮುಕ್ತಾಯದ ವೇಳೆಗೆ 209 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಇಂಗ್ಲೆಂಡ್ ಗೆಲುವಿಗೆ 18 ಎಸೆತಗಳಲ್ಲಿ 45 ರನ್‌ಗಳ ಅಗತ್ಯವಿತ್ತು. ಆದರೆ, 17 ಓವರ್ ಬೌಲಿಂಗ್ ಗೆ ಬಂದ ಬುಮ್ರಾ ಅವರು ಆ ಓವರ್ ನಲ್ಲಿ ಕೇವಲ 6 ರನ್ ನೀಡಿ ಇಂಗ್ಲೆಂಡ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು.
ಇದು ಮಾತ್ರವಲ್ಲ, 15 ಓವರ್‌ನಲ್ಲಿ ಕೂಡ ಕೇವಲ 8 ರನ್ ನೀಡಿ ಇಂಗ್ಲೆಂಡ್ ತಂಡದ ಮೇಲೆ ಒತ್ತಡ ಹೇರಿದರು. ಈ ಎರಡು ಓವರ್‌ಗಳು ಭಾರತದ ಗೆಲುವಿಗೆ ನಿರ್ಣಾಯಕವಾದವು. ಈ ಎರಡು ಓವರ್ ನಲ್ಲಿ ಭಾರತ ಹೆಚ್ಚು ರನ್ ನೀಡದ ಕಾರಣ ಅಂತಿಮ ಓವರ್ ನಲ್ಲಿ ಶಿವಂದುಬೆ 22ರನ್ ಬಿಟ್ಟುಕೊಟ್ಟರೂ ಭಾರತ 7 ರನ್ ಅಂತರದಲ್ಲಿ ವಿರೋಚಿತ ಗೆಲುವು ಸಾಧಿಸಿತು.
ಇದೇ ಕಾರಣಕ್ಕೆ ಈ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಸಂಜು ಸ್ಯಾಮ್ಸನ್ ಈ ಪ್ರಶಸ್ತಿ ಬುಮ್ರಾ ಅವರಿಗೆ ಸಲ್ಲಬೇಕಿತ್ತು ಎಂದು ಹೇಳಿದರು.