

ಗುವಾಹಟಿ: ಕೋವಿಡ್-19 ಮಹಾಮಾರಿ ಹಾಗೂ ಭಾರತ-ಚೀನಾ ಗಡಿ ಉದ್ವಿಗ್ನತೆಯಿಂದ ಕಳೆದ ಆರು ವರ್ಷಗಳಿಂದ ಸ್ಥಗಿತಗೊಂಡಿದ್ದ ಸಿಕ್ಕಿಂನ ನಾಥುಲಾ (Nathu La) ಗಡಿ ಮಾರ್ಗದ ವ್ಯಾಪಾರ ಶನಿವಾರದಿಂದ ಮತ್ತೆ ಆರಂಭವಾಗಿದೆ.
ಈ ಹಿನ್ನೆಲೆಯಲ್ಲಿ ವಿಶೇಷ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದ್ದು, ಸಿಕ್ಕಿಂನ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ತ್ಸೆರಿಂಗ್ ಟಿ ಭುಟಿಯಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು.
ಈ ದಿನವನ್ನು "ಐತಿಹಾಸಿಕ ಕ್ಷಣ" ಎಂದು ಬಣ್ಣಿಸಿದ ಸಚಿವ ಭುಟಿಯಾ, ಪ್ರಧಾನಿ ಮೋದಿ ಮತ್ತು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರ ಪ್ರಯತ್ನಗಳಿಂದಲೇ ಚೀನಾದೊಂದಿಗೆ ಗಡಿ ವ್ಯಾಪಾರ ಪುನರಾರಂಭ ಸಾಧ್ಯವಾಗಿದೆ ಎಂದು ಹೇಳಿದರು.
ನಾಥುಲಾ ಗಡಿ ವ್ಯಾಪಾರವು ಪ್ರತಿ ವಾರ ಸೋಮವಾರದಿಂದ ಗುರುವಾರದವರೆಗೆ ನಡೆಯಲಿದ್ದು, ನವೆಂಬರ್‌ವರೆಗೆ ಮುಂದುವರಿಯಲಿದೆ.
ಈ ಪುನರಾರಂಭದಿಂದ ನೋಂದಾಯಿತ ವ್ಯಾಪಾರಿಗಳು, ಸಾರಿಗೆ ನಿರ್ವಾಹಕರು ಹಾಗೂ ಗಡಿ ವ್ಯಾಪಾರವನ್ನು ಅವಲಂಬಿಸಿರುವ ಇತರರಿಗೆ ಹೊಸ ಉದ್ಯಮಾವಕಾಶಗಳು ಸೃಷ್ಟಿಯಾಗಲಿದ್ದು, ಸ್ಥಳೀಯ ಆರ್ಥಿಕತೆಗೆ ಹೊಸ ಚೈತನ್ಯ ಸಿಗುವ ನಿರೀಕ್ಷೆಯಿದೆ.
ಪ್ರಸ್ತುತ ಭಾರತ ಮತ್ತು ಚೀನಾ ನಡುವೆ ಸುಮಾರು 35 ವಸ್ತುಗಳ ವ್ಯಾಪಾರಕ್ಕೆ ಅನುಮತಿ ಇದೆ. ವ್ಯಾಪಾರಕ್ಕೆ ಅನುಮತಿಸಲಾದ ವಸ್ತುಗಳ ಪಟ್ಟಿಯನ್ನು ಇನ್ನಷ್ಟು ವಿಸ್ತರಿಸುವಂತೆ ವಿದೇಶಿ ವ್ಯಾಪಾರ ಮಹಾನಿರ್ದೇಶಕರಿಗೆ (DGFT) ಸಿಕ್ಕಿಂ ಸರ್ಕಾರ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ ಎಂದು ಸಚಿವ ಭುಟಿಯಾ ತಿಳಿಸಿದ್ದಾರೆ.
ಯಾವ ವಸ್ತುಗಳ ವ್ಯಾಪಾರ ನಡೆಯಲಿದೆ?
ನಾಥುಲಾ ಗಡಿ ವ್ಯಾಪಾರ ಒಪ್ಪಂದದಡಿ ಈ ಕೆಳಗಿನ ವಸ್ತುಗಳ ಆಮದು-ರಫ್ತಿಗೆ ಅವಕಾಶ ನೀಡಲಾಗಿದೆ...
ಕರಕುಶಲ ವಸ್ತುಗಳು
ಕೈಮಗ್ಗ ಉತ್ಪನ್ನಗಳು
ಸಾಂಪ್ರದಾಯಿಕ ಧಾರ್ಮಿಕ ವಸ್ತುಗಳು
ಸಿದ್ಧ ಉಡುಪುಗಳು (Ready-made Garments)
ಈ ವರ್ಷ ಗಡಿ ವ್ಯಾಪಾರದಲ್ಲಿ ಪಾಲ್ಗೊಳ್ಳಲು 38 ನೋಂದಾಯಿತ ವ್ಯಾಪಾರಿಗಳಿಗೆ ವಿಶೇಷ ಪಾಸ್‌ಗಳನ್ನು ನೀಡಲಾಗಿದೆ. ಭಾರತ-ಚೀನಾ ನಡುವಿನ ಗಡಿ ವ್ಯಾಪಾರದ ಪುನರಾರಂಭವು ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳಿಗೆ ಹೊಸ ಉತ್ತೇಜನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.