ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವೇಗಿ ಯಶ್ ದಯಾಳ್ ಇಂಡಿಯನ್ ಪ್ರೀಮಿಯರ್ ಲೀಗ್ 2026ಕ್ಕೆ ತಂಡವನ್ನು ಸೇರಿಕೊಳ್ಳುವುದಿಲ್ಲ ಎಂದು ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ದೃಢಪಡಿಸಿದ್ದಾರೆ.
ಎರಡು ಲೈಂಗಿಕ ಶೋಷಣೆ ಆರೋಪದ ಪ್ರಕರಣಗಳನ್ನು ಎದುರಿಸುತ್ತಿರುವ 28 ವರ್ಷದ ದಯಾಳ್, ಆರ್‌ಸಿಬಿ ಗೆದ್ದ ಐಪಿಎಲ್ 2025ರ ಫೈನಲ್‌ನಲ್ಲಿ ಕಾಣಿಸಿಕೊಂಡು ಮೊದಲ ಬಾರಿಗೆ ಚಾಂಪಿಯನ್ ಆದ ನಂತರ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ.
ಪಂದ್ಯಾವಳಿಗೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೊಬಾಟ್, 'ಈ ಆವೃತ್ತಿಯಲ್ಲಿ ಯಶ್ ದಯಾಳ್ ತಂಡಕ್ಕೆ ಸೇರ್ಪಡೆಗೊಳ್ಳುವುದಿಲ್ಲ ಎಂದು ದೃಢಪಡಿಸುತ್ತಿದ್ದೇನೆ. ನಿಮಗೆ ತಿಳಿದಿರುವಂತೆ, ಅವರು ಕೆಲವು ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರು ಫ್ರಾಂಚೈಸಿಯ ಒಪ್ಪಂದದಲ್ಲಿಯೇ ಇರುತ್ತಾರೆ. ಆದರೆ, ಅವರ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ' ಎಂದು ಹೇಳಿದರು.
'ನಾವು ಅವರೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದ್ದೇವೆ. ನಾನು ಇಂದು ಕೂಡ ಅವರೊಂದಿಗೆ ಮಾತನಾಡಿದೆ. ಆದರೆ, ಈ ಹಂತದಲ್ಲಿ ಅವರು ನಮ್ಮೊಂದಿಗೆ ಸೇರುವುದು ಅವರ ಹಿತಾಸಕ್ತಿಗೆ ಅಥವಾ ಫ್ರಾಂಚೈಸಿಯ ಹಿತಾಸಕ್ತಿಗೆ ಒಳ್ಳೆಯದಲ್ಲ ಎಂದು ನಿರ್ಧರಿಸಲಾಗಿದೆ. ಈ ಹಂತದಲ್ಲಿ ನಾವು ಅದರ ಬಗ್ಗೆ ಯಾವುದೇ ಹೆಚ್ಚಿನ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ. ಆದರೆ, ಅವರು ನಮ್ಮ ಬೆಂಬಲ ಉಳಿಸಿಕೊಂಡಿದ್ದಾರೆ. ಅವರು ಒಪ್ಪಂದದಡಿಯಲ್ಲಿಯೇ ಇದ್ದಾರೆ ಮತ್ತು ಅವರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುತ್ತಿರುವಾಗ, ನಾವು ಅವರೊಂದಿಗೆ ಮಾತನಾಡುವುದನ್ನು ಮುಂದುವರಿಸುತ್ತೇವೆ' ಎಂದು ಅವರು ವಿವರಿಸಿದರು.
ಯಶ್ ದಯಾಳ್ ಬದಲಿ ಆಟಗಾರರು ನಮ್ಮಲ್ಲಿ ಇದ್ದಾರೆ. ನಾವು ದೇಶೀಯ ಆಟಗಾರರನ್ನು ಅವರ ಬದಲಿಯಾಗಿ ನೋಡಿದರೆ, ರಸಿಕ್ (ಸಲಾಂ), ಅಭಿನಂದನ್ ಸಿಂಗ್ ಮತ್ತು ಮಂಗೇಶ್ ಯಾದವ್ ಇದ್ದಾರೆ. ಈ ಮೂರು ಉತ್ತಮ ಆಯ್ಕೆಗಳಾಗಿವೆ. ಈ ಮೂವರೂ ಇಲ್ಲಿಯವರೆಗೆ ಅತ್ಯುತ್ತಮ ಪೂರ್ವಸಿದ್ಧತಾ ಶಿಬಿರಗಳನ್ನು ನಡೆಸಿದ್ದಾರೆ. ಆದ್ದರಿಂದ, ನಾವು ನಮ್ಮ ಎಲ್ಲ ಆಯ್ಕೆಗಳನ್ನು ಮುಕ್ತವಾಗಿರಿಸಿದ್ದೇವೆ. ಹರಾಜಿಗೂ ಮೊದಲು, ಆಫ್-ಸೀಸನ್‌ನಲ್ಲಿ ಮಂಗೇಶ್ ಅವರನ್ನು ಸ್ಕೌಟ್ ಮಾಡುವುದನ್ನು ನಾನು ಆನಂದಿಸಿದೆ ಎಂದು ಹೇಳಿದರು.
ಅದೇನೇ ಇದ್ದರೂ, 2024ರ ಆವೃತ್ತಿಯಲ್ಲಿ ಆರ್‌ಸಿಬಿ ಪರ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ದಯಾಳ್ ಅವರನ್ನು ಕಳೆದುಕೊಳ್ಳುವುದು ಸ್ಪಷ್ಟವಾಗಿ ತಂಡಕ್ಕೆ ಹೊಡೆತವಾಗಿದೆ. ಕಳೆದ ಎರಡು ವರ್ಷಗಳಿಂದ ಅವರು ನಮಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ, ತಂಡದಲ್ಲಿ ನಮಗಿರುವ ಆಯ್ಕೆಗಳ ಬಗ್ಗೆ ನಮಗೆ ತುಂಬಾ ವಿಶ್ವಾಸವಿದೆ. ವೇಗಿ ಜಾಶ್ ಹೇಜಲ್‌ವುಡ್ ಚೇತರಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಆದಷ್ಟು ಬೇಗ ತಂಡವನ್ನು ಸೇರುತ್ತಾರೆ ಎಂದು ಬೊಬಾಟ್ ಆಶಿಸಿದರು.
ಈ ಸಂಬಂಧ ಜೈಪುರದಲ್ಲಿ ದೂರು ದಾಖಲಾಗಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದ ಸಮಯದಲ್ಲಿ ದೂರುದಾರರು ಅಪ್ರಾಪ್ತರಾಗಿದ್ದರು ಎಂದು ಆರೋಪಿಸಲಾಗಿದೆ. ದಯಾಳ್ ದೀರ್ಘಕಾಲದವರೆಗೆ ಪದೇ ಪದೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು FIR ನಲ್ಲಿ ತಿಳಿಸಲಾಗಿದೆ. ಸಂತ್ರಸ್ತೆಯೊಂದಿಗೆ ಸಂಬಂಧ ಬೆಳೆಸಲು ಮತ್ತು ಮುಂದುವರಿಸಲು ಅವರು ಭಾವನಾತ್ಮಕ ಪ್ರಭಾವ ಮತ್ತು ಕ್ರಿಕೆಟ್ ಅವಕಾಶಗಳಿಗೆ ಸಂಬಂಧಿಸಿದ ಭರವಸೆಗಳನ್ನು ನೀಡಿದ್ದರು ಎಂದು ಹೇಳಲಾಗಿದೆ.
ಗಾಜಿಯಾಬಾದ್‌ನಲ್ಲಿ ದಾಖಲಾಗಿರುವ ಪ್ರತ್ಯೇಕ ಪ್ರಕರಣದಲ್ಲಿ, ದಯಾಳ್ ಮದುವೆಯ ನೆಪದಲ್ಲಿ ಲೈಂಗಿಕ ಶೋಷಣೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.
ಜಾಮೀನು ನಿರಾಕರಣೆ
ಡಿಸೆಂಬರ್ 24, 2025ರಂದು, ಜೈಪುರದ ವಿಶೇಷ ಪೋಕ್ಸೊ ನ್ಯಾಯಾಲಯವು ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಗಳ ಗಂಭೀರತೆಯನ್ನು ಉಲ್ಲೇಖಿಸಿ ಯಶ್ ದಯಾಳ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಸಂತ್ರಸ್ತೆಯ ಹೇಳಿಕೆ, ಲಭ್ಯವಿರುವ ಪುರಾವೆಗಳು ಮತ್ತು ಒಟ್ಟಾರೆ ಸಂದರ್ಭಗಳ ಆಧಾರದ ಮೇಲೆ, ಈ ಹಂತದಲ್ಲಿ ನಿರೀಕ್ಷಣಾ ಜಾಮೀನು ನೀಡುವುದು ಸೂಕ್ತವಲ್ಲ ಎಂದು ನ್ಯಾಯಾಧೀಶರಾದ ಅಲ್ಕಾ ಬನ್ಸಾಲ್ ತೀರ್ಪು ನೀಡಿದರು.
ಜೈಪುರ ಮೂಲದ ಹುಡುಗಿಯೊಬ್ಬಳು ಸಂಗನೇರ್ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದಯಾಳ್ ತನ್ನ ಕ್ರಿಕೆಟ್ ವೃತ್ತಿಜೀವನವನ್ನು ನಿರ್ಮಿಸಲು ಸಹಾಯ ಮಾಡುವುದಾಗಿ ಭರವಸೆ ನೀಡುವ ಮೂಲಕ ದೀರ್ಘಕಾಲದವರೆಗೆ ತನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ. ತಾನು ಅಪ್ರಾಪ್ತೆಯಾಗಿದ್ದಾಗ ಈ ಘಟನೆಗಳು ನಡೆದಿವೆ ಮತ್ತು ನಂತರ ಆತನನ್ನು ಎದುರಿಸಿದಾಗ ತನಗೆ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದಯಾಳ್ ಅವರ ವಕೀಲರು ಆರೋಪಗಳು ಸುಳ್ಳು ಮತ್ತು ಸಂಬಂಧವು ಒಪ್ಪಿಗೆಯಿಂದ ಕೂಡಿತ್ತು. ಅವರು ತನಿಖೆಗೆ ಸಹಕರಿಸಲು ಸಿದ್ಧರಿದ್ದಾರೆ ಎಂದು ವಾದಿಸಿದರು. ಆದಾಗ್ಯೂ, ಪ್ರಾಸಿಕ್ಯೂಷನ್ ಅರ್ಜಿಯನ್ನು ವಿರೋಧಿಸಿತು.
ಯಶ್ ದಯಾಳ್ ವಿವಾಹ
ಐಪಿಎಲ್ 2026ನೇ ಆವೃತ್ತಿಗೆ ಮುಂಚಿತವಾಗಿ, ಯಶ್ ದಯಾಳ್ ತಮ್ಮ ದೀರ್ಘಕಾಲದ ಗೆಳತಿ ಶ್ವೇತಾ ಪುಂಡಿರ್ ಅವರನ್ನು ಫೆಬ್ರುವರಿ 4 ರಂದು ನೋಯ್ಡಾದಲ್ಲಿ ವಿವಾಹವಾದರು. ವಿವಾಹದಲ್ಲಿ ಕುಟುಂಬಸ್ಥರು ಮಾತ್ರ ಭಾಗವಹಿಸಿದ್ದರು. ದಯಾಳ್ ಅವರ ಪತ್ನಿ ಶ್ವೇತಾ ನವದೆಹಲಿ ಮೂಲದ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ.