ಆಸ್ಟ್ರೇಲಿಯಾದ ಸ್ಪಿನ್ ದಂತಕಥೆ ಶೇನ್ ವಾರ್ನ್ ಕೇವಲ ಚೆಂಡನ್ನು ಕೈಯಲ್ಲಿ ಹಿಡಿದಿರುವ ಜಾದೂಗಾರನಲ್ಲ, ಸರಿಯಾದ ಪಂತಗಳನ್ನು ಯಾವಾಗ ಮತ್ತು ಹೇಗೆ ಹಾಕಬೇಕೆಂದು ತಿಳಿದಿದ್ದವರೂ ಹೌದು. 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಉದ್ಘಾಟನಾ ಆವೃತ್ತಿಯಲ್ಲಿ ಅವರು ರಾಜಸ್ಥಾನ್ ರಾಯಲ್ಸ್ (RR) ತಂಡದ ನಾಯಕರಾದಾಗ, ಅವರು ತಮ್ಮ ಒಪ್ಪಂದದಲ್ಲಿ ಒಂದು ಷರತ್ತನ್ನು ಸೇರಿಸಿದ್ದಾರೆಂದು ವರದಿಯಾಗಿದೆ. ಅದು ಸುಮಾರು ಎರಡು ದಶಕಗಳ ನಂತರ ಅವರ ಕುಟುಂಬ ಬಂಪರ್ ಬಹುಮಾನ ಪಡೆಯಲು ಕಾರಣವಾಗಿದೆ. ರಾಜಸ್ಥಾನ್ ರಾಯಲ್ಸ್ ಅನ್ನು ಕಲ್ ಸೋಮಾನಿ ನೇತೃತ್ವದ ಯುಎಸ್ ಮೂಲದ ಒಕ್ಕೂಟಕ್ಕೆ 1.63 ಬಿಲಿಯನ್ ಯುಎಸ್ ಡಾಲರ್ (ಸುಮಾರು ₹15,290 ಕೋಟಿ) ಗೆ ಮಾರಾಟ ಮಾಡಿದ ನಂತರ ಈ ಷರತ್ತು ಮುನ್ನೆಲೆಗೆ ಬಂದಿದೆ.
2008ರ ಆವೃತ್ತಿಗೆ ಮುಂಚಿತವಾಗಿ ರಾಜಸ್ಥಾನ್ ರಾಯಲ್ಸ್ ತಂಡವು ವಾರ್ನ್ ಅವರನ್ನು ಒಪ್ಪಂದ ಮಾಡಿಕೊಂಡಾಗ, ಅವರಿಗೆ ನಾಯಕನ ಜವಾಬ್ದಾರಿಯನ್ನು ಮಾತ್ರವಲ್ಲದೆ, ಫ್ರಾಂಚೈಸಿಯಲ್ಲಿ ಕ್ರಿಕೆಟ್ ಕಾರ್ಯಾಚರಣೆಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನೂ ನೀಡಿತ್ತು. ಈ ಒಪ್ಪಂದದ ಭಾಗವಾಗಿ, ಆಸ್ಟ್ರೇಲಿಯಾದ ದಿವಂಗತ ಐಕಾನ್‌ಗೆ ಅವರು ತಂಡಕ್ಕಾಗಿ ಆಡಿದ ಪ್ರತಿ ವರ್ಷಕ್ಕೆ ಶೇ ೦.75 ರಷ್ಟು ಮಾಲೀಕತ್ವದ ಪಾಲನ್ನು ನೀಡಲಾಯಿತು.
'ನನ್ನ ಒಪ್ಪಂದದ ಭಾಗವಾಗಿ... ಅವರು ನನ್ನನ್ನು ನಾಯಕ, ಕೋಚ್ ಮತ್ತು ನಾನು ಬಯಸಿದ ರೀತಿಯಲ್ಲಿ ಕ್ರಿಕೆಟ್ ತಂಡವನ್ನು ಮುನ್ನಡೆಸಲು ಕೇಳಿಕೊಂಡರು. ಹೀಗಾಗಿಯೇ ನಾನು ಒಂದೇ ಕಡೆ ಇದ್ದೆ' ಎಂದು ವಾರ್ನ್ ದಿ ಹೆರಾಲ್ಡ್ ಸನ್‌ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.
ವಾರ್ನ್ ಫ್ರಾಂಚೈಸಿಯೊಂದಿಗೆ ನಾಲ್ಕು ಆವೃತ್ತಿಗಳು ಇದ್ದರು. 2008ರಲ್ಲಿ ಮೊದಲ ಆವೃತ್ತಿಯಲ್ಲಿ ಪ್ರಶಸ್ತಿಯನ್ನು ಗೆದ್ದರು. ಹೀಗೆ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಅವರ ಒಟ್ಟು ಪಾಲು ಶೇ 3ಕ್ಕೆ ಏರಿತು. ತಂಡವು ಈಗ 1.63 ಬಿಲಿಯನ್ ಯುಎಸ್ ಡಾಲರ್‌ಗಳಿಗೆ ಮಾರಾಟವಾಗುವುದರೊಂದಿಗೆ, ವಾರ್ನ್ ಅವರ ಪಾಲು ₹450 ರಿಂದ ₹460 ಕೋಟಿಗೆ ತಲುಪಿದೆ.
2026ರ ಐಪಿಎಲ್ ಆವೃತ್ತಿಯ ನಂತರ ವಾರ್ನ್ ಅವರ ಕುಟುಂಬವು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿನ ಅವರ ಪಾಲನ್ನು ಮಾರಾಟ ಮಾಡಿ ಹಣವನ್ನು ಮನೆಗೆ ತೆಗೆದುಕೊಂಡು ಹೋಗಲು ಅರ್ಹರಾಗಿರುತ್ತದೆ. ಆದರೂ, ಈ ಒಪ್ಪಂದವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅನುಮೋದಿಸಬೇಕು.
ಈ ಫ್ರಾಂಚೈಸಿಯನ್ನು ಮೂಲತಃ 2008ರಲ್ಲಿ ಮನೋಜ್ ಬಡಾಲೆ ನೇತೃತ್ವದ ಎಮರ್ಜಿಂಗ್ ಮೀಡಿಯಾ ಕೇವಲ 67 ಮಿಲಿಯನ್ ಡಾಲರ್‌ಗಳಿಗೆ ಖರೀದಿಸಿತು.
ಇದೀಗ ರಾಜಸ್ಥಾನ್ ರಾಯಲ್ಸ್ ಬೃಹತ್ ಮೊತ್ತಕ್ಕೆ ಮಾರಾಟವಾಗಿದ್ದು, ಈ ಕ್ಷಣಕ್ಕೆ ಸಾಕ್ಷಿಯಾಗಲು ಶೇನ್ ವಾರ್ನ್ ಇಲ್ಲ ಎಂಬುದೇ ದುಃಖಕರ. ವಾರ್ನ್ ಅವರು 2022ರಲ್ಲಿ ನಿಧನರಾದರು. ಇದೀಗ, ಅವರು 18 ವರ್ಷಗಳ ಹಿಂದೆ ಸಹಿ ಮಾಡಿದ ಒಪ್ಪಂದದಿಂದ ಅವರ ಕುಟುಂಬಕ್ಕೆ ಅಪಾರ ಪ್ರಯೋಜನವಾಗಲಿದೆ.