ಮುಂಬೈ: ಐಪಿಎಲ್ ನಲ್ಲಿ ಅವಕಾಶಕ್ಕಾಗಿ ಆಟಗಾರರಿಂದ ಹಣ ವಸೂಲಿ ಮಾಡಲಾಗುತ್ತಿದ್ದು, ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಮಾಜಿ ಐಪಿಎಲ್ ಚೇರ್ಮನ್ ಲಲಿತ್ ಮೋದಿ ರಾಜೀವ್ ಶುಕ್ಲಾ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಹೌದು.. ಭಾರತದ ಚುಟುಕು ಕ್ರಿಕೆಟ್ ಲೀಗ್ Indian Premier League 2026 ಟೂರ್ನಮೆಂಟ್ ಬಹಳ ರೋಚಕವಾಗಿ ಸಾಗುತ್ತಿದ್ದು, ಈಗಾಗಲೇ ಟೂರ್ನಮೆಂಟ್‌ನ ಸುಮಾರು 75 ಶೇಕಡಾ ಪಂದ್ಯಗಳು ಪೂರ್ಣಗೊಂಡಿವೆ. ಎರಡು ತಂಡಗಳು ಈಗಾಗಲೇ ಟೂರ್ನಮೆಂಟ್‌ನಿಂದ ಹೊರಬಿದ್ದಿವೆ.
ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗುತ್ತಿದೆ. ಇನ್ನೂ ನಾಲ್ಕು ದಿನಗಳಲ್ಲಿ ಪ್ಲೇಆಫ್ಸ್‌ಗೆ ಪ್ರವೇಶಿಸುವ ತಂಡಗಳು ಯಾವುವು ಎಂಬುದು ಸ್ಪಷ್ಟವಾಗಲಿದೆ.
ಇದೇ ಹೊತ್ತಿನಲ್ಲಿ ಟೂರ್ನಿಯಲ್ಲಿ ಆಡಲು ಆಟಗಾರರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಐಪಿಎಲ್ ನಲ್ಲಿ ಬೃಹತ್ ಭ್ರಷ್ಟಾಚಾರ: ಲಲಿತ್ ಮೋದಿ ಸ್ಫೋಟಕ ಆರೋಪ
ಐಪಿಎಲ್ ಟೂರ್ನಮೆಂಟ್ ಕುರಿತು ಮಾಜಿ ಐಪಿಎಲ್ ಚೇರ್ಮನ್ ಲಲಿತ್ ಮೋದಿ (Lalit Modi) ವಿವಾದಾತ್ಮಕ ಹೇಳಿಕೆ ನೀಡಿದ್ದು, ಐಪಿಎಲ್ ಹೆಸರಿನಲ್ಲಿ ಭಾರಿ ಭ್ರಷ್ಟಾಚಾರ ಹಗರಣ ನಡೆಯುತ್ತಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಐಪಿಎಲ್ ತಂಡಗಳಲ್ಲಿ ಅವಕಾಶಗಳಿಗಾಗಿ ಆಟಗಾರರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಒಂದು ವೇಳೆ ಹಣ ನೀಡಲು ಸಾಧ್ಯವಾಗದಿದ್ದರೆ ಆಟಗಾರರ ವೈಯಕ್ತಿಕ ವಿಷಯಗಳನ್ನು ಲೀಕ್ ಮಾಡುವುದಾಗಿ ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಲಲಿತ್ ಮೋದಿ ಅವರ ಈ ಆರೋಪ ಇದೀಗ ಭಾರತೀಯ ಕ್ರಿಕೆಟ್ ರಂಗದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದೆ.
ರಾಜೀವ್ ಶುಕ್ಲಾ ವಿರುದ್ಧವೇ ಆರೋಪ
ಲಲಿತ್ ಮೋದಿ ಆರೋಪಗಳ ಸುರಿಮಳೆ ಇಷ್ಟಕ್ಕೇ ನಿಂತಿಲ್ಲ.. ನೇರವಾಗಿ ಅವರು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ವಿರುದ್ಧವೇ ಸ್ಫೋಟಕ ಆರೋಪ ಮಾಡಿದ್ದು, ರಾಜೀವ್ ಶುಕ್ಲಾ ಅವರ ತಂಡ ಆಟಗಾರರಿಂದ ಹಣ ವಸೂಲಿ ಮಾಡುತ್ತಿದೆ ಎಂದು ಹೇಳಿದ್ದಾರೆ.
ಐಪಿಎಲ್ ತಂಡಗಳಲ್ಲಿ ಆಯ್ಕೆ ಮಾಡಿಕೊಡುವ ಹೆಸರಿನಲ್ಲಿ ಆಟಗಾರರಿಂದ ಭಾರೀ ಪ್ರಮಾಣದಲ್ಲಿ ಹಣ ವಸೂಲಿ ಮಾಡಲು ಯತ್ನಿಸಲಾಗುತ್ತಿದೆ. ಈ ಖತರ್ನಾಕ್ ದಂಧೆಯಲ್ಲಿ ಸ್ವತಃ ರಾಜೀವ್ ಶುಕ್ಲಾ ಅವರ ಪಿಎ ಶಾಮೀಲಾಗಿದ್ದಾನೆ. ಅವರ ಪಿಎ ನಡೆಸುತ್ತಿರುವ ಅಕ್ರಮಗಳನ್ನು ತಾವು ಬಹಿರಂಗಪಡಿಸುತ್ತಿದ್ದೇನೆ ಎಂದು ಲಲಿತ್ ಮೋದಿ ಹೇಳಿದ್ದಾರೆ.
ರಾಜಿನಾಮೆ ಕೊಟ್ಟು ತೊಲಗಿ
ಇದೇ ವೇಳೆ ರಾಜೀವ್ ಶುಕ್ಲಾ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿರುವ ಲಲಿತ್ ಮೋದಿ, 'ಈ ವೇಳೆ ಒಬ್ಬ ಕ್ರಿಕೆಟಿಗ ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದಾಗ, ಆತನನ್ನು ವೈಯಕ್ತಿಕವಾಗಿ ಬ್ಲ್ಯಾಕ್‌ಮೇಲ್ ಮಾಡಿ ಭಯಭೀತಗೊಳಿಸಲಾಗಿದೆ. ಆ ಕ್ರಿಕೆಟಿಗನ ವೃತ್ತಿಜೀವನವನ್ನು ನಾಶ ಮಾಡುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ. ರಾಜೀವ್ ಶುಕ್ಲಾ ಅವರ ಪಿಎ ಕೆಲವು ಖಾಸಗಿ ವಿಡಿಯೋಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾನೆ ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.
ಐಪಿಎಲ್ ಟೂರ್ನಮೆಂಟ್ ಒಂದು ಜಾಗತಿಕ ಬ್ರ್ಯಾಂಡ್ ಆಗಿದ್ದು, ಇಂತಹ ಬ್ಲ್ಯಾಕ್‌ಮೇಲ್ ದಂಧೆಗಳು ಅದರ ಗೌರವಕ್ಕೆ ಧಕ್ಕೆ ತರುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದಂಧೆಯ ಹಿಂದೆ ರಾಜೀವ್ ಶುಕ್ಲಾ ಅವರ ಕೈವಾಡವೂ ಇದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ವಿಷಯದ ಕುರಿತು ಬಿಸಿಸಿಐ ಕಡ್ಡಾಯವಾಗಿ ತನಿಖೆ ನಡೆಸಬೇಕು. ಇಲ್ಲದಿದ್ದರೆ ಕ್ರಿಕೆಟಿಗರ ಭವಿಷ್ಯ ನಾಶವಾಗುವ ಅಪಾಯವಿದೆ. ಈ ಸಂಚುಗಳಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸಬೇಕು ಎಂದು ಲಲಿತ್ ಮೋದಿ ಒತ್ತಾಯಿಸಿದ್ದಾರೆ.
ಅಲ್ಲದೆ ಸರಿ, ನೀವು ಬಿಸಿಸಿಐ ಮತ್ತು ಐಪಿಎಲ್ ನ ಗೌರವಾನ್ವಿತ ಸಂಸ್ಥೆಯ ಹುದ್ದೆಯನ್ನು ಹೊಂದಲು ಯಾವುದೇ ರೀತಿಯಲ್ಲಿ ಅರ್ಹರಲ್ಲ. ನಿಮ್ಮ ವಿರುದ್ಧ ಕಾರ್ಪೊರೇಟ್ ದುಷ್ಕೃತ್ಯ ಮತ್ತು ಆಡಳಿತಕ್ಕಾಗಿ ಈಗಾಗಲೇ ಹಲವಾರು ಪ್ರಕರಣಗಳಿವೆ. ರಾಜೀನಾಮೆ ನೀಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಇನ್ನೆಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ: ಲಲಿತ್ ಮೋದಿ ಟ್ವೀಟ್
ಬುಧವಾರ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡಿರುವ ಲಲಿತ್ ಮೋದಿ, 'ನನ್ನ ಹಲವು ಮೂಲಗಳಿಂದ ಮಾಹಿತಿ ದೊರೆತಿದ್ದು, ಆ ಹೆಸರು ಬಹಿರಂಗಪಡಿಸದ ಕಾರ್ಯದರ್ಶಿ ದೇಶೀಯ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟರ್‌ಗಳ ವಿರುದ್ಧ ಒತ್ತಡ ತರುವ ಯೋಜನೆಗೆ ಸಂಬಂಧ ಹೊಂದಿದ್ದಾನೆ. ಆ ಸಹಾಯಕನು ಬಿಸಿಸಿಐಯಲ್ಲಿನ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಆಟಗಾರರ ಆಯ್ಕೆಯಲ್ಲಿ ಅಡ್ಡಿಪಡಿಸುವ ಬೆದರಿಕೆ ಹಾಕಿ ಹಣದ ಬೇಡಿಕೆ ಇಟ್ಟಿದ್ದಾನೆ. ಜನರು ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾರೆಯೇ? ಎಂದು ಲಲಿತ್ ಮೋದಿ ಕಿಡಿಕಾರಿದ್ದಾರೆ.
2010ರಿಂದ Londonನಲ್ಲಿ ವಾಸಿಸುತ್ತಿರುವ ಲಲಿತ್ ಮೋದಿ ಆರೋಪಗಳು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಂಚಲನ ಮೂಡಿಸಿದ್ದು, ಈ ಹಿನ್ನೆಲೆಯಲ್ಲಿ ರಾಜೀವ್ ಶುಕ್ಲಾ ವಿರುದ್ಧ ಲಲಿತ್ ಮೋದಿ ಮಾಡಿದ ಆರೋಪಗಳು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿವೆ. ಆದರೆ ಈ ಆರೋಪಗಳಲ್ಲಿ ಎಷ್ಟು ಸತ್ಯ ಇದೆ ಎಂಬುದು ಇನ್ನೂ ಅಧಿಕೃತವಾಗಿ ಸ್ಪಷ್ಟವಾಗಿಲ್ಲ. ಆದರೂ ಈ ಪ್ರಕರಣವನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿ ಸಂಪೂರ್ಣ ತನಿಖೆ ನಡೆಸಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.
ಬಿಸಿಸಿಐನಲ್ಲಿ ಹಲವು ಆಡಳಿತ ಬದಲಾವಣೆಗಳನ್ನು ಎದುರಿಸಿ ಉಳಿದಿರುವ ಅನುಭವಿ ಆಡಳಿತಗಾರ ರಾಜೀವ್ ಶುಕ್ಲಾ, ತಮ್ಮ ಕಾರ್ಯದರ್ಶಿಯ ವಿರುದ್ಧದ ಆರೋಪಗಳ ಕುರಿತು ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.