ಮೊಹಮ್ಮದ್ ಅಮೀರ್ ಸೋಮವಾರದಂದು ಬ್ರಿಟಿಷ್ ಪ್ರಜೆಯಾಗಿ ಅಫ್ಘಾನಿಸ್ತಾನ ಪ್ರೀಮಿಯರ್ ಲೀಗ್‌ಗೆ (APL) ನೋಂದಾಯಿಸಿಕೊಂಡಿದ್ದಾರೆ. 36 ಟೆಸ್ಟ್, 61 ಏಕದಿನ ಮತ್ತು 62 ಟಿ20 ಪಂದ್ಯಗಳನ್ನು ಆಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಈ ತಾರೆ, ಈ ವರ್ಷ ಬ್ರಿಟಿಷ್ ಪೌರತ್ವವನ್ನು ಪಡೆದುಕೊಂಡಿದ್ದಾರೆ. ಬ್ರಿಟಿಷ್ ಪ್ರಜೆಯಾಗಿ ಅಫ್ಘಾನಿಸ್ತಾನ ಪ್ರೀಮಿಯರ್ ಲೀಗ್‌ಗೆ ನೋಂದಾಯಿಸಿಕೊಂಡ ನಂತರ, ಅಮೀರ್ ಅವರು ಐಪಿಎಲ್‌ಗೂ ಬ್ರಿಟಿಷ್ ಪ್ರಜೆಯಾಗಿಯೇ ನೋಂದಾಯಿಸಿಕೊಳ್ಳಬಹುದು ಎಂಬ ಊಹಾಪೋಹಗಳು ಎದ್ದಿವೆ. ಈ ಹಿಂದೆ ಅಜರ್ ಮಹಮೂದ್ ಕೂಡ ಇದೇ ಮಾರ್ಗದ ಮೂಲಕ ಐಪಿಎಲ್‌ನಲ್ಲಿ ಆಡಿದ್ದರು. ಪಾಕಿಸ್ತಾನದ ಆಟಗಾರರಿಗೆ ಅಥವಾ ಪ್ರಜೆಗಳಿಗೆ ಐಪಿಎಲ್‌ನಲ್ಲಿ ಆಡಲು ಅವಕಾಶವಿಲ್ಲ.
ಆದರೆ, ಐಪಿಎಲ್‌ಗೆ ನೋಂದಾಯಿಸಿಕೊಂಡಿದ್ದಾರೆ ಎಂಬ ವದಂತಿಗಳನ್ನು ಆ ಕ್ರಿಕೆಟಿಗ 'ಎಕ್ಸ್'ನಲ್ಲಿ ಪೋಸ್ಟ್ ಮಾಡುವ ಮೂಲಕ ತಳ್ಳಿಹಾಕಿದ್ದಾರೆ. 'ಎಲ್ಲರಿಗೂ ನಮಸ್ಕಾರ, ಐಪಿಎಲ್‌ಗೆ ಸಂಬಂಧಿಸಿದ ಸುದ್ದಿ ಸತ್ಯವಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಈ ವರ್ಷದ ಆರಂಭದಲ್ಲಿ, ವಿದೇಶಿ ಆಟಗಾರನಾಗಿ ಪಂದ್ಯಾವಳಿಯ ಆಟಗಾರರ ಡ್ರಾಫ್ಟ್‌ನಲ್ಲಿ ಮಾರಾಟವಾಗದ ನಂತರ ಅಮೀರ್ ದಿ ಹಂಡ್ರೆಡ್‌ನಲ್ಲಿ ಸ್ಥಳೀಯ ಆಟಗಾರನಾಗಿ ಆಡಿದರು. ಅವರು ತಮ್ಮ ಪತ್ನಿ ನರ್ಜೀಸ್ ಖಾನ್ ಮೂಲಕ ಬ್ರಿಟಿಷ್ ಪೌರತ್ವವನ್ನು ಪಡೆದಿದ್ದಾರೆ.
'ನಾನು ಈಗ ಬ್ರಿಟಿಷ್ ಪ್ರಜೆ. ನೀವು ಕೌಂಟಿ ಚಾಂಪಿಯನ್‌ಶಿಪ್ ಮತ್ತು ದಿ ಹಂಡ್ರೆಡ್‌ನಂತಹ ಸ್ಪರ್ಧೆಗಳಲ್ಲಿ ಸ್ಥಳೀಯ ಆಟಗಾರನಾಗಿ ಆಡುವಾಗ, ನೀವು ಸ್ಥಳೀಯನಾಗಿ ಬೇರೆ ದೇಶಕ್ಕಾಗಿ ಆಡಲು ಸಾಧ್ಯವಿಲ್ಲ ಎಂದು ಹೇಳುವ ದಾಖಲೆಗೆ ಸಹಿ ಹಾಕಬೇಕು. ಆದ್ದರಿಂದ, ನಾನು ಮೊದಲು ಹೊಂದಿದ್ದ ಪಾಕಿಸ್ತಾನ ಅಧ್ಯಾಯವು ಈಗ ಮುಚ್ಚಲ್ಪಟ್ಟಿದೆ' ಎಂದು ಅಮೀರ್ ಹೇಳಿದರು.
ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಜರ್ ಮಹಮೂದ್ ಕೂಡ 2012 ರಿಂದ 2015ರವರೆಗೆ ಐಪಿಎಲ್‌ನಲ್ಲಿ ಆಡಿದ್ದರು. ಅಮೀರ್ ಅವರಂತೆಯೇ, ಮಹಮೂದ್ ಕೂಡ ಬ್ರಿಟಿಷ್ ಪೌರತ್ವವನ್ನು ಪಡೆದುಕೊಂಡಿದ್ದರು ಮತ್ತು ನಂತರ ಅವರನ್ನು ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿಯೂ ಕೆಲವು ಪಂದ್ಯಗಳನ್ನು ಆಡಿದ್ದರು.
2024ರ ಟಿ20 ವಿಶ್ವಕಪ್‌ನ ನಂತರ ಅಮೀರ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಇದರೊಂದಿಗೆ ಅವರ ಪಾಕಿಸ್ತಾನ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಬಿದ್ದಿತು; ಈ ಅವಧಿಯಲ್ಲಿ ಅವರು 36 ಟೆಸ್ಟ್, 61 ಏಕದಿನ ಮತ್ತು 62 ಟಿ20 ಪಂದ್ಯಗಳನ್ನು ಆಡಿದ್ದರು.
ತಮ್ಮ ತಲೆಮಾರಿನ ಅತ್ಯುತ್ತಮ ಎಡಗೈ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿರುವ ಅಮೀರ್, ಪ್ರಪಂಚದಾದ್ಯಂತ ನಡೆಯುವ ಫ್ರಾಂಚೈಸಿ ಲೀಗ್‌ಗಳಲ್ಲಿ ಇಂದಿಗೂ ಹೆಚ್ಚು ಬೇಡಿಕೆಯಿರುವ ಆಟಗಾರರಾಗಿದ್ದಾರೆ.