ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷರಾಗಿ 2ನೇ ಅವಧಿಗೆ ಜಯ್ ಶಾ ಅವಿರೋಧವಾಗಿ ಮರು ನೇಮಕಗೊಂಡಿದ್ದಾರೆ.
ಕ್ರೀಡೆಯ ಪಾಲಿಗೆ ಇದೊಂದು ನಿರ್ಣಾಯಕ ಘಟ್ಟವಾಗಿದ್ದು, ಈ ಸಮಯದಲ್ಲಿ "ಕಾರ್ಯನಿರ್ವಹಣೆಯಲ್ಲಿ ನಿರಂತರತೆಯನ್ನು" ಖಚಿತಪಡಿಸಿಕೊಳ್ಳಲು ಮತ್ತೆ ಎರಡು ವರ್ಷಗಳ ಅವಧಿಗೆ ಜಯ್ ಶಾ ಅವರನ್ನು ಮರು ನೇಮಕ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಉನ್ನತ ಸಂಸ್ಥೆ ದೃಢಪಡಿಸಿದೆ.
ಐಸಿಸಿ ನಿರ್ದೇಶಕರು ಮಂಡಿಸಿದ ಪ್ರಸ್ತಾವನೆಯ ಮೇರೆಗೆ ಬಾಲಿಯಲ್ಲಿ ನಡೆದ ಜಾಗತಿಕ ಕ್ರಿಕೆಟ್ ಸಂಸ್ಥೆಯ ಮಂಡಳಿ ಮತ್ತು ಸಮಿತಿ ಸಭೆಗಳಲ್ಲಿ ಈ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಲಾಯಿತು. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಬರುವ ಮೊದಲು ಬಿಸಿಸಿಐ (BCCI) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ 38 ವರ್ಷದ ಜಯ್ ಶಾ, 2024ರ ಡಿಸೆಂಬರ್ನಲ್ಲಿ ಈ ಹುದ್ದೆಯನ್ನು ವಹಿಸಿಕೊಂಡಿದ್ದರು.
ಭಾನುವಾರದಂದು ಇಲ್ಲಿ ಮುಕ್ತಾಯಗೊಂಡ ಐಸಿಸಿ ಮಂಡಳಿಯ ಸಭೆಗಳಲ್ಲಿ ಅವರನ್ನು ಮತ್ತೆ ನೇಮಕ ಮಾಡಲಾಯಿತು. ಜಯ್ ಶಾ ಅವರನ್ನು ಉನ್ನತ ಸ್ಥಾನದಲ್ಲಿ ಉಳಿಸಿಕೊಳ್ಳುವುದು ಮಂಡಳಿಯು ಅವರ ನಾಯಕತ್ವದ ಮೇಲಿನ ಬಲವಾದ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಕ್ರಿಕೆಟ್ನ ಜಾಗತಿಕ ವ್ಯಾಪ್ತಿಯನ್ನು ವಿಸ್ತರಿಸುವುದು, ಅದರ ಅಭಿಮಾನಿಗಳ ನೆಲೆಯನ್ನು ಬೆಳೆಸುವುದು ಮತ್ತು ವಾಣಿಜ್ಯ ಯಶಸ್ಸನ್ನು ಹೆಚ್ಚಿಸುವತ್ತ ಕೌನ್ಸಿಲ್ ಗಮನಹರಿಸುವುದರಿಂದ, ಇದು ಆಟದ ನಿರ್ಣಾಯಕ ತಿರುವು ಹಂತದಲ್ಲಿ ಸ್ಥಿರ ನಿರ್ವಹಣೆಯನ್ನು ಖಚಿತಪಡಿಸುತ್ತದೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಕ್ರಿಕೆಟ್ ಕ್ರೀಡೆಯು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮೂಲಕ ಮತ್ತೆ ಒಲಿಂಪಿಕ್ಸ್ಗೆ ಮರಳಲು ಸಿದ್ಧತೆ ನಡೆಸುತ್ತಿದೆ.
ಮರುನೇಮಕಕ್ಕೆ ಧನ್ಯವಾದ ತಿಳಿಸಿದ ಜಯ್ ಶಾ, ಐಸಿಸಿಯನ್ನು ಮುನ್ನಡೆಸುವುದು ಗೌರವ ಮತ್ತು ಪ್ರಮುಖ ಜವಾಬ್ದಾರಿ ಆಗಿದೆ. ಪ್ರಪಂಚದಾದ್ಯಂತ ಕ್ರಿಕೆಟ್ನ ಹಿತಾಸಕ್ತಿಗಳನ್ನು ಹೆಚ್ಚಿಸಲು ನಮ್ಮ ಸದಸ್ಯರೊಂದಿಗೆ ಒಟ್ಟಾಗಿ ಕೆಲಸ ಮಾಡಲು ನಾನು ಬದ್ಧನಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.