'ಮಹಿಳೆಯರ ಸಹವಾಸ, ಪಾರ್ಟಿ, ಸಿಗರೇಟ್, ಮದ್ಯಪಾನ': ವಿನೋದ್ ಕಾಂಬ್ಳಿ ಸ್ಥಿತಿಯೇ ನಿಮಗೂ ಬರುತ್ತೆ'; ಯೋಗರಾಜ್ ಸಿಂಗ್ ವಿರುದ್ಧ ಪೃಥ್ವಿ ಶಾ ಕಿಡಿ
ಯಾರೂ ತನ್ನ ವೈಯಕ್ತಿಕ ಜೀವನವನ್ನು ಗುರಿಯಾಗಿಸುವುದನ್ನು ತಾನು ಸಹಿಸುವುದಿಲ್ಲ. ಅಲ್ಲದೆ, ತನ್ನ ಮೌನವನ್ನು ದೌರ್ಬಲ್ಯ ಎಂದು ತಪ್ಪಾಗಿ ಭಾವಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ತಮ್ಮ ವಿರುದ್ಧ ಮಾಡಿದ ಅವಹೇಳನಕಾರಿ ಹೇಳಿಕೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭಾರತದ ಬ್ಯಾಟ್ಸ್ಮನ್ ಪೃಥ್ವಿ ಶಾ ಹೇಳಿದ್ದಾರೆ. ಶಾ, ಸುದೀರ್ಘ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ, ತಮ್ಮ ಹಿಂದಿನ ತೊಂದರೆಗೊಳಗಾದ ಜೀವನಶೈಲಿ ರಹಸ್ಯವಾಗಿ ಉಳಿದಿಲ್ಲ. ಆದರೆ, ನಕಾರಾತ್ಮಕತೆಯನ್ನು ಹರಡಲು, ನನ್ನ ಖ್ಯಾತಿಯನ್ನು ಮತ್ತಷ್ಟು ಹಾಳು ಮಾಡಲು ಅಥವಾ ಅವರ ವೆಚ್ಚದಲ್ಲಿ ಪ್ರಚಾರ ಪಡೆಯಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಯೋಗರಾಜ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಶಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಆ ಹೇಳಿಕೆಗಳಿಗೆ ಪ್ರತಿಕ್ರಿಯಿಸುವ ದೀರ್ಘ ಟಿಪ್ಪಣಿಯನ್ನು ನೀಡಿದ್ದಾರೆ.
ಸ್ಪೋರ್ಟ್ಸ್ ಲಾಂಚ್ಪ್ಯಾಡ್ನಲ್ಲಿ ನಡೆದ ಸಂವಾದದ ಸಂದರ್ಭದಲ್ಲಿ ಯೋಗರಾಜ್, ಪೃಥ್ವಿ ಶಾ ಅವರ ಜೀವನಶೈಲಿಯನ್ನು ಭಾರತದ ಮಾಜಿ ಬ್ಯಾಟ್ಸ್ಮನ್ ವಿನೋದ್ ಕಾಂಬ್ಳಿ ಅವರ ಜೀವನಶೈಲಿಗೆ ಹೋಲಿಸಿದರು ಮತ್ತು ಅದು ಅವರ ವೃತ್ತಿಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಸೂಚಿಸಿದರು. ರಾಷ್ಟ್ರೀಯ ಮಟ್ಟದಲ್ಲಿ ಶಾ ಅವರ ಪತನದ ಬಗ್ಗೆ ಚರ್ಚಿಸುವಾಗ ಅವರು ಇಬ್ಬರು ಆಟಗಾರರ ನಡುವೆ ಹೋಲಿಕೆಗಳನ್ನು ಸಹ ಮಾಡಿದರು.
'ಪೃಥ್ವಿ ಶಾ ಅವರ ವೃತ್ತಿಜೀವನ ಏಕೆ ಕುಸಿಯಿತು? ಇದೇ ರೀತಿಯ ಪರಿಸ್ಥಿತಿ ಅವರಿಗಿಂತ ಮೊದಲು ವಿನೋದ್ ಕಾಂಬ್ಳಿ ಅವರ ವಿಷಯದಲ್ಲೂ ನಡೆದಿತ್ತು. ಪಾರ್ಟಿಗಳು, ಮಹಿಳೆಯರ ಸಹವಾಸ, ಸಿಗರೇಟು ಮತ್ತು ಮದ್ಯಪಾನವೇ ಇದಕ್ಕೆ ಕಾರಣವಾಗಿದ್ದವು. ಒಮ್ಮೆ ನಾನು ಕಾಂಬ್ಳಿಯನ್ನು, 'ಏನಿದು ಮಗನೇ? ನಿನ್ನಲ್ಲಿ ಇಷ್ಟೊಂದು ಪ್ರತಿಭೆಯಿದೆ, ಆದರೆ ನೀನು ರಾತ್ರಿ 2.30ಕ್ಕೆ ನಿನ್ನ ಕೋಣೆಗೆ ಬರುತ್ತೀಯಲ್ಲ!' ಎಂದು ಕೇಳಿದ್ದೆ. ಅದಕ್ಕೆ ಆತ, 'ನಿಮ್ಮ ಕಾಲ ಮುಗಿದುಹೋಗಿದೆ, ಈಗ ನಾವು ಬೇರೆಯದೇ ರೀತಿಯ ಕ್ರಿಕೆಟ್ ಆಡುತ್ತಿದ್ದೇವೆ' ಎಂದು ಉತ್ತರಿಸಿದ. ಮರುದಿನ ಬೆಳಿಗ್ಗೆ, ಕೋರ್ಟ್ನಿ ವಾಲ್ಷ್ ಆತನ ವಿಕೆಟ್ ಉರುಳಿಸಿದರು (ಬೌಲ್ಡ್ ಮಾಡಿದರು) ಮತ್ತು ಭಾರತ ಆ ಪಂದ್ಯವನ್ನು ಸೋತಿತು. ನಂತರ, ಆತನ ಜೊತೆಯಲ್ಲಿದ್ದ ಮಹಿಳೆ ಅವನನ್ನು ತೊರೆದರು; ಅಲ್ಲದೆ, ಅವರಿಗೆ ಸಿಗರೇಟು ಮತ್ತು ಮದ್ಯ ಒದಗಿಸುವವರೂ ಯಾರೂ ಇಲ್ಲದಂತಾಯಿತು. ಪೃಥ್ವಿ ಶಾ ಅವರ ವಿಷಯದಲ್ಲೂ ಇದೇ ನಡೆದಿದೆ. ನೀವು ಪಾರ್ಟಿಗಳಿಗೆ ಹೋಗಿ, ಮಹಿಳೆಯರ ಸಹವಾಸದಲ್ಲಿ ತೊಡಗಿ, ಮದ್ಯಪಾನ ಮಾಡುತ್ತಾ, ಕೆಟ್ಟ ಸಂಗಾತಿಗಳೊಂದಿಗೆ ಇದ್ದರೆ, ಅವರಿಗಾದ ಗತಿಯೇ ನಿಮಗೂ ಆಗುತ್ತದೆ' ಎಂದು ಯೋಗರಾಜ್ ಅವರು ಸಂವಾದವೊಂದರ ವೇಳೆ ಹೇಳಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೃಥ್ವಿ ಶಾ, ಯಾರೂ ತನ್ನ ವೈಯಕ್ತಿಕ ಜೀವನವನ್ನು ಗುರಿಯಾಗಿಸುವುದನ್ನು ತಾನು ಸಹಿಸುವುದಿಲ್ಲ. ಅಲ್ಲದೆ, ತನ್ನ ಮೌನವನ್ನು ದೌರ್ಬಲ್ಯ ಎಂದು ತಪ್ಪಾಗಿ ಭಾವಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
'ನನ್ನ ಭೂತಕಾಲವು ನನ್ನ ಜೀವನದ ಒಂದು ಭಾಗವಾಗಿದೆ; ಅದನ್ನು ಮರೆಮಾಚುವ ಅಥವಾ ಅದಕ್ಕಾಗಿ ನಾಚಿಕೆಪಡುವ ಅಗತ್ಯ ನನಗಿಲ್ಲ. ಆದರೆ, ನನ್ನ ಹೆಸರು, ವೈಯಕ್ತಿಕ ಜೀವನ ಅಥವಾ ಭೂತಕಾಲವನ್ನು ಬಳಸಿಕೊಂಡು ಉದ್ದೇಶಪೂರ್ವಕವಾಗಿ ನಕಾರಾತ್ಮಕತೆಯನ್ನು ಹರಡುವುದು, ಅನಗತ್ಯ ವಿವಾದಗಳನ್ನು ಸೃಷ್ಟಿಸುವುದು, ನನ್ನ ಘನತೆಗೆ ಧಕ್ಕೆ ತರುವುದು ಅಥವಾ ನನ್ನ ಹೆಸರನ್ನು ಬಳಸಿಕೊಂಡು ಪ್ರಚಾರ ಹಾಗೂ ಗಮನವನ್ನು ಪಡೆಯಲು ಪ್ರಯತ್ನಿಸುವುದನ್ನು ನಾನು ಸಹಿಸುವುದಿಲ್ಲ' ಎಂದಿದ್ದಾರೆ.
'ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೂ, ಸುಳ್ಳು, ದಾರಿತಪ್ಪಿಸುವ, ಮಾನಹಾನಿಕರ ಅಥವಾ ದುರುದ್ದೇಶಪೂರಿತ ವಿಷಯಗಳ ಮೂಲಕ ಒಬ್ಬರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಇದೊಂದು ಸ್ಪಷ್ಟ ಮತ್ತು ಅಂತಿಮ ಎಚ್ಚರಿಕೆ ಎಂದು ಭಾವಿಸಿ: ಇಂತಹ ಚಟುವಟಿಕೆಗಳಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ವೇದಿಕೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಶಾ ಹೇಳಿರುವುದಾಗಿ 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.