ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ದೇಸಿ ಕ್ರಿಕೆಟ್`ನಲ್ಲಿ ಸೆಹ್ವಾಗ್`ರ ಮತ್ತೋರ್ವ ಪುತ್ರನ ಅಬ್ಬರ; 7 ವಿಕೆಟ್ ಕಬಳಿಸಿ ಮಿಂಚಿದ ವೇದಾಂತ್!

ಅಫ್ಘಾನಿಸ್ತಾನ U19 ವಿರುದ್ಧದ ಸೆಮಿಫೈನಲ್ ಮತ್ತು ಪಾಕಿಸ್ತಾನ U19 ವಿರುದ್ಧದ ಫೈನಲ್ ಎರಡೂ ಪಂದ್ಯಗಳಲ್ಲಿ ಅರ್ಧಶತಕದ ಗಡಿ ದಾಟಿದ್ದರು. ಆ ಮೂಲಕ ಐದು ವರ್ಷಗಳ ಬಳಿಕ ಭಾರತ U19 ತಂಡ ಟೂರ್ನಿ ಗೆಲ್ಲುವಲ್ಲಿ ಮಹತ್ವ..

ವೇದಾಂತ್ ಸೆಹ್ವಾಗ್ ಮತ್ತು ಆರ್ಯವೀರ್ ಸೆಹ್ವಾಗ್
Srinivasa Murthy VN
Updated On : 26 Nov 2026, 11:49 pm

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಮತ್ತೋರ್ವ ಪುತ್ರ ಕೂಡ ದೇಶೀಯ ಕ್ರಿಕೆಟ್ ನಲ್ಲಿ ಮಿಂಚು ಹರಿಸಿದ್ದು, ಆಯ್ಕೆದಾರರ ಗಮನ ಸೆಳೆದಿದ್ದಾರೆ.

ಈ ಹಿಂದೆ ಸೆಹ್ವಾಗ್ ರ ಹಿರಿಯ ಪುತ್ರ ಆರ್ಯವೀರ್ ಸೆಹ್ವಾಗ್ ಅಂಡರ್ 19 ಕ್ರಿಕೆಟ್ ನಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಮಿಂಚು ಹರಿಸಿದ್ದರು. 2026ರ U19 ಏಷ್ಯಾ ಕಪ್ ಟೂರ್ನಿಯಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳನ್ನು ಸಿಡಿಸಿದ್ದ ಆರ್ಯವೀರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಅಫ್ಘಾನಿಸ್ತಾನ U19 ವಿರುದ್ಧದ ಸೆಮಿಫೈನಲ್ ಮತ್ತು ಪಾಕಿಸ್ತಾನ U19 ವಿರುದ್ಧದ ಫೈನಲ್ ಎರಡೂ ಪಂದ್ಯಗಳಲ್ಲಿ ಅರ್ಧಶತಕದ ಗಡಿ ದಾಟಿದ್ದರು. ಆ ಮೂಲಕ ಐದು ವರ್ಷಗಳ ಬಳಿಕ ಭಾರತ U19 ತಂಡ ಟೂರ್ನಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

Advertisement

Advertisement

ಈ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಇದೀಗ ಸೆಹ್ವಾಗ್ ರ ಮತ್ತೋರ್ವ ಪುತ್ರ ವೇದಾಂತ್ ಸೆಹ್ವಾಗ್ ಕೂಡ ತಮ್ಮ ಅಮೋಘ ಪ್ರದರ್ಶನದ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.

Also Read

149 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; ಒಂದೇ ಪಂದ್ಯದಲ್ಲಿ ಶತಕ, 7 ವಿಕೆಟ್, ಅಪರೂಪದ ದಾಖಲೆ ಬರೆದ ದಕ್ಷಿಣ ಆಫ್ರಿಕಾ ಆಟಗಾರ!

ದೇಶೀ ಕ್ರಿಕೆಟ್ ನಲ್ಲಿ ವೇದಾಂತ್ ಮಿಂಚು

ಕೂಚ್ ಬೆಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸೆಹ್ವಾಗ್ ರ ಕಿರಿಯ ಪುತ್ರ ವೇದಾಂತ್ ಸೆಹ್ವಾಗ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ದೆಹಲಿ ಅಂಡರ್-19 ತಂಡದ ಪರ ಆಡುತ್ತಿರುವ ವೇದಾಂತ್, ಪಂಜಾಬ್ ವಿರುದ್ಧದ ಪಂದ್ಯದಲ್ಲಿ 88 ರನ್ ನೀಡಿ 7 ವಿಕೆಟ್ ಕಬಳಿಸಿದ್ದಾರೆ.

ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಂಜಾಬ್ ತಂಡ, ವೇದಾಂತ್ ದಾಳಿಗೆ ತತ್ತರಿಸಿ 238 ರನ್‌ಗಳಿಗೆ ಆಲೌಟ್ ಆಯಿತು. ವೇದಾಂತ್ 22.3 ಓವರ್‌ಗಳಲ್ಲಿ 88 ರನ್ ನೀಡಿ ಏಳು ವಿಕೆಟ್ ಪಡೆದರು.

ಪಂದ್ಯದ ಆರಂಭದಲ್ಲೇ ಪಂಜಾಬ್ ತಂಡ 22 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ವೇದಾಂತ್ ಆರಂಭಿಕ ವಿಕೆಟ್‌ಗಳನ್ನು ಪಡೆಯುವ ಮೂಲಕ ದೆಹಲಿಗೆ ಮೇಲುಗೈ ತಂದುಕೊಟ್ಟರು. ಬಳಿಕ 54 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಪಂಜಾಬ್ ಮತ್ತಷ್ಟು ಒತ್ತಡಕ್ಕೆ ಸಿಲುಕಿತು.

ಈ ಹಂತದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ದೈವಿಕ್ ಹಾಗೂ ನೂರ್‌ವೀರ್ ಸಿಂಗ್ ಆರನೇ ವಿಕೆಟ್‌ಗೆ 102 ರನ್‌ಗಳ ಜೊತೆಯಾಟವಾಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ಪ್ರಯತ್ನಿಸಿದರು. ಆದರೆ 36ನೇ ಓವರ್‌ನಲ್ಲಿ ವೇದಾಂತ್ ಇಬ್ಬರನ್ನೂ ಔಟ್ ಮಾಡುವ ಮೂಲಕ ಪಂಜಾಬ್‌ನ ಚೇತರಿಕೆಗೆ ಬ್ರೇಕ್ ಹಾಕಿದರು.

ನೂರ್‌ವೀರ್ ಹಾಗೂ ಶಿವಂ ಮಟ್ರಿ ವಿಕೆಟ್‌ಗಳನ್ನು ಸತತವಾಗಿ ಕಬಳಿಸಿದರು. ಬಳಿಕ ದೈವಿಕ್ (61) ಅವರ ವಿಕೆಟ್ ಪಡೆದ ವೇದಾಂತ್, ಸಾಹಿಬ್‌ಜೋತ್‌ವೀರ್ ಸಿಂಗ್ ಹಾಗೂ ಕುಶಾಲ್ ಬನ್ಸಾಲ್ ಅವರನ್ನೂ ಔಟ್ ಮಾಡಿ ತಮ್ಮ ಏಳು ವಿಕೆಟ್‌ಗಳ ಸಾಧನೆ ಪೂರ್ಣಗೊಳಿಸಿದರು.

ಅಣ್ಣನ ನಾಯಕತ್ವದಲ್ಲಿ ಮಿಂಚಿದ ತಮ್ಮ ವೇದಾಂತ್

ರೋಪರ್‌ ನ ಗವರ್ನಮೆಂಟ್ ಕಾಲೇಜ್ ಕ್ರಿಕೆಟ್ ಮೈದಾನದಲ್ಲಿ ಪಂಜಾಬ್ U19 ತಂಡದ ವಿರುದ್ಧ ನಡೆಯುತ್ತಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ, ಹಿರಿಯ ಸಹೋದರ ಆರ್ಯವೀರ್ ಸೆಹ್ವಾಗ್ ನಾಯಕತ್ವದಲ್ಲಿ ಬಲಗೈ ಸ್ಪಿನ್ನರ್ ಆಗಿರುವ ಕಿರಿಯ ಸಹೋದರ ವೇದಾಂತ್ ಸೆಹ್ವಾಗ್ ಕಣಕ್ಕಿಳಿದಿದ್ದಾರೆ. ಬೌಲಿಂಗ್‌ನಲ್ಲಿ ಮಿಂಚಿದ ವೇದಾಂತ್ ಅವರು 22.3 ಓವರ್‌ಗಳಲ್ಲಿ 88 ರನ್ ನೀಡಿ 7 ವಿಕೆಟ್ ಪಡೆದ ಅಮೋಘ ಪ್ರದರ್ಶನ ತೋರಿದ್ದಾರೆ.

ದೆಹಲಿ ಮುನ್ನಡೆ

ಪಂಜಾಬ್ ತಂಡವನ್ನು 238 ರನ್‌ಗಳಿಗೆ ಕಟ್ಟಿಹಾಕಿದ ಬಳಿಕ ಬ್ಯಾಟಿಂಗ್ ಆರಂಭಿಸಿದ ದೆಹಲಿ ತಂಡ, ದಿನದಾಟದ ಅಂತ್ಯಕ್ಕೆ 40 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿತ್ತು. ತಂಡದ ನಾಯಕ ಹಾಗೂ ವೇದಾಂತ್ ಅವರ ಅಣ್ಣ ಆರ್ಯವೀರ್ ಸೆಹ್ವಾಗ್ ಆರಂಭಿಕನಾಗಿ ಕಣಕ್ಕಿಳಿದು 31 ರನ್ ಗಳಿಸಿ ಔಟಾದರು. ದ್ವೀಪ್ ಗೆಹ್ಲೋಟ್ ಮತ್ತು ಮೊಹಕ್ ಕುಮಾರ್ ಅಜೇಯರಾಗಿ ಕ್ರೀಸ್‌ನಲ್ಲಿದ್ದರು.

ಅಂದಹಾಗೆ ವೇದಾಂತ್ ಈ ಹಿಂದೆ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ದೆಹಲಿ ಅಂಡರ್-16 ತಂಡವನ್ನು ಪ್ರತಿನಿಧಿಸಿದ್ದರು. ಅಲ್ಲದೆ, ದೆಹಲಿ ಪ್ರೀಮಿಯರ್ ಲೀಗ್‌ನ ವೆಸ್ಟ್ ದೆಹಲಿ ಲಯನ್ಸ್ ಹಾಗೂ ಸೆಂಟ್ರಲ್ ದೆಹಲಿ ಕಿಂಗ್ಸ್ ತಂಡಗಳಲ್ಲೂ ಸ್ಥಾನ ಪಡೆದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement