ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ RCB ಆಟಗಾರ ಕೃನಾಲ್ ಪಾಂಡ್ಯ ಮೇಲೆ ಶೂ ಎಸೆತ! Video
ಕೃನಾಲ್ ಪಾಂಡ್ಯ ಮೈದಾನದ ಬೌಂಡರಿ ಗೆರೆಯ ಗ್ಯಾಲರಿ ಬಳಿ ಜಮಾಯಿಸಿದ್ದ ಅಭಿಮಾನಿಗಳತ್ತ ನಡೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ಮುಂಬೈ: ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2026ರ ವೇಳೆ, ಅಭಿಮಾನಿಗಳನ್ನು ಭೇಟಿಯಾಗಲು ಮುಂದಾದ ಬರೋಡಾ ತಂಡದ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರಿಗೆ ಅಹಿತಕರ ಅನುಭವವೊಂದು ಎದುರಾಯಿತು. ಬೌಂಡರಿ ಗೆರೆಯ ಬಳಿ ಆಟೋಗ್ರಾಫ್ ನೀಡಲು ತೆರಳುತ್ತಿದ್ದಾಗ, ಪ್ರೇಕ್ಷಕರೊಬ್ಬರು ಅವರತ್ತ ಶೂ ಎಸೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಕೃನಾಲ್ ಪಾಂಡ್ಯ ಮೈದಾನದ ಬೌಂಡರಿ ಗೆರೆಯ ಗ್ಯಾಲರಿ ಬಳಿ ಜಮಾಯಿಸಿದ್ದ ಅಭಿಮಾನಿಗಳತ್ತ ನಡೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಅವರು ಜನರ ಹತ್ತಿರ ತಲುಪುತ್ತಿದ್ದಂತೆಯೇ ಅವರತ್ತು ಶೂ ಬಂದು ಬೀಳುತ್ತದೆ. ಅದೃಷ್ಟವಶಾತ್, ಕೃನಾಲ್ ಸಮಯಪ್ರಜ್ಞೆ ಮೆರೆದಿದ್ದು, ಆ ಶೂನಿಂದ ತಪ್ಪಿಸಿಕೊಂಡಿದ್ದಾರೆ.
ಈ ಅನಿರೀಕ್ಷಿತ ಘಟನೆಯಿಂದ ಕೃನಾಲ್ ದಿಗ್ಭ್ರಮೆಗೊಂಡಂತೆ ಕಂಡುಬಂದರು. ಕೂಡಲೇ ಅವರು ಪ್ರೇಕ್ಷಕರ ಕಡೆಗೆ ತಿರುಗಿ, ಇಂತಹ ವರ್ತನೆಯನ್ನು ಮಾಡದಂತೆ ಎಚ್ಚರಿಕೆ ನೀಡಿದರು. ಆದಾಗ್ಯೂ, ಈ ಘಟನೆಯ ನಂತರವೂ ಅವರು ಬೌಂಡರಿ ಗೆರೆಯ ಬಳಿ ಇದ್ದ ಅಭಿಮಾನಿಗಳೊಂದಿಗೆ ಮಾತುಕತೆ ಮುಂದುವರಿಸಿದರು.
ಕೃನಾಲ್ ಪಾಂಡ್ಯ 2026ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಐಪಿಎಲ್‌ನಲ್ಲಿ, ಅವರು ಹಲವು ಋತುಗಳನ್ನು ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಕಳೆದಿದ್ದು, ಅಲ್ಲಿ ತಮ್ಮ ಸಹೋದರ ಹಾರ್ದಿಕ್ ಪಾಂಡ್ಯ ಅವರೊಂದಿಗೆ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದರು.
ಈ ಸಹೋದರರು ಮುಂಬೈ ತಂಡದೊಂದಿಗೆ ಮೂರು ಬಾರಿ ಪ್ರಶಸ್ತಿ ಗೆದ್ದ ತಂಡದ ಭಾಗವಾಗಿದ್ದರು. ಈ ಕಾರಣದಿಂದಾಗಿ, ಈ ಘಟನೆ ನಡೆದಿದೆ ಎನ್ನಲಾಗಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಕೃನಾಲ್ ಎಲ್ಲರಿಗೂ ಪರಿಚಿತ ಮುಖವಾಗಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದಲ್ಲಿ ಸ್ವಲ್ಪ ಕಾಲ ಕಳೆದ ನಂತರ, ಇದೀಗ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಭಾಗವಾಗಿದ್ದಾರೆ. ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಅವರು ಒಟ್ಟು ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.