ಗುವಾಹಟಿ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಟೀಂ ಇಂಡಿಯಾದಲ್ಲಿ ಸದ್ಯ ಆರಂಭಿಕ ಜೋಡಿಯೇ ಚರ್ಚೆಯ ಕೇಂದ್ರವಾಗಿದ್ದು, ಅವನು ಆಡಿದ್ರೂ, ಆಡದಿದ್ದರೂ ಏನೂ ವ್ಯತ್ಯಾಸವಾಗಲ್ಲ ಎಂದು ಮಾಜಿ ಕ್ರಿಕೆಟಿಗ ಅಜಿಂಕ್ಯಾ ರಹಾನೆ ಕಡ್ಡಿಮುರಿದಂತೆ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ನಾಯಕ ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿರುವ ಹಿನ್ನೆಲೆಯಲ್ಲಿ, ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲೂ ಇದೇ ಆರಂಭಿಕ ಜೋಡಿಯನ್ನು ಮುಂದುವರಿಸುವ ಸಾಧ್ಯತೆ ಇದೆ.
ಇದರಿಂದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮತ್ತೊಮ್ಮೆ ಆಡುವ ಬಳಗದಿಂದ ಹೊರಗುಳಿಯುವ ಸಾಧ್ಯತೆ ಎದುರಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. 406 ರನ್‌ಗಳ ಬೃಹತ್ ಗುರಿಯನ್ನು ಭಾರತ ಕೇವಲ 41.3 ಓವರ್‌ಗಳಲ್ಲಿ ಬೆನ್ನಟ್ಟಿತು. ನಾಯಕ ಶುಭ್ಮನ್ ಗಿಲ್ ಅಜೇಯ 223 ರನ್ ಸಿಡಿಸಿ ಗೆಲುವಿನ ರೂವಾರಿಯಾದರೆ, ರೋಹಿತ್ ಶರ್ಮಾ ಕೂಡ ಶತಕ ಬಾರಿಸಿ ಮಿಂಚಿದರು. ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯನ್ನು ಕೈವಶಪಡಿಸಿಕೊಂಡಿದೆ.
ಅವಕಾಶ ನೀಡಬೇಕು ಎಂಬ ಕಾರಣಕ್ಕೆ ಉತ್ತಮ ಸಂಯೋಜನೆ ಬದಲಿಸುವ ಅಗತ್ಯವಿಲ್ಲ
Cricbuzz ಚರ್ಚಾಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರಹಾನೆ, ಜೈಸ್ವಾಲ್‌ಗೆ ಆಟದ ಸಮಯ ನೀಡಬೇಕು ಎಂಬ ಕಾರಣಕ್ಕೆ ತಂಡದ ಗೆಲುವಿನ ಸಂಯೋಜನೆಯನ್ನು ಬದಲಿಸುವ ಅಗತ್ಯವಿಲ್ಲ ಎಂದು ಮಾಜಿ ಟೀಂ ಇಂಡಿಯಾ ಬ್ಯಾಟರ್ ಅಜಿಂಕ್ಯ ರಹಾನೆ ಅಭಿಪ್ರಾಯಪಟ್ಟಿದ್ದಾರೆ.
‘ಜೈಸ್ವಾಲ್ ಆಡದಿದ್ದರೂ ಏನೂ ವ್ಯತ್ಯಾಸವಿಲ್ಲ’
ಮೂರನೇ ಪಂದ್ಯದಲ್ಲಿ ತಂಡದಲ್ಲಿ ಒಂದು ಅಥವಾ ಎರಡು ಬದಲಾವಣೆಗಳನ್ನು ನೋಡಲು ಬಯಸುವುದಾಗಿ ರಹಾನೆ ಹೇಳಿದ್ದಾರೆ. ವೇಗಿ ಮೊಹಮ್ಮದ್ ಸಿರಾಜ್ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಇದೇ ವೇಳೆ 2027ರ ಏಕದಿನ ವಿಶ್ವಕಪ್ ಯೋಜನೆಯಲ್ಲಿ ನಿತೀಶ್ ಕುಮಾರ್ ರೆಡ್ಡಿ ಇದ್ದರೆ, ಅವರಿಗೆ ಅವಕಾಶ ನೀಡಿ ಆತ್ಮವಿಶ್ವಾಸ ತುಂಬುವುದು ಮುಖ್ಯ ಎಂದು ಅವರು ಹೇಳಿದ್ದಾರೆ.
“ಒಂದು ಅಥವಾ ಎರಡು ಬದಲಾವಣೆಗಳನ್ನು ನೋಡಲು ನಾನು ಬಯಸುತ್ತೇನೆ. ಮೊಹಮ್ಮದ್ ಸಿರಾಜ್ ಬಹುತೇಕ ತಂಡಕ್ಕೆ ಮರಳಬಹುದು. ನಿತೀಶ್ ಕುಮಾರ್ ರೆಡ್ಡಿ ಕೂಡ ಮತ್ತೆ ಆಡಬೇಕು ಎಂದು ನಾನು ಬಯಸುತ್ತೇನೆ. ಅವರು ನಿಮ್ಮ ವಿಶ್ವಕಪ್ ಯೋಜನೆಯಲ್ಲಿದ್ದರೆ, ಅವರ ಪಾತ್ರ ನಿರ್ಣಾಯಕವಾಗಿರುತ್ತದೆ. ಹೀಗಾಗಿ ಇಲ್ಲಿ ಅವರಿಗೆ ಆತ್ಮವಿಶ್ವಾಸ ನೀಡುವುದು ಮುಖ್ಯ,” ಎಂದು ರಹಾನೆ ಹೇಳಿದರು.
“ಜೈಸ್ವಾಲ್ ಈಗ ಆಡದಿದ್ದರೂ ಯಾವುದೇ ವ್ಯತ್ಯಾಸವಾಗುವುದಿಲ್ಲ. ಏಕೆಂದರೆ ನಮ್ಮ ಬ್ಯಾಟಿಂಗ್ ವಿಭಾಗ ಈಗಾಗಲೇ ಸೆಟ್ ಆಗಿದೆ. ಆಲ್‌ರೌಂಡರ್ ಸ್ಥಾನವನ್ನು ನೀವು ಖಚಿತಪಡಿಸಿಕೊಳ್ಳಬೇಕು,” ಎಂದು ಅವರು ಹೇಳಿದ್ದಾರೆ.
1-2 ಬದಲಾವಣೆ ಸಾಧ್ಯ ಎಂದ ದಿನೇಶ್ ಕಾರ್ತಿಕ್
ಇದೇ ಚರ್ಚೆಯಲ್ಲಿ ಭಾಗವಹಿಸಿದ್ದ ಮಾಜಿ ಭಾರತ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ಕೂಡ ಮೂರನೇ ಪಂದ್ಯದಲ್ಲಿ ಒಂದು ಅಥವಾ ಎರಡು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ನಮನ್ ಧೀರ್ ಗಾಯಗೊಂಡಿರುವುದರಿಂದ ಅವರು ಫಿಟ್ ಆಗಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಅವರ ಲಭ್ಯತೆಯನ್ನು ಆಧರಿಸಿ ತಂಡದಲ್ಲಿ ಬದಲಾವಣೆ ಆಗಬಹುದು ಎಂದು ಹೇಳಿದ್ದಾರೆ.
“ಮೊದಲನೆಯದಾಗಿ ಬಲವಂತದ ಬದಲಾವಣೆ ಆಗಬಹುದು. ನಮನ್ ಧೀರ್ ಗಾಯಗೊಂಡಿದ್ದಾರೆ. ಅವರು ಫಿಟ್ ಆಗಿದ್ದಾರೆಯೇ ಎಂಬುದು ನಮಗೆ ತಿಳಿದಿಲ್ಲ. ಒಬ್ಬ ವೇಗದ ಬೌಲರ್‌ಗೆ ವಿಶ್ರಾಂತಿ ನೀಡಿ ಸಿರಾಜ್‌ಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ. ನಿತೀಶ್ ಕುಮಾರ್ ರೆಡ್ಡಿ ಕೂಡ ತಂಡಕ್ಕೆ ಮರಳಬಹುದು” ಎಂದು ಕಾರ್ತಿಕ್ ಹೇಳಿದ್ದಾರೆ.
ಸರಣಿ ಈಗಾಗಲೇ ಭಾರತದ ಕೈವಶವಾಗಿರುವುದರಿಂದ, ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೆಲ್ ಅವರಿಗೆ ಒಂದು ಪಂದ್ಯದಲ್ಲಿ ಅವಕಾಶ ನೀಡುವುದೇ ಅಥವಾ ಸರಣಿಯನ್ನು 3-0 ಅಂತರದಲ್ಲಿ ಗೆಲ್ಲಲು ಅತ್ಯುತ್ತಮ ಸಂಯೋಜನೆಯನ್ನೇ ಮುಂದುವರಿಸುವುದೇ ಎಂಬುದು ತಂಡದ ನಿರ್ಧಾರ ಎಂದು ಅವರು ಹೇಳಿದ್ದಾರೆ.
“ನೀವು ಯಾರನ್ನು ಬೇಕಾದರೂ ಆಡಿಸಬಹುದು. ಸರಣಿಯನ್ನು ಗೆದ್ದಿದ್ದೀರಿ. ಜೈಸ್ವಾಲ್ ಮತ್ತು ಧ್ರುವ್ ಜುರೆಲ್ ಅವರನ್ನು ಒಂದು ಪಂದ್ಯಕ್ಕೆ ಸೇರಿಸಬೇಕೇ ಅಥವಾ ಅತ್ಯುತ್ತಮ 11 ಆಟಗಾರರೊಂದಿಗೆ 3-0 ಗೆಲುವು ಸಾಧಿಸಬೇಕೇ ಎಂಬುದು ಸಂಪೂರ್ಣವಾಗಿ ಅವರ ನಿರ್ಧಾರ” ಎಂದು ಕಾರ್ತಿಕ್ ಹೇಳಿದ್ದಾರೆ.