ಇಂದೋರ್: ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 224 ರನ್ ಗಳ ಬೃಹತ್ ಗುರಿ ನೀಡಿದೆ.
ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 223 ರನ್ ಗಳಿಸಿ ಆಲೌಟ್ ಆಯಿತು. ಭಾರತ ತಂಡದ ಪರ ಅಭಿಶೇಕ್ ಶರ್ಮಾ (69) ಅರ್ಧಶತಕ ಗಳಿಸಿದರೆ, ಇಶಾನ್ ಕಿಶನ್ (37) ಅವರಿಗೆ ಉತ್ತಮ ಸಾಥ್ ನೀಡಿದರು.
ಆರಂಭಿಕ ಆಘಾತದ ಹೊರತಾಗಿಯೂ ತಂಡಕ್ಕೆ ಸ್ಫೋಟಕ ಆರಂಭ ನೀಡಿದ ಅಭಿಷೇಕ್ ಶರ್ಮಾ ಕೇವಲ 30 ಎಸೆತಗಳನ್ನು ಎದುರಿಸಿ 5 ಸಿಕ್ಸರ್ ಮತ್ತು 6 ಬೌಂಡರಿ ಸಹಿತ 69 ರನ್ ಪೇರಿಸಿದರು.
ಉಳಿದಂತೆ ಭಾರತದ ಪರ ತಿಲಕ್ ವರ್ಮಾ (28), ನಿತೀಶ್ ಕುಮಾರ್ ರೆಡ್ಡಿ (21) ಮತ್ತು ಅಕ್ಸರ್ ಪಟೇಲ್ (20) ಕೆಳ ಕ್ರಮಾಂಕದಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ 200ರ ಗಡಿ ದಾಟುವಂತೆ ನೋಡಿಕೊಂಡರು.
ವಿಂಡೀಸ್ ಪರ ರೋಸ್ಟನ್ ಚೇಸ್, ಶಮರ್ ಜೋಸೆಫ್ ಮತ್ತು ಸ್ಪ್ರಿಂಗರ್ ತಲಾ 2 ವಿಕೆಟ್ ಪಡೆದರೆ, ಮೋಟಿ ಮತ್ತು ಕೀಮೋ ಪಾನ್ ತಲಾ 1 ವಿಕೆಟ್ ಪಡೆದರು.