ಮುಂಬೈ: ಐಪಿಎಲ್ 2027ರ ಆವೃತ್ತಿಗೂ ಮುನ್ನವೇ ಐದು ಬಾರಿಯ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್ ತನ್ನ ತಂಡದಲ್ಲಿ ಭಾರಿ ಬದಲಾವಣೆ ಮಾಡಿದ್ದು, ತಂಡತ್ತೆ ನೂತನ ಪ್ರಧಾನ ಕೋಚ್ ಆಯ್ಕೆ ಮಾಡಿದೆ.
ವೆಸ್ಟ್ ಇಂಡೀಸ್ನ ಮಾಜಿ ಆಲ್ರೌಂಡರ್ ಕೀರನ್ ಪೊಲಾರ್ಡ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದ್ದು, ಇದು ತಂಡದ ಹೊಸ ಅಧ್ಯಾಯ ಆರಂಭ ಎಂದು ಫ್ರಾಂಚೈಸಿ ಶನಿವಾರ ಪ್ರಕಟಿಸಿದೆ.
ಕಳೆದ ಕೆಲವು ಋತುಗಳಿಂದ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪೊಲಾರ್ಡ್, ಮಹೇಲಾ ಜಯವರ್ಧನೆ ಅವರ ನಿರ್ಗಮನದ ಬಳಿಕ ಮುಖ್ಯ ಕೋಚ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಹೊಸ ಅಧ್ಯಾಯ
“ಕ್ರಿಕೆಟ್ನಲ್ಲಿ ಆಟಗಾರನಿಂದ ಕೋಚ್ವರೆಗಿನ ಅತ್ಯಂತ ದೀರ್ಘಕಾಲದ ನಂಟುಗಳಲ್ಲಿ ಒಂದನ್ನು ಮುಂದುವರಿಸುತ್ತಾ, ಕೀರನ್ ಪೊಲಾರ್ಡ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿರುವುದನ್ನು ಮುಂಬೈ ಇಂಡಿಯನ್ಸ್ ಸಂತೋಷದಿಂದ ಪ್ರಕಟಿಸುತ್ತದೆ” ಎಂದು ಫ್ರಾಂಚೈಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ತಂಡದ ಪರಂಪರೆಯನ್ನು ಮುಂದುವರಿಸುವುದು, ಪ್ರತಿಭಾವಂತ ಆಟಗಾರರನ್ನು ಬೆಳೆಸುವುದು, ತಂಡದ ಸಂಸ್ಕೃತಿಯನ್ನು ಬಲಪಡಿಸುವುದು ಹಾಗೂ ಮೈದಾನದ ಒಳಗೆ ಮತ್ತು ಹೊರಗೆ ಶ್ರೇಷ್ಠತೆ ಸಾಧಿಸುವ ಗುರಿಯನ್ನು ಈ ನೇಮಕ ಪ್ರತಿಬಿಂಬಿಸುತ್ತದೆ ಎಂದು ಮುಂಬೈ ಇಂಡಿಯನ್ಸ್ ಹೇಳಿದೆ.
ಅಲ್ಲದೆ ತಂಡದ ಅತ್ಯಂತ ಯಶಸ್ವಿ ವರ್ಷಗಳಲ್ಲಿ ಭಾಗಿಯಾಗಿದ್ದ ಅನುಭವದೊಂದಿಗೆ, ಮುಂಬೈ ಇಂಡಿಯನ್ಸ್ನ ಮುಂದಿನ ಅಧ್ಯಾಯವನ್ನು ರೂಪಿಸುವ ಮಹತ್ವಾಕಾಂಕ್ಷೆಯೂ ಪೊಲಾರ್ಡ್ ಅವರ ನಾಯಕತ್ವದಲ್ಲಿರಲಿದೆ ಎಂದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ವಿಶ್ವಾಸ ವ್ಯಕ್ತಪಡಿಸಿದೆ.
ನೂತನ ಕೋಚ್`ಗೆ ಟ್ರೋಫಿಯೇ ಸವಾಲು
ಐಪಿಎಲ್ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಮುಂಬೈ ಇಂಡಿಯನ್ಸ್ ಕೊನೆಯ ಬಾರಿ 2020ರಲ್ಲಿ ಪ್ರಶಸ್ತಿ ಗೆದ್ದಿತ್ತು. ಆ ಬಳಿಕ ಏಳು ಋತುಗಳು ಕಳೆದಿದ್ದರೂ ತಂಡಕ್ಕೆ ಮತ್ತೊಂದು ಪ್ರಶಸ್ತಿ ಒಲಿದಿಲ್ಲ. ಹೀಗಾಗಿ, ವೆಸ್ಟ್ ಇಂಡೀಸ್ ತಂಡದ ಮಾಜಿ ಟಿ20 ನಾಯಕ ಪೊಲಾರ್ಡ್ ಮುಂದಿರುವ ಪ್ರಮುಖ ಸವಾಲು ಟ್ರೋಫಿ ಬರವನ್ನು ನೀಗಿಸುವುದಾಗಿದೆ.
ಪೊಲಾರ್ಡ್ ಹೇಳಿದ್ದೇನು?
ನೇಮಕದ ಕುರಿತು ಪ್ರತಿಕ್ರಿಯಿಸಿರುವ ಪೊಲಾರ್ಡ್, ಮುಂಬೈ ಇಂಡಿಯನ್ಸ್ ತಮ್ಮ ಜೀವನ ಮತ್ತು ವೃತ್ತಿಜೀವನದ ಪ್ರಮುಖ ಭಾಗವಾಗಿದೆ ಎಂದು ಹೇಳಿದ್ದಾರೆ. “ಮುಂಬೈ ಇಂಡಿಯನ್ಸ್ ನನ್ನ ಜೀವನ ಮತ್ತು ವೃತ್ತಿಜೀವನದಲ್ಲಿ ಮಹತ್ವದ ಸ್ಥಾನ ಹೊಂದಿದೆ. ಈ ತಂಡ, ಆಟಗಾರರು ಹಾಗೂ ‘ಪಲ್ಟನ್’ ಅಭಿಮಾನಿಗಳೊಂದಿಗೆ ನಾನು ಹಂಚಿಕೊಂಡಿರುವ ಬಾಂಧವ್ಯ ನನಗೆ ಬಹಳ ಅಮೂಲ್ಯವಾದುದು,” ಎಂದು ಫ್ರಾಂಚೈಸಿ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಂತೆಯೇ “ಆಟಗಾರನಾಗಿ ಈ ಪ್ರಯಾಣವನ್ನು ಅನುಭವಿಸಿದ್ದೇನೆ, ಬಳಿಕ ಕೋಚ್ ಆಗಿಯೂ ಕೆಲಸ ಮಾಡಿದ್ದೇನೆ. ಮುಂಬೈ ಇಂಡಿಯನ್ಸ್ ಏನನ್ನು ಪ್ರತಿನಿಧಿಸುತ್ತದೆ ಮತ್ತು ತಂಡದ ನೀಲಿ-ಚಿನ್ನದ ಜೆರ್ಸಿಯನ್ನು ಪ್ರತಿನಿಧಿಸುವ ಜವಾಬ್ದಾರಿ ಎಷ್ಟು ಮಹತ್ವದ್ದು ಎಂಬುದು ನನಗೆ ತಿಳಿದಿದೆ” ಎಂದು ಅವರು ಹೇಳಿದ್ದಾರೆ.
ಮುಂಬೈ ಪರ 189 ಐಪಿಎಲ್ ಪಂದ್ಯಗಳನ್ನಾಡಿರುವ ಪೊಲಾರ್ಡ್
39 ವರ್ಷದ ಪೊಲಾರ್ಡ್ ವಿಶ್ವದ ವಿವಿಧ ಫ್ರಾಂಚೈಸಿ ಟಿ20 ಲೀಗ್ಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಐಪಿಎಲ್ನಲ್ಲಿ 2009-10ರಿಂದ 2022ರ ಆವೃತ್ತಿಯವರೆಗೆ ಅವರು ಮುಂಬೈ ಇಂಡಿಯನ್ಸ್ ತಂಡವನ್ನೇ ಪ್ರತಿನಿಧಿಸಿದ್ದರು. ಈ ವರ್ಷ ಮೇಜರ್ ಲೀಗ್ ಕ್ರಿಕೆಟ್ನಲ್ಲೂ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ತಂಡದ ಪರ ಆಡಿದ್ದಾರೆ.
ಮುಂಬೈ ಇಂಡಿಯನ್ಸ್ ಪರ ಆಡಿದ 189 ಐಪಿಎಲ್ ಪಂದ್ಯಗಳಲ್ಲಿ ಪೊಲಾರ್ಡ್ 3,412 ರನ್ ಗಳಿಸಿದ್ದಾರೆ. 28.67ರ ಸರಾಸರಿ ಮತ್ತು 147.32ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿರುವ ಅವರು, 16 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಬೌಲಿಂಗ್ನಲ್ಲೂ ಮಿಂಚಿರುವ ಪೊಲಾರ್ಡ್ 69 ವಿಕೆಟ್ಗಳನ್ನು ಪಡೆದಿದ್ದು, 44 ರನ್ಗಳಿಗೆ 4 ವಿಕೆಟ್ ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.