ವೈಷ್ಣವಿ ಶರ್ಮಾ ಮತ್ತು ದೀಪ್ತಿ ಅವರ ಅದ್ಭುತ ಬೌಲಿಂಗ್, ಹರ್ಮನ್ಪ್ರೀತ್ ಕೌರ್ ಮತ್ತು ದೀಪ್ತಿ ಶರ್ಮಾ ಅವರ ಶತಕಗಳ ನೆರವಿನಿಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಮೂರು ಪಂದ್ಯಗಳ ODI ಸರಣಿಯ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆಯನ್ನು 121 ರನ್ಗಳಿಂದ ಸೋಲಿಸಿ, ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿದ್ದು 50 ಓವರ್ಗಳಲ್ಲಿ 6 ವಿಕೆಟ್ಗಳಿಗೆ 328 ರನ್ಗಳನ್ನು ಪೇರಿಸಿದ್ದು ಎದುರಾಳಿ ತಂಡಕ್ಕೆ 329 ರನ್ಗಳ ಗುರಿಯನ್ನು ನೀಡಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಜಿಂಬಾಬ್ವೆ 48.5 ಓವರ್ಗಳಲ್ಲಿ 207 ರನ್ಗಳನ್ನು ಗಳಿಸಿದ್ದು 121 ರನ್ ಗಳಿಂದ ಸೋಲು ಕಂಡಿದೆ. ಮೂರು ಪಂದ್ಯಗಳ ODI ಸರಣಿಯಲ್ಲಿ ಭಾರತದ ಸತತ ಎರಡನೇ ಗೆಲುವು ಸಾಧಿಸಿದೆ.
ಭಾರತ ಪರ ವೈಷ್ಣವಿ ಶರ್ಮಾ ಅದ್ಭುತ ಬೌಲಿಂಗ್ ಮಾಡಿದರು. 10 ಓವರ್ಗಳಲ್ಲಿ 39 ರನ್ಗಳಿಗೆ 4 ವಿಕೆಟ್ ಪಡೆದರು, ದೀಪ್ತಿ ಶರ್ಮಾ 9 ಓವರ್ಗಳಲ್ಲಿ 32 ರನ್ಗಳಿಗೆ 3 ವಿಕೆಟ್ ಪಡೆದರು. ಸಯಾಲಿ ಸತ್ಘರೆ, ಶ್ರೀ ಚರಣಿ ಮತ್ತು ಜಿಂಟಿಮಣಿ ಕಲಿತಾ ತಲಾ ಒಂದು ವಿಕೆಟ್ ಪಡೆದರು. ಜಿಂಬಾಬ್ವೆ ಪರ ಚಿಪೋ ಮುಗೇರಿ-ತಿರಿಪಾನೊ 46 ರನ್ ಗಳಿಸಿದರೆ, ಆರಂಭಿಕ ಆಟಗಾರ್ತಿ ಮಾಡೆಸ್ಟರ್ ಮುಪಚಿಕ್ವಾ 49 ರನ್ ಗಳಿಸಿದರು. ಬೆಲ್ವೆಡ್ ಬಿಜಾ 34 ರನ್ ಗಳಿಸಿದರೆ, ನಾಯಕಿ ಜೋಸೆಫೀನ್ ಎನ್ಕೊಮೊ 20 ರನ್ ಗಳಿಸಿ ಶರಣಾದರು.
ಭಾರತ ಪರ ಮಾಜಿ ನಾಯಕಿ ಹರ್ಮನ್ಪ್ರೀತ್ ಕೌರ್ 15 ಬೌಂಡರಿಗಳೊಂದಿಗೆ 126 ರನ್ ಗಳಿಸಿ ಗರಿಷ್ಠ ಸ್ಕೋರರ್ ಆದರು. ಆರಂಭಿಕ ಆಟಗಾರ್ತಿ ಮತ್ತು ನಾಯಕಿ ಸ್ಮೃತಿ ಮಂಧಾನ ಶೂನ್ಯಕ್ಕೆ ಔಟಾದರೂ, ಪ್ರತೀಕಾ ರಾವಲ್ 61 ರನ್ ಗಳಿಸಿ 2 ಸಿಕ್ಸರ್ಗಳು ಮತ್ತು 4 ಬೌಂಡರಿಗಳನ್ನು ಗಳಿಸಿದರು. ಈ ಪಂದ್ಯದಲ್ಲಿ ಶಫಾಲಿ ವರ್ಮಾ ಅವರ ಬ್ಯಾಟ್ ವಿಫಲವಾಗಿದ್ದು ಅವರು 8 ಎಸೆತಗಳಲ್ಲಿ 8 ರನ್ ಗಳಿಸಿ ಪೆವಿಲಿಯನ್ಗೆ ಸೇರಿದರು.
ಈ ಪಂದ್ಯದಲ್ಲಿ, ಪ್ರತಿಕಾ ರಾವಲ್ ಮತ್ತು ಹರ್ಮನ್ಪ್ರೀತ್ ಕೌರ್ ಮೂರನೇ ವಿಕೆಟ್ಗೆ 118 ಎಸೆತಗಳಲ್ಲಿ 124 ರನ್ಗಳ ಜೊತೆಯಾಟ ನಡೆಸಿದರು. ಆದರೆ ಹರ್ಮನ್ಪ್ರೀತ್ ಕೌರ್ ಮತ್ತು ದೀಪ್ತಿ ಶರ್ಮಾ ಐದನೇ ವಿಕೆಟ್ಗೆ 137 ಎಸೆತಗಳಲ್ಲಿ 153 ರನ್ಗಳನ್ನು ಸೇರಿಸಿದರು. ತೇಜಲ್ ಹಸಬ್ನಿಸ್ 3 ರನ್ ಗಳಿಸಿದರೆ, ರಿಚಾ ಘೋಷ್ 7 ರನ್ ಗಳಿಸಿದರು. ದೀಪ್ತಿ ಶರ್ಮಾ 83 ಎಸೆತಗಳಲ್ಲಿ ಶತಕ ಪೂರೈಸಿದರು, ಇದು ಅವರ ಏಕದಿನ ಪಂದ್ಯಗಳಲ್ಲಿ ಎರಡನೇ ಶತಕವಾಗಿದೆ. ದೀಪ್ತಿ ಶರ್ಮಾ 86 ಎಸೆತಗಳಲ್ಲಿ 15 ಬೌಂಡರಿಗಳ ಸಹಾಯದಿಂದ ಅಜೇಯ 106 ರನ್ ಗಳಿಸಿದರು. ಜಿಂಬಾಬ್ವೆ ಪರ ನೋಮ್ವೆಲೊ ಸಿಬಂದಾ ಗರಿಷ್ಠ 2 ವಿಕೆಟ್ಗಳನ್ನು ಪಡೆದರು.