ವೆಲ್ಲಿಂಗ್ಟನ್: ಮೂರನೇ ಟಿ20 ಪಂದ್ಯದಲ್ಲಿ ಭಾರತ 199 ರನ್‌ಗಳ ಗುರಿಯನ್ನು ಕೇವಲ 13.2 ಓವರ್‌ಗಳಲ್ಲಿ ಬೆನ್ನಟ್ಟಿದ ರೀತಿಯನ್ನು ಕಂಡು ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವೆಲ್ಟಿಂಗ್ಟನ್ನಲ್ಲಿ ಇಂದು ನಡೆದ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಭಾರತಕ್ಕೆ ಗೆಲ್ಲಲು 199 ರನ್ ಗಳ ಬೃಹತ್ ಗುರಿ ನೀಡಿದರು. ಈ ಮೊತ್ತವನ್ನು ಬೆನ್ನು ಹತ್ತಿದ ಭಾರತಕ್ಕೆ ಆರಂಭಿಕರಾದ ಅಭಿಷೇಕ್ ಶರ್ಮಾ (118) ಮತ್ತು ವೈಭವ್ ಸೂರ್ಯವಂಶಿ (45) ಸ್ಫೋಟಕ ಆರಂಭ ನೀಡಿದರು.
ಮೊದಲ ವಿಕೆಟ್`ಗೆ ಈ ಜೋಡಿ 133 ರನ್ ಗಳ ಶತಕದ ಜೊತೆಯಾಟವಾಡಿತು. ವೈಭವ್ ಸೂರ್ಯವಂಶಿ ಕೇವಲ 19 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 45 ರನ್ ಗಳಿಸಿ ಔಟಾದರು.
ಮತ್ತೊಂದು ಬದಿಯಲ್ಲಿ ತಮ್ಮ ಸ್ಫೋಟಕ ಇನ್ನಿಂಗ್ಸ್ ಮುಂದುವರೆಸಿದ ಅಭಿಷೇಕ್ ಶರ್ಮಾ 38 ಎಸೆತಗಳಲ್ಲಿ 11 ಸಿಕ್ಸರ್ ಮತ್ತು 9 ಬೌಂಡರಿಗಳ ಸಹಿತ 113 ರನ್ ಚಚ್ಚಿ ಭಾರತದ ಗೆಲುವು ಖಚಿತ ಪಡಿಸಿದರು.
ಬಳಿಕ ಭಾರತ ತಂಡ ಕೇವಲ 13.2 ಓವರ್ ನಲ್ಲೇ 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ 6ವಿಕೆಟ್`ಗಳ ಭರ್ಜರಿ ಜಯ ಸಾಧಿಸಿತು.
ದಾಖಲೆಯ ಪವರ್ ಪ್ಲೇ
ಅಭಿಷೇಕ್ ಶರ್ಮಾ ಕೇವಲ 38 ಎಸೆತಗಳಲ್ಲಿ ಅಜೇಯ 113 ರನ್ ಸಿಡಿಸಿದರೆ, ವೈಭವ್ ಸೂರ್ಯವಂಶಿ 19 ಎಸೆತಗಳಲ್ಲಿ 45 ರನ್ ಗಳಿಸಿದರು. ಇವರಿಬ್ಬರ ಸ್ಫೋಟಕ ಆಟದ ನೆರವಿನಿಂದ ಭಾರತ 13.2 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆರಂಭಿಕ ಜೋಡಿ ಮೊದಲ ವಿಕೆಟ್‌ಗೆ 133 ರನ್‌ಗಳ ಜೊತೆಯಾಟವಾಡಿ ಪಂದ್ಯದ ದಿಕ್ಕನ್ನೇ ಬದಲಿಸಿತು. ಪವರ್‌ಪ್ಲೇನಲ್ಲೇ ಭಾರತ 118 ರನ್ ಗಳಿಸಿದ್ದು, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆಯಾಗಿದೆ.
ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಂಡವೊಂದು 100 ರನ್ ತಲುಪಿದ ಎರಡನೇ ಅತಿ ವೇಗದ ಸಾಧನೆ ಇದಾಗಿದೆ. ಈ ವರ್ಷದ ಆರಂಭದಲ್ಲಿ ಮೊಜಾಂಬಿಕ್ ವಿರುದ್ಧ ಎಸ್ವಾಟಿನಿ ತಂಡ 4.5 ಓವರ್‌ಗಳಲ್ಲಿ 100 ರನ್ ಗಳಿಸಿದ್ದು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು, ಪವರ್‌ಪ್ಲೇನಲ್ಲಿ ಭಾರತ ಗಳಿಸಿದ 118 ರನ್ ವಿಶ್ವದಾಖಲೆಯಾಗಿದೆ. 2021ರಲ್ಲಿ ಸೆರ್ಬಿಯಾ ವಿರುದ್ಧ ರೊಮೇನಿಯಾ ತಂಡ 5.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 116 ರನ್ ಗಳಿಸಿತ್ತು. ಆ ದಾಖಲೆಯನ್ನು ಭಾರತ ಹಿಂದಿಕ್ಕಿದೆ.
ಇವರ ತಡೆಯಲು ಹೊಸ ತಂತ್ರವೇ ಬೇಕು
ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್‌ಗೆ ನ್ಯೂಜಿಲೆಂಡ್ ತಂಡ ಅಕ್ಷರಶಃ ತತ್ತರಿಸಿದೆ. ಇದೇ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಮಿಚೆಲ್ ಸ್ಯಾಂಟ್ನರ್, ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಇಬ್ಬರೂ ಲಯ ಕಂಡುಕೊಂಡರೆ ಅವರನ್ನು ತಡೆಯುವುದು ತುಂಬಾ ಕಷ್ಟ ಎಂದು ಒಪ್ಪಿಕೊಂಡರು.
'ಅವರನ್ನು ತಡೆಯುವುದು ತುಂಬಾ ಕಷ್ಟ'
ಪಂದ್ಯದ ಬಳಿಕ ಮಾತನಾಡಿದ ಸ್ಯಾಂಟ್ನರ್, ಅಭಿಷೇಕ್ ಮತ್ತು ವೈಭವ್ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. “ಅವರು ಲಯಕ್ಕೆ ಬಂದಾಗ ಅವರನ್ನು ತಡೆಯುವುದು ತುಂಬಾ ಕಷ್ಟ. ಇದನ್ನು ನಾವು ಹಿಂದೆಯೂ ನೋಡಿದ್ದೇವೆ. ಐಪಿಎಲ್‌ನಲ್ಲೂ ಅವರ ಆಟವನ್ನು ಕಂಡಿದ್ದೇವೆ. ಇಂದು ನ್ಯೂಜಿಲೆಂಡ್‌ನಲ್ಲೂ ಅದನ್ನು ಕಣ್ಣಾರೆ ನೋಡಿದ್ದೇವೆ” ಎಂದು ಸ್ಯಾಂಟ್ನರ್ ಹೇಳಿದರು.
ಭಾರತದ ಬೌಲರ್‌ಗಳು ಮೊದಲ ಇನ್ನಿಂಗ್ಸ್‌ನ ಕೊನೆಯ ಓವರ್‌ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದನ್ನೂ ಅವರು ಮೆಚ್ಚಿಕೊಂಡರು. ನ್ಯೂಜಿಲೆಂಡ್ ತಂಡ 200 ರನ್‌ಗಳ ಗಡಿ ತಲುಪುವ ನಿರೀಕ್ಷೆಯಲ್ಲಿತ್ತು. ಆದರೆ, ಭಾರತದ ಬೌಲರ್‌ಗಳು ಯಾರ್ಕರ್‌ಗಳನ್ನು ಪರಿಣಾಮಕಾರಿಯಾಗಿ ಎಸೆದು ರನ್ ಗಳಿಕೆಗೆ ಕಡಿವಾಣ ಹಾಕಿದರು ಎಂದು ಸ್ಯಾಂಟ್ನರ್ ತಿಳಿಸಿದರು.
ಸರಣಿಯ ಮುಂದಿನ ಪಂದ್ಯದಲ್ಲಿ ಈಡನ್ ಪಾರ್ಕ್‌ನಲ್ಲಿ ಆಡಲಿರುವ ನ್ಯೂಜಿಲೆಂಡ್, ಭಾರತದ ಬ್ಯಾಟಿಂಗ್ ಅಬ್ಬರವನ್ನು ನಿಯಂತ್ರಿಸಲು ಹೊಸ ತಂತ್ರ ರೂಪಿಸಬೇಕಿದೆ. ಆ ಮೈದಾನದಲ್ಲಿ ಬೌಂಡರಿಗಳ ಅಂತರ ಕಡಿಮೆ ಇರುವ ಸಾಧ್ಯತೆಯಿರುವುದರಿಂದ ಎದುರಾಳಿ ಬ್ಯಾಟರ್‌ಗಳನ್ನು ತಡೆಯಲು ವಿಭಿನ್ನ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ ಎಂದು ಸ್ಯಾಂಟ್ನರ್ ಅಭಿಪ್ರಾಯಪಟ್ಟರು.
ಅಭಿಷೇಕ್ ಮತ್ತು ವೈಭವ್ ಬ್ಯಾಟಿಂಗ್‌ಗೆ ಇಳಿದು ಅಬ್ಬರಿಸಲು ಶುರು ಮಾಡಿದರೆ ಅವರನ್ನು ತಡೆಯುವುದು ತುಂಬಾ ಕಷ್ಟ. ಐಪಿಎಲ್‌ನಲ್ಲೂ ಅವರ ಆಟವನ್ನು ನೋಡಿದ್ದೇವೆ. ಈಗ ನ್ಯೂಜಿಲೆಂಡ್‌ನಲ್ಲೂ ಅವರ ಅಬ್ಬರವನ್ನು ಕಣ್ಣಾರೆ ಕಂಡಿದ್ದೇವೆ ಎಂದು ಹೇಳಿದರು.
ಇಬ್ಬನಿ ಕಾಟ; ಸ್ಪಿನ್ನರ್‌ಗಳಿಗೂ ಸವಾಲು
ಪಂದ್ಯದ ವೇಳೆ ಇಬ್ಬನಿ ಕಾಣಿಸಿಕೊಂಡಿದ್ದರಿಂದ ಬೌಲಿಂಗ್ ಮಾಡುವುದು ಕಷ್ಟವಾಯಿತು. ಪವರ್‌ಪ್ಲೇ ಈ ಮಾದರಿಯ ಕ್ರಿಕೆಟ್‌ನಲ್ಲಿ ಅತ್ಯಂತ ನಿರ್ಣಾಯಕವಾಗಿದ್ದು, ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಭಾರತದ ಬ್ಯಾಟರ್‌ಗಳು ತೋರಿಸಿಕೊಟ್ಟಿದ್ದಾರೆ ಎಂದು ಸ್ಯಾಂಟ್ನರ್ ಹೇಳಿದ್ದಾರೆ.
ಎರಡನೇ ಟಿ20 ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದು ಭಾರತದ ಗೆಲುವಿಗೆ ಸವಾಲೊಡ್ಡಿದ್ದ ಸ್ಯಾಂಟ್ನರ್ ಮೂರನೇ ಪಂದ್ಯದಲ್ಲಿ ಒಂಬತ್ತನೇ ಓವರ್‌ನಲ್ಲಿ ಬೌಲಿಂಗ್ ಆರಂಭಿಸಿದ್ದರು.
ಈ ನಿರ್ಧಾರದ ಬಗ್ಗೆ ಮಾತನಾಡಿದ ಅವರು, ಮೊದಲ ಇನ್ನಿಂಗ್ಸ್‌ನಲ್ಲಿ ಅಕ್ಷರ್ ಪಟೇಲ್ ಬೌಲಿಂಗ್ ಗಮನಿಸಿದಾಗ ಪಿಚ್‌ನಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಕಂಡುಬರಲಿಲ್ಲ ಎಂದರು. ವೇಗದ ಬೌಲರ್‌ಗಳಿಗೆ ಸ್ವಲ್ಪ ನೆರವು ದೊರೆಯುತ್ತಿದ್ದುದರಿಂದ ಬೌಲಿಂಗ್ ತಂತ್ರವನ್ನು ಬದಲಿಸಬೇಕಾಯಿತು ಎಂದು ವಿವರಿಸಿದರು.
ನ್ಯೂಜಿಲೆಂಡ್ ಬ್ಯಾಟರ್‌ಗಳ ಪ್ರದರ್ಶನಕ್ಕೆ ಸಮಾಧಾನ
ಸರಣಿಯಲ್ಲಿ ನ್ಯೂಜಿಲೆಂಡ್ ಪರ ವಿವಿಧ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡುತ್ತಿರುವುದು ಸಕಾರಾತ್ಮಕ ಅಂಶ ಎಂದು ಸ್ಯಾಂಟ್ನರ್ ಹೇಳಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಗ್ಲೆನ್ ಫಿಲಿಪ್ಸ್ ಕ್ರಮವಾಗಿ ಅಜೇಯ 82 ಮತ್ತು 70 ರನ್ ಗಳಿಸಿದ್ದರು. ಮೂರನೇ ಪಂದ್ಯದಲ್ಲಿ ಡ್ಯಾರಿಲ್ ಮಿಚೆಲ್ ಅಜೇಯ 89 ರನ್ ಸಿಡಿಸಿ ತಮ್ಮ ವೃತ್ತಿಜೀವನದ ಶ್ರೇಷ್ಠ ಟಿ20 ಅಂತಾರಾಷ್ಟ್ರೀಯ ಸ್ಕೋರ್ ದಾಖಲಿಸಿದರು.
“ಬ್ಯಾಟರ್‌ಗಳು ಉತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುತ್ತಿದ್ದಾರೆ. ಬೇರೆ ಬೇರೆ ಆಟಗಾರರು ತಂಡದ ಪರ ಮುಂದೆ ಬರುತ್ತಿರುವುದು ಒಳ್ಳೆಯ ಸಂಗತಿ. ಅವರಲ್ಲಿ ಆತ್ಮವಿಶ್ವಾಸವೂ ಹೆಚ್ಚಾಗಿದೆ. ಆದರೆ, ಭಾರತದ ವಿರುದ್ಧ ರನ್ ಗಳಿಸಿದರೂ ಅದನ್ನು ರಕ್ಷಿಸಿಕೊಳ್ಳುವುದು ಎಷ್ಟು ಕಷ್ಟ ಎಂಬುದು ನಮಗೆ ಗೊತ್ತಾಗಿದೆ” ಎಂದು ಸ್ಯಾಂಟ್ನರ್ ಹೇಳಿದರು.