ರಾಬಿನ್ ಉತ್ತಪ್ಪ 
ಕ್ರಿಕೆಟ್

ಹೊಸ ಕೋಚಿಂಗ್ ತಂಡ ಪ್ರಕಟಿಸಿದ MI: ಬ್ಯಾಟಿಂಗ್ ಕೋಚ್ ಆಗಿ ಕೀರನ್ ಪೊಲಾರ್ಡ್ ಜೊತೆ ಸೇರಿದ ರಾಬಿನ್ ಉತ್ತಪ್ಪ!

2007ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ಉತ್ತಪ್ಪ, ಭಾರತೀಯ ಕ್ರಿಕೆಟ್ ಮತ್ತು ಫ್ರಾಂಚೈಸಿ ಕ್ರಿಕೆಟ್‌ನಲ್ಲಿನ ತಮ್ಮ ಸುದೀರ್ಘ ಹಾಗೂ ಯಶಸ್ವಿ ವೃತ್ತಿಜೀವನದ ಮೂಲಕ ಅಪಾರ ಅನುಭವ ಹೊಂದಿದ್ದಾರೆ.

ಮುಂಬೈ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2027ರ ಸೀಸನ್‌ಗಾಗಿ ರಾಬಿನ್ ಉತ್ತಪ್ಪ ಅವರನ್ನು ಬ್ಯಾಟಿಂಗ್ ಕೋಚ್ ಆಗಿ, ಮಿಚೆಲ್ ಮೆಕ್ಲೆನಘನ್ ಅವರು ಬೌಲಿಂಗ್ ಕೋಚ್ ಆಗಿ, ಫೀಲ್ಡಿಂಗ್ ಕೋಚ್ ಆಗಿ ಟಿ. ದಿಲೀಪ್ ಮತ್ತು ಧವಳ್ ಕುಲಕರ್ಣಿ ಅವರನ್ನು ಡೆವಲಪ್‌ಮೆಂಟ್ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿರುವುದಾಗಿ ಮುಂಬೈ ಇಂಡಿಯನ್ಸ್ (MI) ಶುಕ್ರವಾರ ಘೋಷಿಸಿದೆ.

ಪತ್ರಿಕಾ ಪ್ರಕಟಣೆ ಪ್ರಕಾರ, ಇವರು ಮುಖ್ಯ ಕೋಚ್ ಕೀರನ್ ಪೊಲಾರ್ಡ್ ಅವರೊಂದಿಗೆ ಸೇರಿಕೊಂಡು, ಹೊಸ ಕೋಚಿಂಗ್ ತಂಡದ ಭಾಗವಾಗಲಿದ್ದಾರೆ.

ಉತ್ತಪ್ಪ, ಮೆಕ್ಲೆನಘನ್ ಮತ್ತು ಕುಲಕರ್ಣಿ ಅವರು ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡವನ್ನು ಆಟಗಾರರಾಗಿ ಪ್ರತಿನಿಧಿಸಿದ್ದರು. ಇದೀಗ ಅವರು ಮತ್ತೆ ತಮ್ಮ ಪರಿಚಿತ ತಂಡಕ್ಕೆ ಮರಳಿದಂತಾಗಿದೆ. ಪೊಲಾರ್ಡ್ ಅವರಿಗೆ ಫ್ರಾಂಚೈಸಿಯೊಂದಿಗೆ ಹದಿನಾರು ವರ್ಷಗಳ ಸುದೀರ್ಘ ಒಡನಾಟವಿದೆ.

2007ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ಉತ್ತಪ್ಪ, ಭಾರತೀಯ ಕ್ರಿಕೆಟ್ ಮತ್ತು ಫ್ರಾಂಚೈಸಿ ಕ್ರಿಕೆಟ್‌ನಲ್ಲಿನ ತಮ್ಮ ಸುದೀರ್ಘ ಹಾಗೂ ಯಶಸ್ವಿ ವೃತ್ತಿಜೀವನದ ಮೂಲಕ ಅಪಾರ ಅನುಭವ ಹೊಂದಿದ್ದಾರೆ. 2008ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ಅವರು, ಇದೀಗ ಆಧುನಿಕ ಟಿ20 ಆಟದ ಬಗ್ಗೆ ಆಳವಾದ ತಿಳುವಳಿಕೆಯೊಂದಿಗೆ ಮತ್ತೆ ತಂಡಕ್ಕೆ ಮರಳಿದ್ದಾರೆ. ತಂಡದ ಬ್ಯಾಟಿಂಗ್ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು, ತಂತ್ರಗಾರಿಕೆಗೆ ಸಂಬಂಧಿಸಿದ ನಿರ್ಧಾರಗಳನ್ನು ಬಲಪಡಿಸುವುದು ಹಾಗೂ ಈ ಮಾದರಿಯ ಬದಲಾಗುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ಆಟಗಾರರು ಹೊಂದಿಕೊಳ್ಳುವಂತೆ ಸಹಾಯ ಮಾಡುವುದರ ಕಡೆಗೆ ಅವರು ಗಮನಹರಿಸಲಿದ್ದಾರೆ.

ಮುಂಬೈ ಇಂಡಿಯನ್ಸ್‌ನೊಂದಿಗೆ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಮೆಕ್ಲೆನಘನ್, 2015 ರಿಂದ 2020 ರವರೆಗೆ ಈ ಫ್ರಾಂಚೈಸಿಯನ್ನು ಪ್ರತಿನಿಧಿಸಿದ್ದರು. 2015, 2017, 2019 ಮತ್ತು 2020 ರಲ್ಲಿ ತಂಡವು ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಸ್ಪರ್ಧಾತ್ಮಕ ಮನೋಭಾವ ಮತ್ತು ಆಕ್ರಮಣಕಾರಿ ಶೈಲಿಗೆ ಹೆಸರುವಾಸಿಯಾದ ಅವರು, ಮೌಲ್ಯಯುತ ಅಂತರರಾಷ್ಟ್ರೀಯ ಅನುಭವವನ್ನು ಹಾಗೂ ಟಿ20 ಬೌಲಿಂಗ್ ಕುರಿತು ಆಳವಾದ ತಿಳುವಳಿಕೆ ಹೊಂದಿದ್ದಾರೆ.

ಭಾರತ ಪುರುಷರ ತಂಡದೊಂದಿಗೆ ಯಶಸ್ವಿ ಅವಧಿಯನ್ನು ಕಳೆದ ನಂತರ ದಿಲೀಪ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಭಾರತ ತಂಡವು 2024 ಮತ್ತು 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗಳು ಹಾಗೂ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಾಗ, ಅವರು ಆ ತಂಡದ ಕೋಚಿಂಗ್ ವಿಭಾಗದ ಭಾಗವಾಗಿದ್ದರು. ಅನುಭವಿ ಮತ್ತು ಅತ್ಯಂತ ಗೌರವಾನ್ವಿತ ಫೀಲ್ಡಿಂಗ್ ಕೋಚ್ ಆಗಿರುವ ಅವರು, ಮೈದಾನದಲ್ಲಿ ಕ್ರೀಡಾ ಸಾಮರ್ಥ್ಯ, ಸಿದ್ಧತೆ, ಸ್ಥಿರತೆ ಮತ್ತು ಶ್ರೇಷ್ಠತೆಗೆ ಹೆಚ್ಚಿನ ಒತ್ತು ನೀಡುತ್ತಾರೆ.

ಮುಂಬೈ ಇಂಡಿಯನ್ಸ್ ಪರ ಎರಡು ಬಾರಿ (2013 ಮತ್ತು 2020) ಐಪಿಎಲ್ ಚಾಂಪಿಯನ್ ಆಗಿರುವ ಧವಳ್ ಕುಲಕರ್ಣಿ, ಈ ಹಿಂದೆ ಎರಡು ಅವಧಿಗಳಲ್ಲಿ (2008-2013 ಮತ್ತು 2020-21) ತಂಡವನ್ನು ಪ್ರತಿನಿಧಿಸಿದ ನಂತರ, ಇದೀಗ ಮತ್ತೆ ಮುಂಬೈ ಇಂಡಿಯನ್ಸ್‌ಗೆ ಮರಳಿದ್ದಾರೆ. ಮುಂಬೈ ಕ್ರಿಕೆಟ್ ವಲಯದಲ್ಲಿ ಸುಪರಿಚಿತರಾಗಿರುವ ಇವರು, ಅಪಾರ ಅನುಭವ, ಭಾರತೀಯ ಆಟದ ಪರಿಸ್ಥಿತಿಗಳ ಬಗ್ಗೆ ಆಳವಾದ ತಿಳುವಳಿಕೆ ಹಾಗೂ ಮುಂಬೈ ಇಂಡಿಯನ್ಸ್‌ನೊಂದಿಗೆ ಬಲವಾದ ಬಾಂಧವ್ಯ ಹೊಂದಿದ್ದಾರೆ.

ಆವೃತ್ತಿಯ ಅವಧಿಯಲ್ಲಿ ಕೋಚಿಂಗ್ ಸಿಬ್ಬಂದಿಯೊಂದಿಗೆ ಕೆಲಸ ಮಾಡುವ ಅವರು, ತಂಡದ ಬೌಲಿಂಗ್ ಪ್ರತಿಭೆಗಳನ್ನು, ವಿಶೇಷವಾಗಿ ಯುವ ಭಾರತೀಯ ಬೌಲರ್‌ಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ವರ್ಷವಿಡೀ ಮುಂದುವರಿಯಲಿರುವ ಅವರ ಈ ಜವಾಬ್ದಾರಿಯು, ಮುಂಬೈ ಇಂಡಿಯನ್ಸ್‌ನ ಕಾರ್ಯಕ್ಷಮತೆ ಕಾರ್ಯಕ್ರಮದಲ್ಲಿ ನಿರಂತರತೆಯನ್ನು ಖಚಿತಪಡಿಸುತ್ತದೆ. ಅಲ್ಲದೆ, ಇದು ಆಟಗಾರರ ಅಭಿವೃದ್ಧಿಗೆ ಹಾಗೂ ತಂಡದ talent pool ಬಲಪಡಿಸಲು ನಿರಂತರ ಬೆಂಬಲ ಒದಗಿಸುತ್ತದೆ.

ಪೊಲಾರ್ಡ್ ನೇತೃತ್ವದಲ್ಲಿ, ಕೋಚಿಂಗ್ ತಂಡವು ಆಟಗಾರರ ಕೌಶಲ್ಯಾಭಿವೃದ್ಧಿಯನ್ನು ಬಲಪಡಿಸಲು, ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪ್ರೇರೇಪಿಸುವ ವಾತಾವರಣವನ್ನು ನಿರ್ಮಿಸಲು ಮತ್ತು ಮುಂಬರುವ ಸವಾಲುಗಳಿಗೆ ತಂಡವನ್ನು ಸಿದ್ಧಪಡಿಸಲು ಒಟ್ಟಾಗಿ ಶ್ರಮಿಸಲಿದೆ. ಐಪಿಎಲ್ 2027ರತ್ತ ಗಮನಹರಿಸಿರುವ ಮುಂಬೈ ಇಂಡಿಯನ್ಸ್, ಈ ನೇಮಕಾತಿಗಳ ಮೂಲಕ ಪ್ರತಿಭೆಗಳನ್ನು ಪೋಷಿಸಲು, ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳಲು ಮತ್ತು ಅತ್ಯುನ್ನತ ಮಟ್ಟದಲ್ಲಿ ಸ್ಪರ್ಧಿಸಬಲ್ಲ ತಂಡವನ್ನು ರೂಪಿಸಲು ತನಗಿರುವ ಬದ್ಧತೆಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಸಾರ್ವಜನಿಕ ದೋಷಾರೋಪಣೆ ದಿಢೀರ್ ಮುಂದೂಡಿದ INDIA!

ನ್ಯಾಯಾಂಗ ನಿಂದನೆ ಆರೋಪ: CJP ನಾಯಕ ಸೌರವ್ ದಾಸ್ ಹಿನ್ನೆಲೆ ಕುರಿತು ತನಿಖೆ, passport-Aadhaar card ರದ್ದು ಕೋರಿ PIL; ಕೇಂದ್ರ ಸರ್ಕಾರಕ್ಕೆ Madras ಹೈಕೋರ್ಟ್ ನೋಟಿಸ್..!

ಭೂತಾನ್‌ನಲ್ಲಿ ಹಿಮನದಿ ಸ್ಫೋಟ: ಭಾರತದ ಗಡಿ ರಾಜ್ಯಗಳಲ್ಲಿ ದಿಢೀರ್ ಪ್ರವಾಹ ಭೀತಿ, ಬಂಗಾಳ-ಅಸ್ಸಾಂನಲ್ಲಿ ಹೈ ಅಲರ್ಟ್ ಘೋಷಣೆ

ನಟ ಧನ್ವೀರ್‌ಗೆ ಹೆಚ್ಚಿದ ಸಂಕಷ್ಟ: ಮೂರು ಠಾಣೆಗಳಲ್ಲಿ ಎಫ್‌ಐಆರ್ ದಾಖಲು, ವಿಚಾರಣೆಗೆ ಹಾಜರಾಗಲು ಪೊಲೀಸರ ನೋಟಿಸ್

ಅಮೆರಿಕದ ನಾರ್ತ್ ಡಕೋಟಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ!