ಆಸ್ಟ್ರೇಲಿಯಾ ವಿರುದ್ಧ ರಿಕಲ್ಟನ್, ಮುಲ್ಡರ್ World Record ಶತಕ! 
ಕ್ರಿಕೆಟ್

37 ವರ್ಷಗಳ ದಾಖಲೆ ಧೂಳೀಪಟ! ಆಸ್ಟ್ರೇಲಿಯಾ ವಿರುದ್ಧ ರಿಕಲ್ಟನ್, ಮುಲ್ಡರ್ World Record ಶತಕ!

ಕೇಪ್ಟೌನ್ ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಫ್ರಿಕಾ ತಂಡಕ್ಕೆ ರಿಯಾನ್ ರಿಕಲ್ಟನ್ ಮತ್ತು ವಿಯಾನ್ ಮುಲ್ಡರ್ ಆಸರೆಯಾಗಿದ್ದಾರೆ.

ಕೇಪ್‌ಟೌನ್: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ರಿಯಾನ್ ರಿಕಲ್ಟನ್ ಮತ್ತು ವಿಯಾನ್ ಮುಲ್ಡರ್ ಅಮೋಘ ಶತಕಗಳನ್ನು ಸಿಡಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಕೇಪ್ಟೌನ್ ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಫ್ರಿಕಾ ತಂಡಕ್ಕೆ ರಿಯಾನ್ ರಿಕಲ್ಟನ್ ಮತ್ತು ವಿಯಾನ್ ಮುಲ್ಡರ್ ಆಸರೆಯಾಗಿದ್ದಾರೆ. ಇವರಿಬ್ಬರ ದಾಖಲೆಯ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್‌ನಲ್ಲಿ 387 ರನ್‌ಗಳಿಗೆ ಆಲೌಟ್ ಆಗಿದ್ದು, ಆಸ್ಟ್ರೇಲಿಯಾ ಗೆಲುವಿಗೆ 288 ರನ್‌ಗಳ ಗುರಿ ನೀಡಿದೆ. ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಕೊನೆಯ ದಿನದಾಟ ತೀವ್ರ ಕುತೂಹಲ ಮೂಡಿಸಿದೆ.

ನಾಲ್ಕನೇ ದಿನದಾಟದಲ್ಲಿ ಸೋಲಿನ ಭೀತಿಯಲ್ಲಿದ್ದ ದಕ್ಷಿಣ ಆಫ್ರಿಕಾಗೆ ರಿಯಾನ್ ರಿಕಲ್ಟನ್ (101) ಮತ್ತು ವಿಯಾನ್ ಮುಲ್ಡರ್ (115) ಆಸರೆಯಾದರು. ಆರನೇ ವಿಕೆಟ್‌ಗೆ ಈ ಜೋಡಿ 154 ರನ್‌ಗಳ ಅಮೂಲ್ಯ ಜೊತೆಯಾಟವಾಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು.

ಬಾಲ್ಯದ ಗೆಳೆಯರ ಐತಿಹಾಸಿಕ ಸಾಧನೆ

ಬಾಲ್ಯದ ಗೆಳೆಯರಾಗಿರುವ ರಿಕಲ್ಟನ್ ಮತ್ತು ಮುಲ್ಡರ್ ಜೋಹಾನ್ಸ್‌ಬರ್ಗ್‌ನ ಸೇಂಟ್ ಸ್ಟಿಥಿಯನ್ಸ್ ಕಾಲೇಜಿನಲ್ಲಿ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಿಗೆ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ರಿಕಲ್ಟನ್ ಮತ್ತು ಮುಲ್ಡರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಆರನೇ ಹಾಗೂ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಶತಕ ಸಿಡಿಸಿದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

37 ವರ್ಷದ ದಾಖಲೆ ಧೂಳಿಪಟ

ಒಟ್ಟಾರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದರ ಎರಡನೇ ಇನಿಂಗ್ಸ್‌ನಲ್ಲಿ ಆರನೇ ಮತ್ತು ಏಳನೇ ಕ್ರಮಾಂಕದ ಬ್ಯಾಟರ್‌ಗಳು ಶತಕ ದಾಖಲಿಸಿದ ನಾಲ್ಕನೇ ನಿದರ್ಶನ ಇದಾಗಿದೆ. ಬರೋಬ್ಬರಿ 37 ವರ್ಷಗಳ ಬಳಿಕ ಈ ಸಾಧನೆ ಪುನರಾವರ್ತನೆಯಾಗಿದೆ.

ಇದಕ್ಕೂ ಮೊದಲು 1989ರಲ್ಲಿ ಆಸ್ಟ್ರೇಲಿಯಾದ ಡೀನ್ ಜೋನ್ಸ್ ಮತ್ತು ಸ್ಟೀವ್ ವಾ ಅವರು ಹೋಬಾರ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಈ ದಾಖಲೆ ಬರೆದಿದ್ದರು. ಈ ದಾಖಲೆಯ ಮೊದಲ ನಿದರ್ಶನ 1937ರಲ್ಲಿ ದಾಖಲಾಗಿತ್ತು. ಆಗ ಆಸ್ಟ್ರೇಲಿಯಾದ ದಿಗ್ಗಜ ಆಟಗಾರರಾದ ಜ್ಯಾಕ್ ಫಿಂಗಲ್ಟನ್ ಮತ್ತು ಡಾನ್ ಬ್ರಾಡ್ಮನ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ್ದರು.

ಭರ್ಜರಿ ಬ್ಯಾಟಿಂಗ್

ರಿಕಲ್ಟನ್ 12 ಬೌಂಡರಿಗಳ ನೆರವಿನಿಂದ ಶತಕ ಪೂರೈಸಿದ ಬಳಿಕ 120ನೇ ಓವರ್‌ನಲ್ಲಿ ಜೋಶ್ ಇಂಗ್ಲಿಸ್ ಅವರಿಂದ ರನೌಟ್ ಆದರು. ಮತ್ತೊಂದೆಡೆ ಮುಲ್ಡರ್ ತಮ್ಮ ಆಕ್ರಮಣಕಾರಿ ಆಟ ಮುಂದುವರಿಸಿ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 115 ರನ್ ಗಳಿಸಿದರು.

ರಿಕಲ್ಟನ್ ವಿಕೆಟ್ ಪತನದ ಬಳಿಕ ದಕ್ಷಿಣ ಆಫ್ರಿಕಾದ ಇನಿಂಗ್ಸ್ ಬೇಗನೆ ಅಂತ್ಯಗೊಳ್ಳುವ ಸಾಧ್ಯತೆ ಇತ್ತು. ಆದರೆ ಮತ್ತೊಂದು ತುದಿಯಲ್ಲಿ ಕಗಿಸೊ ರಬಾಡ ಉತ್ತಮ ಸಾಥ್ ನೀಡಿದ್ದರಿಂದ ಮುಲ್ಡರ್ ತಮ್ಮ ಶತಕ ಪೂರೈಸಲು ಸಾಧ್ಯವಾಯಿತು.

ಅಂತಿಮವಾಗಿ ಪ್ಯಾಟ್ ಕಮಿನ್ಸ್ ಮುಲ್ಡರ್ ಅವರನ್ನು ಔಟ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾದ ಎರಡನೇ ಇನಿಂಗ್ಸ್‌ಗೆ ತೆರೆ ಎಳೆದರು. ದಕ್ಷಿಣ ಆಫ್ರಿಕಾ 134.4 ಓವರ್‌ಗಳಲ್ಲಿ 387 ರನ್‌ಗಳಿಗೆ ಆಲೌಟ್ ಆಯಿತು. ಇದೀಗ ಆಸ್ಟ್ರೇಲಿಯಾ ಅಂತಿಮ ದಿನದಾಟದಲ್ಲಿ ಗೆಲುವಿಗಾಗಿ 288 ರನ್‌ಗಳ ಗುರಿ ಬೆನ್ನಟ್ಟಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಮತಗಳ್ಳತನ’ ಕುರಿತು ಚರ್ಚಿಸಲು ವಿಶೇಷ ಅಧಿವೇಶನಕ್ಕೆ ಬಿಜೆಪಿ ಸಿದ್ಧ, ಆದರೆ ವಿರೋಧ ಪಕ್ಷಗಳಿಗೆ ಆಸಕ್ತಿಯಿಲ್ಲ: ಅಮಿತ್ ಶಾ

ISRO ಮುಡಿಗೆ ಮತ್ತೊಂದು ಗರಿ: GSLV-F18 ರಾಕೆಟ್ ಮೂಲಕ NVS-03 ಉಪಗ್ರಹ ಯಶಸ್ವಿ ಉಡಾವಣೆ..!

Hormuzನಲ್ಲಿ ತೈಲ ಟ್ಯಾಂಕರ್‌ ಮೇಲೆ limpet ಮೈನ್ ದಾಳಿ: ನಾವಿಕರ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ, 27 ಮಂದಿ ಭಾರತೀಯರು ಪ್ರಾಣಾಪಾಯದಿಂದ ಪಾರು..!

ನಂದಿನಿ ಗ್ರಾಹಕರ ಜೇಬಿಗೆ ಕತ್ತರಿ; ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವನ್ನೂ ಪರಿಷ್ಕರಿಸಿದ ಕೆಎಂಎಫ್, ಪ್ರತಿ ಲೀಟರ್‌ಗೆ 14 ರೂ. ಹೆಚ್ಚಳ..!

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಹವಾಮಾನ ಇಲಾಖೆ 'Yellow alert' ನಡುವೆಯೂ ಟೇಕಾಫ್, ನಿರ್ಲಕ್ಷ್ಯಕ್ಕೆ ಆರು ಜೀವಗಳು ಬಲಿ..!