ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಮತ್ತು ಟೀಂ ಇಂಡಿಯಾದ ಉಪನಾಯಕಿ ಸ್ಮೃತಿ ಮಂಧಾನ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಖ್ಯಾತಿಗೆ ಪಾತ್ರವಾಗಿದ್ದು, ಮಿಥಾಲಿ ರಾಜ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇದನ್ನು ತಮಗೆ ನಂಬಲು ಸಾಧ್ಯವಾಗಲಿಲ್ಲ. ಏಕೆಂದರೆ, ಭಾರತದ ದಿಗ್ಗಜ ಬ್ಯಾಟರ್ ಆಗಿರುವ ಮಿಥಾಲಿ ಅವರನ್ನು ಮೀರಿಸುವ ಬಗ್ಗೆ ನಾನು 'ಎಂದಿಗೂ ಊಹಿಸಿರಲಿಲ್ಲ' ಎಂದಿದ್ದಾರೆ.
ಮಂಧಾನಾ ತಮ್ಮ ವೃತ್ತಿಜೀವನದ ಬಹುಭಾಗವನ್ನು ಮಿಥಾಲಿ ಅವರ ನಾಯಕತ್ವದಲ್ಲಿಯೇ ಕಳೆದಿದ್ದಾರೆ ಮತ್ತು ಬೆಳೆಯುವ ಹಂತದಲ್ಲಿ ಭಾರತದ ಮಾಜಿ ನಾಯಕಿಯೇ ಅವರ ಆದರ್ಶವಾಗಿದ್ದರು. ಗುರುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಏಷ್ಯಾಕಪ್ 2026 ಪಂದ್ಯದಲ್ಲಿ ಮಂಧಾನಾ ಅವರು ಮಿಥಾಲಿ ರಾಜ್ ಅವರ 10,868 ಅಂತಾರಾಷ್ಟ್ರೀಯ ರನ್‌ಗಳ ದಾಖಲೆಯನ್ನು ಮುರಿದರು. ಇದೀಗ ಮಂಧಾನಾ ಅವರ ಖಾತೆಯಲ್ಲಿ ಮೂರೂ ಮಾದರಿಗಳಲ್ಲಿ ಒಟ್ಟು 10,880 ರನ್‌ಗಳಿವೆ.
'ಹೌದು, ನಾನು ಬ್ಯಾಟಿಂಗ್ ಮಾಡುತ್ತಿದ್ದಾಗ ಅದು ಯಾವ ದಾಖಲೆ ಎಂದು ನನಗೆ ತಿಳಿದಿರಲಿಲ್ಲ; ಏಕೆಂದರೆ ನಿಖರವಾದ ರನ್‌ಗಳ ಸಂಖ್ಯೆ ಅಥವಾ ಆ ಬಗ್ಗೆ ನನಗೆ ಅರಿವಿರಲಿಲ್ಲ. ಹಿಂದಿರುಗಿ ನೋಡಿದಾಗ, ಇದು ಭಾರತೀಯ ಕ್ರಿಕೆಟ್‌ಗೆ ಅತ್ಯುತ್ತಮ ದಿನಗಳಲ್ಲಿ ಒಂದು ಎಂದು ನಾನು ಹೇಳುತ್ತೇನೆ. ಸಹಜವಾಗಿಯೇ, ಮಿಥಾಲಿ ಒಬ್ಬ ದಿಗ್ಗಜ ಮತ್ತು ಆದರ್ಶಪ್ರಾಯರಾಗಿದ್ದಾರೆ; ಅವರ ಬ್ಯಾಟಿಂಗ್ ಅನ್ನು ನೋಡುತ್ತಲೇ ನಾವೆಲ್ಲರೂ ಬೆಳೆದಿದ್ದೇವೆ. ಆದ್ದರಿಂದ, ರನ್‌ಗಳ ಪಟ್ಟಿಯಲ್ಲಿ ಅವರನ್ನು ಹಿಂದಿಕ್ಕುವ ಬಗ್ಗೆ ನಾನು ಎಂದಿಗೂ ಊಹಿಸಿರಲಿಲ್ಲ. ಆದರೆ ಅಗ್ರ ಎರಡು ಸ್ಥಾನಗಳಲ್ಲಿ ಇಬ್ಬರು ಭಾರತೀಯರೇ ಇರುವುದು ನನಗೆ ಸಂತೋಷ ತಂದಿದೆ' ಎಂದು ಮಂಧಾನಾ ಹೇಳಿದರು.
ಡಂಬುಲ್ಲಾದಲ್ಲಿ ನಡೆದ 2024ರ ಆವೃತ್ತಿಯಲ್ಲಿ ಮಲೇಷ್ಯಾ ವಿರುದ್ಧ ಶ್ರೀಲಂಕಾದ ಚಮಾರಿ ಅಥಾಪತ್ತು ಗಳಿಸಿದ್ದ ಅಜೇಯ 119 ರನ್‌ಗಳ ದಾಖಲೆಯನ್ನು ಮುರಿದು, ಮಹಿಳಾ ಟಿ20 ಏಷ್ಯಾ ಕಪ್‌ನಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ಹೊಸ ದಾಖಲೆಯನ್ನೂ ಅವರು ನಿರ್ಮಿಸಿದರು.
ಸ್ಮೃತಿ ಮಂಧಾನ ಅವರ 124 ರನ್‌ಗಳು 5 ವಿಕೆಟ್ ನಷ್ಟಕ್ಕೆ ಭಾರತ 193 ರನ್ ಕಲೆಹಾಕಲು ನೆರವಾಯಿತು. ಹಾಂಗ್ ಕಾಂಗ್ ತಂಡವು 16.2 ಓವರ್‌ಗಳಲ್ಲಿ ಕೇವಲ 56 ರನ್‌ಗಳಿಗೆ ಆಲೌಟ್ ಆಯಿತು; ಇದರೊಂದಿಗೆ ಭಾರತವು ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಎರಡನೇ ಅತಿದೊಡ್ಡ ರನ್‌ಗಳ ಅಂತರದ ಗೆಲುವನ್ನು ದಾಖಲಿಸಿತು.
ಸ್ಮೃತಿ ಮತ್ತೊಂದು ಪ್ರತಿಷ್ಠಿತ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ; ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ (17 ಶತಕಗಳು) ಅವರನ್ನು ಹಿಂದಿಕ್ಕಿ, ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ (18) ಗಳಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
'ಅಂತಾರಾಷ್ಟ್ರೀಯ ಮಟ್ಟದಲ್ಲಿ ಶತಕಗಳ ದಾಖಲೆಯನ್ನು ಮೀರಿರುವುದು... 18 ಎಂಬುದು ದಾಟಲು ಉತ್ತಮವಾದ ಸಂಖ್ಯೆ, ಮೊದಲಿಗೆ ನಾನು ಇದನ್ನೇ ಹೇಳುತ್ತೇನೆ. ಮಹಿಳಾ ಕ್ರಿಕೆಟ್‌ನ ದಿಗ್ಗಜರಾದ ಮೆಗ್ ಲ್ಯಾನಿಂಗ್ ಮತ್ತು ಮಿಥಾಲಿ ರಾಜ್ - ಇವರಿಬ್ಬರ ಆಟವನ್ನು ನೋಡುತ್ತಲೇ ಬೆಳೆದವಳು ನಾನು. ಬ್ಯಾಟರ್ ಆಗಿ ಅವರಿಂದ ಸಾಕಷ್ಟು ವಿಷಯಗಳನ್ನು ಕಲಿಯಲು ನಾನು ಪ್ರಯತ್ನಿಸಿದ್ದೇನೆ. ಹಾಗಾಗಿ, ಯಾವುದೇ ರೀತಿಯಲ್ಲಾದರೂ ಅವರನ್ನು ಹಿಂದಿಕ್ಕಲು ಸಾಧ್ಯವಾಗಿರುವುದಕ್ಕೆ ನನಗೆ ನಿಜಕ್ಕೂ ಸಂತೋಷವಿದೆ; ಆದರೆ, ಇದೊಂದು ಅಂಕಿಅಂಶವಷ್ಟೇ ಎಂದು ನಾನು ಭಾವಿಸುತ್ತೇನೆ' ಎಂದು ಸ್ಮೃತಿ ಹೇಳಿದರು.
ಎರಡು ದೊಡ್ಡ ಗೆಲುವುಗಳನ್ನು ಸಾಧಿಸಿದ್ದರೂ, ಆರಂಭಿಕ ಎರಡು ಪಂದ್ಯಗಳಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದ್ದಾರೆ. ಆದಾಗ್ಯೂ, ಸ್ಮೃತಿ ಮಂಧಾನ ಅವರು ತಮ್ಮ ತಂಡದ ಬ್ಯಾಟರ್‌ಗಳನ್ನು 'ವಿಶ್ವ ದರ್ಜೆಯ ಬ್ಯಾಟರ್‌ಗಳು' ಎಂದು ಬಣ್ಣಿಸಿ, ಅವರು ಕಠಿಣ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲಿದ್ದಾರೆ ಮತ್ತು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ನಾನದನ್ನು ಹೇಳಲಾರೆ... ಅಲ್ಲಿ ಬ್ಯಾಟಿಂಗ್ ಮಾಡಲು ಪರಿಸ್ಥಿತಿಗಳು ಸುಲಭವಾಗಿದ್ದವು. ಆಟದ ಪರಿಸ್ಥಿತಿ ಸ್ವಲ್ಪ ಸವಾಲಿನಿಂದ ಕೂಡಿರಬಹುದು ಎಂಬುದು ನಮಗೆ ತಿಳಿದಿದೆ; ಆದರೆ ಪತ್ರಿಕಾಗೋಷ್ಠಿಯಲ್ಲಿ ಯಾರೊಬ್ಬರ ಹೆಸರನ್ನು ಪ್ರಸ್ತಾಪಿಸಿ ಅಥವಾ ಆ ರೀತಿಯಾಗಿ ಮಾತನಾಡುವ ವ್ಯಕ್ತಿ ನಾನಲ್ಲ' ಎಂದು ಪಂದ್ಯದ ನಂತರದ ಮಾಧ್ಯಮ ಸಂವಾದದಲ್ಲಿ ಸ್ಮೃತಿ ಹೇಳಿದರು.
'ಆದಾಗ್ಯೂ, ಮಧ್ಯಮ ಕ್ರಮಾಂಕದ ಪ್ರತಿಯೊಬ್ಬ ಬ್ಯಾಟರ್ ಕೂಡ ವಿಶ್ವದರ್ಜೆಯ ಆಟಗಾರ್ತಿಯರೇ ಆಗಿದ್ದಾರೆ ಮತ್ತು ಅವರು ಪರಿಸ್ಥಿತಿಗೆ ಹೊಂದಿಕೊಳ್ಳಬಲ್ಲರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ' ಎಂದ ಅವರು, ದುಬೈನ ಬಿಸಿಲು ಮತ್ತು ಆರ್ದ್ರತೆಯ ವಾತಾವರಣದಲ್ಲಿ ದೀರ್ಘಕಾಲ ಬ್ಯಾಟಿಂಗ್ ಮಾಡುವುದು ದೈಹಿಕವಾಗಿ ಸಾಕಷ್ಟು ಶ್ರಮದಾಯಕವಾಗಿತ್ತು ಎಂಬುದನ್ನೂ ಮಂಧನಾ ಇದೇ ವೇಳೆ ಒಪ್ಪಿಕೊಂಡರು.
ಇಂದು ವಾತಾವರಣವು ಹಬೆ ತುಂಬಿದ ಪೆಟ್ಟಿಗೆಯಂತೆಯೇ (steam box) ಭಾಸವಾಯಿತು. ದುಬೈನಲ್ಲಿನ ವಿಪರೀತ ಬಿಸಿಲು ಮತ್ತು ಆರ್ದ್ರತೆಯಿಂದಾಗಿ ಪರಿಸ್ಥಿತಿ ಸ್ವಲ್ಪ ಕಠಿಣವಾಗಬಹುದು. ಆದರೆ ಅದೃಷ್ಟವಶಾತ್, ನನಗೆ ಕೆಲವು ಬೌಂಡರಿಗಳು ಮತ್ತು ಸಿಕ್ಸರ್‌ಗಳು ಸಿಕ್ಕವು. ಹಾಗಾಗಿ ಹೆಚ್ಚು ಬಾರಿ ಎರಡು ರನ್‌ಗಳಿಗಾಗಿ ಓಡುವ ಅಗತ್ಯ ಬೀಳಲಿಲ್ಲ. ಆದರೆ ಹೌದು, ದೀರ್ಘಕಾಲದವರೆಗೆ ಬ್ಯಾಟಿಂಗ್ ಮಾಡಲು ಇವು ಖಂಡಿತವಾಗಿಯೂ ಸ್ವಲ್ಪ ಸವಾಲಿನ ಪರಿಸ್ಥಿತಿಗಳೇ ಎಂದು ನಾನು ಹೇಳಬಲ್ಲೆ' ಎಂದು ಅವರು ಹೇಳಿದರು.