ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಟೆಸ್ಟ್ ಕೋಚ್ ಹಾಗೂ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಜೇಸನ್ ಗಿಲೆಸ್ಪಿ, ಜಾಗತಿಕವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮಾನ ಕಳೆದಿದ್ದು, ಪಿಸಿಬಿ ವಿರುದ್ಧ ಸ್ಫೋಟಕ ಆರೋಪಗಳ ಮಾಡಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇನ್ನೂ ತನಗೆ ಸಾವಿರಾರು ಡಾಲರ್‌ಗಳ ಹಣ ಪಾವತಿಸಬೇಕಿದೆ ಎಂದು ಅವರು ಬಹಿರಂಗಪಡಿಸಿದ್ದು, PCBಯಲ್ಲಿ ಅಕೀಬ್ ಜಾವೇದ್ ಮುಖ್ಯ ಆಯ್ಕೆದಾರರಾಗಿ ನೇಮಕಗೊಂಡ ಬಳಿಕ ಪರಿಸ್ಥಿತಿ ಸಂಪೂರ್ಣ ಬದಲಾಗಿತ್ತು ಎಂದು ಹೇಳಿದ್ದಾರೆ.
‘ದಿ ಟೆಲಿಗ್ರಾಫ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಗಿಲೆಸ್ಪಿ, “ಅಕೀಬ್ ಜಾವೇದ್ ಅವರ ನೇಮಕಾತಿ ಪಾಕಿಸ್ತಾನ ಕ್ರಿಕೆಟ್‌ನ ಸಂಪೂರ್ಣ ಚಿತ್ರಣವನ್ನೇ ಬದಲಿಸಿತು. ಆ ಕ್ಷಣದಿಂದ ಪಾಕಿಸ್ತಾನ ಕ್ರಿಕೆಟ್‌ನೊಂದಿಗಿನ ನನ್ನ ಸಂಬಂಧ ಸಂಪೂರ್ಣವಾಗಿ ಬದಲಾಯಿತು. ಅಕೀಬ್ ಬಂದು ಎಲ್ಲವನ್ನೂ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಎಲ್ಲದರ ಜವಾಬ್ದಾರಿಯೂ ಅವರ ಬಳಿಯೇ ಇದೆ ಎಂಬಂತೆ ನನಗೆ ಅನಿಸಿತು” ಎಂದು ಹೇಳಿದ್ದಾರೆ.
‘ನನ್ನ ಜವಾಬ್ದಾರಿಗಳನ್ನೇ ಕಿತ್ತುಕೊಂಡರು’
ಆರಂಭದಲ್ಲಿ ಟೆಸ್ಟ್ ತಂಡದ ಆಟಗಾರರು ಹಾಗೂ ಸಿಬ್ಬಂದಿಯ ನಿರ್ವಹಣೆ, ಆಯ್ಕೆ ಪ್ರಕ್ರಿಯೆಯಲ್ಲಿ ಪಾತ್ರ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಹೊಂದಿದ್ದ ಗಿಲೆಸ್ಪಿ, ಕ್ರಮೇಣ ತಮ್ಮ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಒಂದೊಂದಾಗಿ ಕಳೆದುಕೊಂಡಿದ್ದಾಗಿ ಹೇಳಿದ್ದಾರೆ.
“ಟೆಸ್ಟ್ ತಂಡವನ್ನು ನೋಡಿಕೊಳ್ಳುವುದರಿಂದ ಹಿಡಿದು ಆಟಗಾರರು ಮತ್ತು ಸಿಬ್ಬಂದಿಯ ನಿರ್ವಹಣೆ, ಆಯ್ಕೆಯಲ್ಲಿ ಪಾತ್ರವಹಿಸುವವರೆಗೆ ನನ್ನ ಜವಾಬ್ದಾರಿಗಳಿದ್ದವು. ಕೊನೆಗೆ ಯಾವುದರಲ್ಲೂ ನನಗೆ ಯಾವುದೇ ಪಾತ್ರವೇ ಉಳಿಯಲಿಲ್ಲ. ಈ ಅನುಭವ ತಮ್ಮ ಮೇಲೆ ಮಾನಸಿಕವಾಗಿಯೂ ಪರಿಣಾಮ ಬೀರಿತ್ತು ಎಂದು ಗಿಲೆಸ್ಪಿ ತಿಳಿಸಿದ್ದಾರೆ.
“ಇಡೀ ಅನುಭವ ನನ್ನನ್ನು ಸಂಪೂರ್ಣವಾಗಿ ಕುಗ್ಗಿಸಿತು. ಕೋಚಿಂಗ್ ಮೇಲೆಯೇ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿತು. ಮಾನಸಿಕವಾಗಿ ಪರಿಣಾಮ ಬೀರಿತು. ನನ್ನ ಸಾಮರ್ಥ್ಯದ ಬಗ್ಗೆಯೇ ಅನುಮಾನ ಮೂಡುವಂತಾಯಿತು. ಮತ್ತೆ ಈ ಕ್ರೀಡೆಯಲ್ಲಿ ಮುಂದುವರಿಯಬೇಕೇ ಎಂಬ ಪ್ರಶ್ನೆಯೂ ನನ್ನೊಳಗೆ ಮೂಡಿತ್ತು” ಎಂದು ಅವರು ಹೇಳಿದ್ದಾರೆ.
‘PCB ಇನ್ನೂ ಸಾವಿರಾರು ಡಾಲರ್ ಕೊಡಬೇಕು’
ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಮ್ಮ ಹಣವನ್ನು ಇನ್ನೂ ಸಂಪೂರ್ಣವಾಗಿ ಪಾವತಿಸಿಲ್ಲ ಎಂದು ಗಿಲೆಸ್ಪಿ ಆರೋಪಿಸಿದ್ದಾರೆ. “PCB ಇನ್ನೂ ನನಗೆ ಸಾವಿರಾರು ಡಾಲರ್‌ಗಳನ್ನು ನೀಡಬೇಕಿದೆ. ಆದರೆ ನಾನು ಎಂದಿಗೂ ‘ಯೆಸ್‌ಮ್ಯಾನ್’ ಆಗಿರಲಿಲ್ಲ. ನನ್ನ ತತ್ವಗಳನ್ನು ನಾನು ಎಂದಿಗೂ ರಾಜಿ ಮಾಡಿಕೊಂಡಿಲ್ಲ. ನನ್ನ ವೃತ್ತಿಜೀವನದಲ್ಲೂ ಹಾಗೆಯೇ ನಡೆದುಕೊಂಡಿದ್ದೇನೆ. ಇಲ್ಲಿಯೂ ಅದನ್ನು ಬದಲಾಯಿಸಲು ಸಿದ್ಧನಿರಲಿಲ್ಲ” ಎಂದು ಅವರು ಹೇಳಿದ್ದಾರೆ.
“ನಾನು ಮೌನವಾಗಿದ್ದು ಎಲ್ಲದಕ್ಕೂ ಒಪ್ಪಿಗೆ ಸೂಚಿಸಿ ಸಂಬಳ ಪಡೆದುಕೊಂಡು ಹೋಗಬಹುದಿತ್ತು. ಆದರೆ ಅದು ನನ್ನ ಸ್ವಭಾವವಲ್ಲ. ಇನ್ನೆರಡು ತಿಂಗಳಲ್ಲಿ ನನ್ನನ್ನು ವಜಾಗೊಳಿಸುವ ಸಾಧ್ಯತೆ ಇದೆ ಎಂಬುದು ನನಗೂ ತಿಳಿದಿತ್ತು” ಎಂದು ಗಿಲೆಸ್ಪಿ ಹೇಳಿದ್ದಾರೆ.
ಅಕೀಬ್ ಜಾವೇದ್ ವಿರುದ್ಧ ಗಿಲೆಸ್ಪಿ ಗಂಭೀರ ಆರೋಪ
ಅಕೀಬ್ ಜಾವೇದ್ ತಮ್ಮ ವಿರುದ್ಧ ಹಿಂದಿನಿಂದಲೇ ನಕಾರಾತ್ಮಕವಾಗಿ ಮಾತನಾಡುತ್ತಿದ್ದರು ಎಂದು ಗಿಲೆಸ್ಪಿ ಆರೋಪಿಸಿದ್ದಾರೆ.
“ಅಕೀಬ್ ತೆರೆಮರೆಯಲ್ಲಿ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿತ್ತು. ಪಾಕಿಸ್ತಾನ ಕ್ರಿಕೆಟ್‌ನಲ್ಲಿರುವ ಕೆಲವರು ಕೂಡ ಅವರು ನನ್ನ ಹಿಂದೆ ಮಾತನಾಡುತ್ತಿದ್ದಾರೆ ಎಂದು ನನಗೆ ತಿಳಿಸಿದ್ದರು. ಅವರು ನನ್ನ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದನ್ನು ಕೇಳಿ ಬೇಸರವಾಗಿದೆ. ಇದು ಮುಂದುವರಿದರೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತೇನೆ” ಎಂದು ಅವರು ಎಚ್ಚರಿಸಿದ್ದಾರೆ.
ಅಂದಹಾಗೆ ಅಕೀಬ್ ಜಾವೇದ್ ಅವರು ಇದೀಗ PCBಯ ಹೈ ಪರ್ಫಾರ್ಮೆನ್ಸ್ ವಿಭಾಗದ ನಿರ್ದೇಶಕರಾಗಿದ್ದಾರೆ.
‘ನನ್ನನ್ನು ಸಂಪೂರ್ಣವಾಗಿ ಅವಮಾನಿಸಿ, ಮೂಲೆಗುಂಪು ಮಾಡಿದರು’
ಅಕೀಬ್ ಜಾವೇದ್ ತಮ್ಮನ್ನು “ಅವಮಾನಿಸಿ ಮತ್ತು ಮೂಲೆಗುಂಪು ಮಾಡಿದರು” ಎಂದು ಗಿಲೆಸ್ಪಿ ನೇರವಾಗಿ ಆರೋಪಿಸಿದ್ದಾರೆ. ಮೊದಲ ಭೇಟಿಯಲ್ಲೇ ಜಾವೇದ್ ತಮ್ಮ ಅಧಿಕಾರವನ್ನು ಪ್ರದರ್ಶಿಸುವ ರೀತಿಯಲ್ಲಿ ನಡೆದುಕೊಂಡಿದ್ದರು ಎಂದು ಅವರು ಹೇಳಿದ್ದಾರೆ.
“ಮೊದಲ ಸಭೆಯಲ್ಲೇ ಅವರು ತಾವೇ ಎಲ್ಲದರ ಮುಖ್ಯಸ್ಥ ಎಂಬುದನ್ನು ತೋರಿಸಲು ಪ್ರಯತ್ನಿಸಿದರು. ಅವರು ಏನು ಮಾಡಬೇಕು ಎಂಬುದನ್ನು ಹೇಳುತ್ತಿದ್ದರು. ನಾನು ಆರಂಭದಲ್ಲಿ ಕೇಳಿಸಿಕೊಂಡು ಸರಿ ಎಂದು ಒಪ್ಪಿಕೊಂಡೆ. ಆದರೆ ಇದು ಪದೇ ಪದೆ ನಡೆಯತೊಡಗಿತು. ಅವರ ಕೆಲವು ಅಭಿಪ್ರಾಯಗಳಿಗೆ ನಾನು ವಿರೋಧ ವ್ಯಕ್ತಪಡಿಸಿದೆ. ಆಗಲೇ ಇದು ಮುಂದೆ ಕೆಲಸ ಮಾಡುವುದಿಲ್ಲ ಎಂಬ ಭಾವನೆ ನನಗೆ ಬಂದಿತ್ತು. ಅಕೀಬ್ ಜಾವೇದ್ ಅವರ ನಿರ್ಧಾರಗಳಲ್ಲಿ ಯಾವುದೇ ಸಹಕಾರ ಅಥವಾ ಚರ್ಚೆಗೆ ಅವಕಾಶ ಇರಲಿಲ್ಲ ಎಂದು ಗಿಲೆಸ್ಪಿ ಹೇಳಿದ್ದಾರೆ.
‘ಅಕೀಬ್ ಇರುವವರೆಗೂ ಪಾಕ್ ಕ್ರಿಕೆಟ್ ಉದ್ಧಾರ ಆಗಲ್ಲ
ಪಾಕಿಸ್ತಾನ ಕ್ರಿಕೆಟ್‌ನ ಇಂದಿನ ಪರಿಸ್ಥಿತಿಗೆ ಅಕೀಬ್ ಜಾವೇದ್ ಅವರೇ ಪ್ರಮುಖ ಕಾರಣ ಎಂದು ಗಿಲೆಸ್ಪಿ ಆರೋಪಿಸಿದ್ದಾರೆ.
“ಈಗ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ನಡೆಯುತ್ತಿರುವುದನ್ನು ನೋಡಿದಾಗ ನನಗೆ ತುಂಬಾ ನೋವಾಗುತ್ತದೆ. ಪರಿಸ್ಥಿತಿ ಗೊಂದಲಮಯವಾಗಿದೆ. ಇದರ ಮೂಲ ಕಾರಣ ನನಗೆ ಗೊತ್ತಿದೆ. ಅದು ಅಕೀಬ್ ಜಾವೇದ್. ಅವರೇ ಸಮಸ್ಯೆ. ಅವರು ಇರುವವರೆಗೂ ಪಾಕಿಸ್ತಾನ ಕ್ರಿಕೆಟ್ ಮುಂದಕ್ಕೆ ಹೋಗುವುದಿಲ್ಲ, ಬದಲಾಗಿ ಹಿಂದುಳಿಯುತ್ತಲೇ ಇರುತ್ತದೆ” ಎಂದು ಅವರು ಹೇಳಿದ್ದಾರೆ.
ಕಚೇರಿಯಲ್ಲಿ ಕುಳಿತು ನಾಯಕನ ಆಯ್ಕೆ ಸರಿಯಲ್ಲ
PCBಯಲ್ಲಿ ಅಧಿಕಾರಿಗಳು ಮತ್ತು ಮಂಡಳಿ ಸದಸ್ಯರು ಕಚೇರಿಯಲ್ಲಿ ಕುಳಿತು ನಾಯಕನನ್ನು ಆಯ್ಕೆ ಮಾಡುವ ಪದ್ಧತಿಯನ್ನೂ ಅವರು ಟೀಕಿಸಿದ್ದಾರೆ. “ಸರಿಯಾದ ಕೋಚ್‌ರನ್ನು ನೇಮಿಸಿ, ಅವರಿಗೆ ಸಮಯ ನೀಡಿ. ಪರಿಸ್ಥಿತಿ ಸ್ಥಿರವಾದ ಬಳಿಕ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನೂ ಕೋಚ್‌ಗೆ ನೀಡಿ. ಆ ಮೂಲಕ ಪಾಕಿಸ್ತಾನ ಕ್ರಿಕೆಟ್ ಅನ್ನು ಪುನರ್‌ನಿರ್ಮಿಸಿ ಮುಂದೆ ಕೊಂಡೊಯ್ಯಬೇಕು. ಸದ್ಯದ ಪರಿಸ್ಥಿತಿಯಲ್ಲಿ ತಂಡ ಎಲ್ಲಿಗೂ ಹೋಗುತ್ತಿಲ್ಲ” ಎಂದು ಗಿಲೆಸ್ಪಿ ಹೇಳಿದ್ದಾರೆ.