'ಹನುಮಾನ್ ಚಾಲೀಸಾ ಹೇಳಬೇಕು'; ನವರಾತ್ರಿ ಗರ್ಬಾಗೆ ಮುಸ್ಲಿಮರಿಗೆ ನಿರ್ಬಂಧ? VHP ಕರೆ ಬೆಂಬಲಿಸಿದ ಮಹಾರಾಷ್ಟ್ರ ಸಚಿವ, ಹೇಳಿದ್ದೇನು?

ಗರ್ಬಾ ಮತ್ತು ದಾಂಡಿಯಾ ಸೇರಿದಂತೆ ಇಂತಹ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ‘ಲವ್ ಜಿಹಾದ್’ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ರಾಣೆ ಆರೋಪಿಸಿದ್ದಾರೆ.
Maharashtra minister backs VHP's call to bar Muslims from Navratri
ಮಹಾರಾಷ್ಟ್ರದಲ್ಲಿ ನವರಾತ್ರಿ ಗರ್ಬಾ ಆಚರಣೆ
Updated on

ಮುಂಬೈ: ಮುಂಬರುವ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ನಡೆಯಲಿರುವ ಗರ್ಬಾ ಮತ್ತು ದಾಂಡಿಯಾ ಕಾರ್ಯಕ್ರಮಗಳಿಗೆ ಮುಸ್ಲಿಮರ ಪ್ರವೇಶ ನಿರ್ಬಂಧಿಸುವ ವಿಶ್ವ ಹಿಂದೂ ಪರಿಷತ್‌ (VHP) ಕರೆಯನ್ನು ಮಹಾರಾಷ್ಟ್ರ ಸಚಿವ ಹಾಗೂ ಬಿಜೆಪಿ ನಾಯಕ ನಿತೇಶ್ ರಾಣೆ ಬೆಂಬಲಿಸಿದ್ದಾರೆ.

ಗರ್ಬಾ ಮತ್ತು ದಾಂಡಿಯಾ ಸೇರಿದಂತೆ ಇಂತಹ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ‘ಲವ್ ಜಿಹಾದ್’ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ರಾಣೆ ಆರೋಪಿಸಿದ್ದಾರೆ.

ಕಾರ್ಯಕ್ರಮಗಳಿಗೆ ಆಗಮಿಸುವವರ ಗುರುತನ್ನು ಪರಿಶೀಲಿಸಬೇಕು ಹಾಗೂ ಪ್ರವೇಶಕ್ಕೂ ಮುನ್ನ ಹನುಮಾನ್ ಚಾಲೀಸಾ ಪಠಿಸುವಂತೆ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಸೋಮವಾರ ಸುದ್ದಿಸಂಸ್ಥೆ ಜೊತೆ ಸಂದರ್ಶನದಲ್ಲಿ ಮಾತನಾಡಿದ ರಾಣೆ, ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ತಮ್ಮ ಗುರುತನ್ನು ಸಾಬೀತುಪಡಿಸಬೇಕು ಎಂದು ಒತ್ತಾಯಿಸಿದರು.

Maharashtra minister backs VHP's call to bar Muslims from Navratri
ಮಧ್ಯಪ್ರದೇಶ: ಗರ್ಬಾ ನೃತ್ಯ ಮಾಡುವಾಗ ಏಕಾಏಕಿ ಕುಸಿದು ಬಿದ್ದು 19 ವರ್ಷದ ನವ ವಿವಾಹಿತೆ ಸಾವು! Viral Video

ಲವ್ ಜಿಹಾದ್?

‘ಲವ್ ಜಿಹಾದ್’ ಎಂಬ ಪದವನ್ನು ಬಲಪಂಥೀಯ ಸಂಘಟನೆಗಳು ಬಳಸುತ್ತಿದ್ದು, ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಪ್ರೀತಿಯ ಹೆಸರಿನಲ್ಲಿ ಸಂಬಂಧಕ್ಕೆ ಸೆಳೆದು ಧರ್ಮಾಂತರಕ್ಕೆ ಒಳಪಡಿಸುವ ಉದ್ದೇಶ ಹೊಂದಿದ್ದಾರೆ ಎಂಬ ಆರೋಪವನ್ನು ಸೂಚಿಸಲು ಈ ಪದ ಬಳಕೆಯಾಗುತ್ತದೆ.

ಮುಸ್ಲಿಮರಿಗೆ ಗರ್ಬಾ ಪ್ರವೇಶ ಇಲ್ಲ ಎಂದಿದ್ದ VHP

ಮುಂಬರುವ ನವರಾತ್ರಿ ಸಂದರ್ಭದಲ್ಲಿ ರಾಜ್ಯದಾದ್ಯಂತ ನಡೆಯುವ ಗರ್ಬಾ ಮತ್ತು ದಾಂಡಿಯಾ ಕಾರ್ಯಕ್ರಮಗಳಿಗೆ ಮುಸ್ಲಿಮರಿಗೆ ಪ್ರವೇಶ ನೀಡಬಾರದು ಎಂದು VHP ಕಳೆದ ವಾರ ಘೋಷಿಸಿತ್ತು.

ಕಾರ್ಯಕ್ರಮಗಳ ಆಯೋಜಕರಿಗೆ ಕೆಲವು ‘ಮಾರ್ಗಸೂಚಿ’ಗಳನ್ನು ನೀಡಿದ್ದ VHP, ಗರ್ಬಾಗೆ ಆಗಮಿಸುವವರ ಗುರುತನ್ನು ಆಧಾರ್ ಕಾರ್ಡ್ ಮೂಲಕ ಪರಿಶೀಲಿಸುವಂತೆ ಸೂಚಿಸಿತ್ತು. ಅಲ್ಲದೆ, ಭಾಗವಹಿಸುವವರ ಹಣೆಗೆ ತಿಲಕ ಇಡುವಂತೆಯೂ ಸಂಘಟನೆ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ VHPಯ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿರುವ ನಿತೇಶ್ ರಾಣೆ, “ಮೂರ್ತಿ ಪೂಜೆಯನ್ನು ಅನುಸರಿಸದವರು ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು. ಗರ್ಬಾಗೆ ಬರುವವರು ತಮ್ಮ ಗುರುತನ್ನು ತೋರಿಸಿ, ಹನುಮಾನ್ ಚಾಲೀಸಾ ಪಠಿಸಿದ ಬಳಿಕವೇ ಪ್ರವೇಶ ನೀಡಬೇಕು” ಎಂದು ಹೇಳಿದ್ದಾರೆ.

ಅಂದಹಾಗೆ ಮಹಾರಾಷ್ಟ್ರದಲ್ಲಿ ನವರಾತ್ರಿ ಹಬ್ಬ ಅಕ್ಟೋಬರ್ 11ರಿಂದ ಆರಂಭವಾಗಲಿದೆ.

ಗಣೇಶೋತ್ಸವದ DJ ವಿಚಾರದಲ್ಲೂ ರಾಣೆ ಹೇಳಿಕೆ

ಮುಂಬರುವ ಗಣೇಶೋತ್ಸವದ ವೇಳೆ DJ ಹಾಗೂ ಧ್ವನಿವರ್ಧಕಗಳ ಬಳಕೆಗೆ ನಿರ್ಬಂಧ ಹೇರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಣೆ, ಎಲ್ಲ ಧಾರ್ಮಿಕ ಮೆರವಣಿಗೆಗಳಿಗೂ ಒಂದೇ ರೀತಿಯ ನಿಯಮ ಅನ್ವಯಿಸಬೇಕು ಎಂದು ಹೇಳಿದ್ದಾರೆ.

ಗಣೇಶೋತ್ಸವದ ಸಂದರ್ಭದಲ್ಲಿ DJಗೆ ಅನುಮತಿ ಇಲ್ಲ ಎಂದಾದರೆ, ಈದ್ ಮೆರವಣಿಗೆಗಳಿಗೂ ಅದೇ ರೀತಿಯ ನಿರ್ಬಂಧ ಅನ್ವಯಿಸಬೇಕು ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಈದ್ ಮೆರವಣಿಗೆಗಳ ವೇಳೆ ತಡರಾತ್ರಿವರೆಗೂ ದೊಡ್ಡ ಶಬ್ದದಲ್ಲಿ ಸಂಗೀತ ಹಾಕಲಾಗಿತ್ತು ಎಂದು ರಾಣೆ ಆರೋಪಿಸಿದರು. ಹಿಂದೂಗಳು ನ್ಯಾಯಾಲಯದ ಆದೇಶ ಹಾಗೂ ಶಬ್ದ ಮಾಲಿನ್ಯ ನಿಯಮಗಳನ್ನು ಪಾಲಿಸುತ್ತಾರೆ ಎಂದೂ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com