ದಸರಾ

ಅಂಬಾರಿ ಹೊರುವ ಅರ್ಜುನನಿಗೆ ನೀಡುವ ತರಬೇತಿ ಏನು?

Srinivasamurthy VN

ದಸರಾ ಗಜಪಡೆಗಳ ಪೈಕಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಅರ್ಜುನನಿಗೆ ವಿಶೇಷ ಸತ್ಕಾರಗಳು ನಡೆಯುತ್ತವೆ. ತಿಂಗಳ ಮುಂಚಿತವಾಗಿ ಮೈಸೂರಿಗೆ ಆಗಮಿಸುವ ಗಜಪಡೆಗೆ ಆರಂಭದಿಂದಲೇ ಭೂರಿ ಭೋಜನ ನೀಡುವ ಮೂಲಕ ಜಂಬೂ ಸವಾರಿಗೆ ಸಿದ್ಧಪಡಿಸಲಾಗುತ್ತದೆ.

ಇನ್ನು ಅಂಬಾರಿ ಹೊರುವ ಅರ್ಜುನನಿಂಗಂತೂ ದಸರಾ ವೇಳೆ ವಿಶೇಷ ಆತಿಥ್ಯ. ಉದ್ದು. ಗೋಧಿ, ಕುಸುಲಕ್ಕಿ, ಈರುಳ್ಳಿ, ಹಸಿ ತರಕಾರಿಗಳ ದೊಡ್ಡ ಉಂಡೆ ಜೊತೆಗೆ ಬೆಣ್ಣೆ, ಭತ್ತ, ತೆಂಗಿನಕಾಯಿ, ಹಿಂಡಿ, ಕಬ್ಬು, ಬೆಲ್ಲ, ಮೊದಲಾದ ಆಹಾರಗಳನ್ನು ಅರ್ಜುನನಿಗೆ ನೀಡಲಾಗುತ್ತದೆ. ಹಸಿರು ಮೇವುಗಳಾಗಿ ಆಲದ ಮರದ ಸೊಪ್ಪು, ಹುಲ್ಲನ್ನು ಆಗಾಗ ನೀಡಲಾಗುತ್ತಿದೆ. ದಿನಕ್ಕೆರಡು ಬಾರಿ ಸ್ನಾನ ಮಾಡಿಸಲಾಗುತ್ತದೆ.

ಇನ್ನು ಜಂಬೂ ಸವಾರಿಯಲ್ಲಿ ಯಾವುದೇ ಅಡೆತಡೆಗೆ ಬಗ್ಗದೆ ಮುನ್ನಡೆಯಲು ಅರ್ಜುನನಿಗೆ 750 ಕೆಜಿ ತೂಕದ ಮರದ ಅಂಬಾರಿಯನ್ನು ಕಟ್ಟಿ, ಉಳಿದ ಆನೆಗಳಿಗೆ ಮರಳಿನ ಮೂಟೆ (ಗಾದಿ ಹಮ್ದಾ)ಯನ್ನು ಕಟ್ಟಿ ದಿನಕ್ಕೆರಡು ಬಾರಿ ತಾಲೀಮು ನೀಡಲಾಗುತ್ತದೆ. ಹಬ್ಬದ ದಿನ ಜಂಬೂ ಸವಾರಿ ನಡೆಯುವ ಅಷ್ಟೂ ಹಾದಿಗಳನ್ನು ಮತ್ತೆ-ಮತ್ತೆ ಅರ್ಜುನನಿಗೆ ಪರಿಚಯಿಸಲಾಗುತ್ತದೆ. ಜನಜಂಗುಳಿ ಮತ್ತು ಕೂಗಾಟಗಳನ್ನು ತಡೆದುಕೊಂಡು ಅರ್ಜುನ ಅಂಬಾರಿಯನ್ನು ಹೊತ್ತು ನಡೆಯಬೇಕಿರುತ್ತದೆ. ಹೀಗಾಗಿ ಅರ್ಜುನ ಆದಷ್ಟೂ ಶಾಂತಿಯಿಂದಿರುವಂತೆ ನೋಡಿಕೊಳ್ಳು ಜವಾಬ್ದಾರಿ  ಮಾವುತರು ಮತ್ತು ಕಾವಾಡಿಗಳದ್ದು.

ಪ್ರತಿದಿನ ಅರಮನೆ ಆವರಣದಿಂದ ಆರಂಭವಾಗುವ ಈ ತಾಲೀಮು ಸುಮಾರು 6 ಕಿ.ಮೀ. ದೂರವಿರುವ ಬನ್ನಿಮಂಟಪದವರೆಗೆ ದಿನನಿತ್ಯ ನಡೆಯುತ್ತದೆ. ಈ ರೀತಿಯ ಮರಳು ತಾಲೀಮನ್ನು ಸುಮುಹೂರ್ತದಲ್ಲಿ ಆರಂಭಿಸಲಾಗುತ್ತದೆ.

ಮರದ ಅಂಬಾರಿ ಕಟ್ಟಿ ಅರ್ಜುನನಿಗೆ ತರಬೇತಿ
ಹಬ್ಬದ ದಿನದಂದು ಅಂಬಾರಿ ಹೊರುವ ಅರ್ಜುನನಿಗೆ ತರಬೇತಿಯಲ್ಲಿ ಚಿನ್ನದ ಅಂಬಾರಿಯ ಬದಲಿಗೆ ಅಷ್ಟೇ ತೂಕದ ಮರದ ಅಂಬಾರಿಯನ್ನು ಹೊರಿಸಲಾಗುತ್ತದೆ. ಮೊದಲಿಗೆ ಅರ್ಜುನನ ಮೇಲೆ ಸುಮಾರು 300 ಕೆಜಿ ಭಾರದ 'ಗಾದಿ ಹಮ್ದಾ' ಎಂದು ಕರೆಯುವ ಮರಳು ತುಂಬಿದ ಚೀಲವನ್ನು ಅದರ ಬೆನ್ನ ಮೇಲೆ ಹಾಸಿ ಮಾರುದ್ದದ ಹಗ್ಗದಿಂದ ಆನೆಯ ಹೊಟ್ಟೆ ಭಾಗಕ್ಕೆ ಸುತ್ತಿ ಬಿಗಿಯಾಗಿ ಕಟ್ಟಲಾಗುತ್ತದೆ. ಬಳಿಕ ಗೋಣಿ ಚೀಲಗಳನ್ನು ಹಾಸಿ ಅದರ ಮೇಲೆ ಕಬ್ಬಿಣದ ತೊಟ್ಟಿಲನ್ನು ಕಟ್ಟಲಾಗುತ್ತದೆ. ಇದಕ್ಕಾಗಿ ಹತ್ತಕ್ಕೂ ಹೆಚ್ಚು ಮಾವುತರು ದುಡಿಯುತ್ತಾರೆ.

ಮೊದಲಿಗೆ ಅರ್ಜುನನ ಮೇಲೆ ಇಡುವ ಮರಳಿನ ಚೀಲವನ್ನು ತೊಟ್ಟಿಯಲ್ಲಿ ಇಡಲಾಗುತ್ತದೆ. ಪ್ರತಿ ದಿನವೂ ಚೀಲಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗಲಾಗುತ್ತದೆ. ಈ ರೀತಿಯ ಭಾರವನ್ನು ಅರ್ಜುನ ಮಾತ್ರವಲ್ಲದೆ, ಇತರ ಕೆಲ ಆನೆಗಳಿಗೂ ಕಟ್ಟಿ ಸುಮಾರು 15 ದಿನಗಳ ಕಾಲ ಸರತಿಯ ಸಾಲಿನಲ್ಲಿ ತಾಲೀಮು ನಡೆಸಲಾಗುತ್ತದೆ. ಸುಮಾರು ನೂರು ಕೆಜಿಯಿಂದ ಆರಂಭವಾಗುವ ತಾಲೀಮು 750 ಕೆಜಿಗೆ ಬಂದು ತಲುಪುತ್ತದೆ. ಆ ನಂತರ ಮರದ ಅಂಬಾರಿಯನ್ನು ಕಟ್ಟಿ ತಾಲೀಮು ನಡೆಸಲಾಗುತ್ತದೆ. ಇದಾದ ಬಳಿಕ ದಸರಾ ದಿನದಂದು ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಜಂಬೂ ಸವಾರಿ ನಡೆಸಲಾಗುತ್ತದೆ. ಅರಮನೆ ಆವರಣದಿಂದ ಹೊರಡುವ ಈ ಜಂಬೂ ಸವಾರಿ ಸಯ್ಯಾಜಿರಾವ್ ರಸ್ತೆಯ ಮೂಲಕ ಬನ್ನಿಮಂಟಪ ತಲುಪುತ್ತದೆ.

SCROLL FOR NEXT