ಜಿಲ್ಲಾ ಸುದ್ದಿ

ಮರಳು ಮಾಫಿಯಾ ವಿರುದ್ಧ ಸಿಐಡಿ, ಸದನ ಸಮಿತಿ ತನಿಖೆ

Lakshmi R

ವಿಧಾನಸಭೆ: ಅಕ್ರಮ ಗಣಿಗಾರಿಕೆ ನಡೆಸಿ ಹೊರರಾಜ್ಯಗಳಿಗೆ ಮರಳು ಸಾಗಿಸುತ್ತಿರುವ ವಿಷಯ ಗುರುವಾರ ಕಲಾಪದಲ್ಲಿ ಪ್ರತಿಧ್ವನಿಸಿತು. ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಸರ್ಕಾರ ಸಿಐಡಿ ತನಿಖೆ ನೀಡಿದ್ದಲ್ಲದೆ, ಅಕ್ರಮದ ಕುರಿತು ವರದಿ ನೀಡಲು ಸದನ ಅಧ್ಯಯನ ಸಮಿತಿ ರಚಿಸಲು ತೀರ್ಮಾನಿಸಿದೆ.

ತನಿಖೆಗೆ ಸದನ ಸಮಿತಿ ರಚಿಸಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದು ಬಾವಿಗಿಳಿದು ಧರಣಿ ನಡೆಸಿದ ಹಿನ್ನೆಲೆಯಲ್ಲಿ ಕಲಾಪ ಮುಂದೂಡಿದ ಸ್ಪೀಕರ್, ನಂತರ ಸರ್ವಪಕ್ಷ ಸಭೆ ನಡೆಸಿ, ಸರ್ಕಾರ ಈ ಕುರಿತು ಸಿಐಡಿ ತನಿಖೆ ಹಾಗೂ ಸದನ ಅಧ್ಯಯನ ಸಮಿತಿ ರಚಿಸುವ ನಿರ್ಧಾರ ಪ್ರಕಟಿಸಿತು. ನಂತರ ಕಲಾಪ ಸುಲಲಿತಾಗಿ ಮುಂದುವರೆಯಿತು.

ರಾಜ್ಯಾದ್ಯಂತ ಕೋಟ್ಯಾಂತರ ರು.ಮೌಲ್ಯದ ಮರಳನ್ನು ಮಹಾರಾಷ್ಟ್ರ ಮತ್ತು ಕೇರಳಕ್ಕೆ ಸಾಗಿಸಲಾಗುತ್ತಿದೆ. ಇದನ್ನು ನಿಯಂತ್ರಿಸಬೇಕಾದ ಐದು ಇಲಾಖೆಗಳು ನಿಷ್ಕ್ರಿಯವಾಗಿವೆ ಎಂದು ಪ್ರತಿಪಕ್ಷ ಮುಖಂಡರು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಪುತ್ರ ಅಕ್ರಮ ಮರಳಉಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದಾಗ ಸದನದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ವಾಕ್ಸಮರ. ಇದರಿಂದ ಎರಡು ಬಾರಿ ಕಲಾಪ ಮುಂದೂಡಲಾಯಿತು.

ಕಳಂಕಿತ ಸಚಿವರ ಕೈಬಿಡಿ
ಏತನ್ಮಧ್ಯೆ ಕಳಂಕಿತ ಸಚಿವರ ವಿಚಾರ ಮೇಲ್ಮನೆಯಲ್ಲಿ ಗುರುವಾರ ಪ್ರತಿಧ್ವನಿಸಿತಲ್ಲದೇ, ಇವರನ್ನು ಸಂಪುಟದಿಂದ ಕೈಬಿಡುವಂತೆ ಬಿಜೆಪಿ ಪಟ್ಟು ಹಿಡಿಯಿತು. ಆಡಳಿತ ಪಕ್ಷ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸದನದಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ವಾಕ್ಸಮರ ನಡೆಯಿತು.

ಕೆ.ಎಸ್.ಈಶ್ವರಪ್ಪ ಅವರು ಸಕ್ಕರೆ ಸಚಿವ ಮಹದೇವ ಪ್ರಸಾದ ವಿರುದ್ಧ, ಗೋ.ಮಧುಸೂದನ್ ಅವರು ವಕ್ಫ್ ಸಚಿವ ಖಮರುಲ್ ಇಸ್ಲಾಂ ಹಾಗೂ ಅಶ್ವತ್ಥ ನಾರಾಯಣ ಅವರು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಅವರ ವಿರುದ್ಧ ಚರ್ಚೆಗೆ ಅವಕಾಶ ನೀಡುವಂತೆ ನಿಯಮ 307ರ ಅಡಿ ನಿಲುವಳಿ ಮಂಡನೆಗೆ ನೋಟಿಸ್ ನೀಡಿದ್ದರು.

SCROLL FOR NEXT