ಜಿಲ್ಲಾ ಸುದ್ದಿ

ಮೈಸೂರು ಇನ್ನು ದಂತ ನಗರಿ!

ಮೈಸೂರು ಇನ್ನು ಐವರಿ ಸಿಟಿ! ಯಾಕೆ ಅಂತ ಕೇಳಿ. ಇನ್ನು ಮುಂದೆ ಮೈಸೂರಿನಲ್ಲಿ ನಿರ್ಮಾಣವಾಗುವ ಕಟ್ಟಡಗಳಿಗೆ ದಂತ (ಐವರಿ) ಬಣ್ಣ ಲೇಪಿಸಲಾಗುತ್ತದಂತೆ. ಈ ಮೂಲಕ ಪಾರಂಪರಿಕ ಸ್ಪರ್ಶ ನೀಡಿ, ಅರಮನೆ ನಗರಿಗೆ ಇನ್ನಷ್ಟು ಮೆರುಗು ನೀಡುವ ಉದ್ದೇಶವನ್ನು ಮೈಸೂರು ಮಹಾನಗರ ಪಾಲಿಕೆ ಹೊಂದಿದೆ. ಈ ದಂತದ ಕನಸನ್ನು ತೆರೆದಿಟ್ಟವರು ಪಾಲಿಕೆ ಆಯುಕ್ತ ಡಾ.ಸಿ.ಜೆ. ಬೆಟಸೂರಮಠ್.

ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಕ್ರೆಡಾಯ್ ಸಂಸ್ಥೆ ಇತ್ತೀಚೆಗೆ ಮೈಸೂರಿನಲ್ಲಿ ಆಯೋಜಿಸಿದ್ದ ಮೈಬಿಲ್ಡ್ 14 ಸಮಾರೋಪ ಸಮಾರಂಭದಲ್ಲಿ ಆಯುಕ್ತರು ಈ ಸುಂದರ ಪರಿಕಲ್ಪನೆಯನ್ನು ಬಿಚ್ಚಿಟ್ಟರು.

ಮೈಸೂರಿನಲ್ಲೇ ಸುಮಾರು 200 ಪಾರಂಪರಿಕ ಕಟ್ಟಡಗಳ ಪೈಕಿ ಶೇ.70 ಕಟ್ಟಡಗಳು ಐವರಿ ಬಣ್ಣದಿಂದ ಕೂಡಿವೆ. ಉಳಿದ ಶೇ.30 ಕಟ್ಟಡಗಳ ಬಣ್ಣ ಬದಲಿಸಲು ಚಿಂತಿತಸಲಾಗಿದೆ. ಮೈಸೂರಿಗೆ ಪಾರಂಪರಿಕ ನಗರ, ಅರಮನೆ ನಗರ ಎಂಬೆಲ್ಲ ಹೆಸರು ಇರುವಂತೆಯೇ ಐವರಿ ಸಿಟಿ ಎಂಬ ಹೆಸರೂ ಬರಬೇಕು. ಆದ್ದರಿಂದ ಮುಂದಿನ ದಿನಗಳಲ್ಲಿ ನಿರ್ಮಾಣವಾಗುವ ಕಟ್ಟಡಗಳ ಹೊರ ಭಾಗದ ಬಣ್ಣ ಐವರಿಯಿಂದ ಕೂಡಿದ್ದರೆ ಸಾಕು.

ಅಲ್ಲದೆ ಕಟ್ಟಡಗಳು ಮತ್ತು ಅಪಾರ್ಟ್ಮೆಂಟ್ಗಳಿಗೆ ಪಾರಂಪರಿಕ ಸ್ಪರ್ಶ ನೀಡಲು ಮುಂದಾಗಬೇಕು. ಈ ಸಂಬಂಧ ಈಗಗಲೇ ಮೈಸೂರು ಪಾಲಿಕೆ ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಾಗಲೇ ಈ ನಿಯಮ ವಿಧಿಸಲು ತೀರ್ಮಾನಿಸಲಾಗುತ್ತಿದೆ. ಹಂತ ಹಂತವಾಗಿ ಈಗಾಗಲೇ ನಿರ್ಮಾಣವಾಗಿರುವ ಕಟ್ಟಡಗಳೂ ಐವರಿ ಬಣ್ಣಕ್ಕೆ ಬದಲಾಗಬೇಕು. ಕಟ್ಟಡ ನಕಾಶೆಗಳಿಗೆ ಆನ್ಲೈನ್ ಮೂಲಕವೇ ಒಪ್ಪಿಗೆ ಸೂಚಿಸಲು ತೀರ್ಮಾನಿಸಲಾಗಿದೆ. ಕಟ್ಟಡ ನಿರ್ಮಾಣದ ವೇಳೆ ನಿಯಮ ಉಲ್ಲಂಘಿಸದಂತೆ ಆರಂಭದಲ್ಲೇ ಎಚ್ಚರವಹಿಸಬೇಕು ಎನ್ನುತ್ತಾರವರು.

SCROLL FOR NEXT