ಜಿಲ್ಲಾ ಸುದ್ದಿ

ವರ್ಷಾಚರಣೆಗೆ ಡ್ರೋನ್ ಕಣ್ಗಾವಲು

Vishwanath S

ಬೆಂಗಳೂರು: ನಗರದಲ್ಲಿ ವರ್ಷಾಚರಣೆಗೆ ಮೊಟ್ಟ ಮೊದಲ ಬಾರಿಗೆ ಡ್ರೋನ್ ಏರಿಯಲ್ ಕ್ಯಾಮೆರಾ ಬಳಸಲಾಗುತ್ತಿದೆ. ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಈ ಕ್ಯಾಮೆರಾ ಬಳಸಲಾಗುತ್ತಿದೆ ಎಂದು ಕೇಂದ್ರ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ರಿಮೋಟ್ ನಿಯಂತ್ರಿತ ಈ ಏರಿಯಲ್ ಕ್ಯಾಮೆರಾಗಳು 50 ಅಡಿ ಎತ್ತರದವರೆಗೂ ಹಾರಾಡುವ ಸಾಮರ್ಥ್ಯ ಹೊಂದಿವೆ. ಕಡಿಮೆ ಬೆಳಕಿನಲ್ಲಿಯೂ ಚಿತ್ರೀಕರಣ ಮಾಡಲಿವೆ. ಕಂಟ್ರೋಲ್ ರೂಂನಲ್ಲಿ ಕುಳಿತು ಪೊಲೀಸರ ತಂಡ ವಿಡಿಯೋ ವೀಕ್ಷಿಸುತ್ತದೆ. ಯಾವುದೇ ಸ್ಥಳದಲ್ಲಿ ಅನುಮಾನಾಸ್ಪದ ಚಟುವಟಿಕೆ, ಗಲಾಟೆ ನಡೆಯುತ್ತಿದ್ದರೆ ಕೂಡಲೇ ವೈರ್‌ಲೆಸ್ ಮೂಲಕ ಈ ಸ್ಥಳಕ್ಕೆ ಪೊಲೀಸರು ತೆರಳಲು ಸೂಚಿಸಲಾಗುತ್ತದೆ.

ಹೊಸ ವರ್ಷಕ್ಕೆ ಕುಡಿದು ವಾಹನ ಚಲಾಯಿಸಿದರೆ ಜೈಲು ಸೇರ್ತೀರಿ!
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭದ್ರತೆ ಹಾಗೂ ಸುರಕ್ಷತೆಗಾಗಿ ಕೈಗೊಂಡ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ. ದಯಾನಂದ ಹೇಳಿದ್ದಿಷ್ಟು:

* ಹೊಸ ವರ್ಷಾಚರಣೆ ವೇಳೆ ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಜೈಲಲ್ಲಿ ಕಾಲ ಕಳೆಯಬೇಕಾಗುತ್ತದೆ. ಇದಕ್ಕೆ ಮೋಟಾರು ವಾಹನ ಕಾಯ್ದೆಯಲ್ಲಿ ಅವಕಾಶವಿದೆ.

* ಈ ನಿಯಮ ಜನವರಿ 1ರ ನಸುಕಿನವರೆಗೂ ಮುಂದುವರಿಯಲಿದೆ.

* ಅಪ್ರಾಪ್ತರು ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ, ಡ್ರ್ಯಾಗ್ ರೇಸಿಂಗ್, ವ್ಹೀಲಿಂಗ್ ಮಾಡಿದರೆ ಪಾಲಕರ ಮೇಲೂ ಪ್ರಕರಣ.

* ವ್ಹೀಲಿಂಗ್ ಡ್ಯ್ರಾಗ್ ರೇಸ್, ತ್ರಿಬಲ್ ರೈಡಿಂಗ್ ಹಾಗೂ ನಗರದ ಎಲ್ಲ ಫ್ಲೈ ಓವರ್‌ನಲ್ಲಿ ಡಿ. 31 ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆವರೆಗೆ ವಾಹನಗಳ ಸಂಚಾರವನ್ನು ನಿಷೇಧ.
ಏರ್‌ಪೋರ್ಟ್ ಫ್ಲೈಓವರ್‌ನಲ್ಲಿ ಕಾರು ಸೇರಿ ಲಘು ವಾಹನ ಹೊರತುಪಡಿಸಿ ಇತರೆ ವಾಹನಗಳು ಪ್ರವೇಶ ನಿಷೇಧಿಸಲಾಗಿದೆ.

ಭದ್ರತೆಗಾಗಿ ಎಷ್ಟು ಪೊಲೀಸರು?
20 ಎಸಿಪಿ, 91 ಪೊಲೀಸ್ ಇನ್ಸ್‌ಪೆಕ್ಟರ್, 220 ಪಿಎಸ್‌ಐ, 333 ಎಎಸ್‌ಐ, 992 ಹೆಡ್ ಕಾನ್ಸ್‌ಟೇಬಲ್, 2092 ಪೊಲೀಸ್ ಕಾನ್ಸ್‌ಟೇಬಲ್, 86 ಮಹಿಳಾ ಸಿಬ್ಬಂದಿ, 1300 ಹೋಮ್‌ಗಾರ್ಡ್ಸ್ ಮತ್ತು 47 ಕೆಎಸ್‌ಆರ್‌ಪಿ ಸಿಎಆರ್ ತುಕಡಿಗಳು.

SCROLL FOR NEXT